ನಟ ಹೃತಿಕ್‌ ರೋಷನ್‌ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಿದ ದೆಹಲಿ ಹೈಕೋರ್ಟ್‌

ಎಐ ಬಳಸಿ ತಮ್ಮ ವ್ಯಕ್ತಿತ್ವವನ್ನು ಸೃಷ್ಟಿಸಿ ಅಶ್ಲೀಲ ಮತ್ತು ಅಸಭ್ಯ ವಿಷಯಗಳಿಗೆ ಬಳಕೆ ಮಾಡುವ ಮೂಲಕ ತಮ್ಮ ಖ್ಯಾತಿಗೆ ಧಕ್ಕೆ ಉಂಟುಮಾಡುತ್ತಿದ್ದು, ವಾಣಿಜ್ಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೃತಿಕ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.
Hrithik Roshan with Delhi HC
Hrithik Roshan with Delhi HCFacebook
Published on

ಬಾಲಿವುಡ್ ನಟ ಹೃತಿಕ್ ರೋಷನ್ ಅವರ ವ್ಯಕ್ತಿತ್ವ ಹಕ್ಕುಗಳಿಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ರಕ್ಷಣೆ ನೀಡಿದೆ [ಹೃತಿಕ್ ರೋಷನ್ vs ಅಶೋಕ್ ಕುಮಾರ್/ಜಾನ್ ಡೋ ಮತ್ತು ಇತರರು].

ಅಕ್ಟೋಬರ್ 15 ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಅವರು, ಹೃತಿಕ್ ರೋಷನ್ ಅವರ ಹೆಸರು, ಹೋಲಿಕೆ, ಚಿತ್ರ, ಧ್ವನಿ, ವ್ಯಕ್ತಿತ್ವ ಅಥವಾ ಅವರ ವ್ಯಕ್ತಿತ್ವದ ಯಾವುದೇ ಇತರ ಅಂಶಗಳನ್ನು ಬಳಸಿಕೊಂಡು ಯಾವುದೇ ರೀತಿಯ ಸರಕುಗಳನ್ನು ಸೃಷ್ಟಿಸುವುದನ್ನು, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುವುದನ್ನು, ಡೀಪ್‌ಫೇಕ್‌, ಮೆಷಿನ್‌ ಲರ್ನಿಂಗ್‌, ಫೇಸ್‌ ಮಾರ್ಫಿಂಗ್ ಅಥವಾ ಜಿಫ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಜಾನ್ ಡೋ ಪ್ರತಿವಾದಿಗಳು (ಅಪರಿಚಿತ ವ್ಯಕ್ತಿ/ಸಂಸ್ಥೆಗಳು) ಬಳಸುವುದನ್ನು ನಿರ್ಬಂಧಿಸಿದ್ದಾರೆ.

ನಟನ ಗುಣಲಕ್ಷಣಗಳು ಅವರ ವ್ಯಕ್ತಿತ್ವ ಹಕ್ಕುಗಳಾಗಿದ್ದು ಅವುಗಳನ್ನು ನಕಲು ಮಾಡುವುದು, ಅಶ್ಲೀಲ, ಮಾರ್ಫ್ ಮಾಡಿದ ಮತ್ತು ವಿಕೃತ ವಿಷಯಗಳಿಗೆ ಬಳಕೆ ಮಾಡುವುದರ ವಿರುದ್ಧ ರಕ್ಷಿಸಬಹುದಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ.

"ಮೇಲ್ನೋಟಕ್ಕೆ ವಾದಿಯ ಹೆಸರು ಸೇರಿದಂತೆ ಅವರ ವ್ಯಕ್ತಿತ್ವದ ಲಕ್ಷಣಗಳು ಮತ್ತು/ಅಥವಾ ಆ ಅಂಶಗಳು, ಧ್ವನಿ, ಚಿತ್ರ, ಛಾಯಾಚಿತ್ರ ಅಥವಾ ಹೋಲಿಕೆ ಹಾಗೂ ಇತರ ಗುಣಲಕ್ಷಣಗಳು ವಾದಿಯ ವ್ಯಕ್ತಿತ್ವದ ಹಕ್ಕುಗಳಾಗಿದ್ದು ರಕ್ಷಿಸಬಹುದಾದ ಅಂಶಗಳಾಗಿವೆ. ವಾದಿಯು ತಮ್ಮ ವ್ಯಕ್ತಿತ್ವವನ್ನು ಎಐ ಅಥವಾ ಇತರ ರೀತಿಯಲ್ಲಿ ಸೃಷ್ಟಿಸಲಾದ ನಕಲು ಮಾಡುವಿಕೆ, ಸುಳ್ಳು, ಅಶ್ಲೀಲ, ಮಾರ್ಫ್ ಮಾಡಿದ ಮತ್ತು ವಿರೂಪಗೊಂಡ ತಮ್ಮ ಖ್ಯಾತಿ, ಪ್ರತಿಷ್ಠೆಗೆ ಧಕ್ಕೆ ತರುವಂತಹ ವಿಷಯದ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ" ಎಂದು ನ್ಯಾಯಾಲಯ ಹೇಳಿದೆ.

ಇದಾಗಲೇ ಬಾಲಿವುಡ್‌ನ ಪ್ರತಿಷ್ಠಿತ ವ್ಯಕ್ತಿಗಳಾದ ಅನಿಲ್ ಕಪೂರ್, ಕರಣ್ ಜೋಹರ್, ಜಾಕಿ ಶ್ರಾಫ್ ಅವರ ವ್ಯಕ್ತಿತ್ವ ಹಕ್ಕುಗಳಿಗೆ ಸಂಬಂಧಿಸಿದ ಇದೇ ರೀತಿಯ ಪ್ರಕರಣಗಳಲ್ಲಿ ಮಾಡಿದ ತನ್ನ ಅವಲೋಕನಗಳನ್ನು ನ್ಯಾಯಾಲಯ ಉಲ್ಲೇಖಿಸಿದ್ದು, ವಾಣಿಜ್ಯ ಲಾಭಕ್ಕಾಗಿ ಅವರ ವ್ಯಕ್ತಿತ್ವ ಹಕ್ಕುಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುವುದನ್ನು ತಡೆಯಾಜ್ಞೆಯ ಮೂಲಕ ರಕ್ಷಿಸಬಹುದು ಎಂದು ಹೇಳಿದೆ.

ನ್ಯಾಯಾಲಯದ ಮಧ್ಯಂತರ ಆದೇಶವು ಮಾರ್ಚ್ 27, 2026 ರವರೆಗೆ ಮಾನ್ಯವಾಗಿರಲಿದ್ದು, ಈ ವಿಷಯವು ಮುಂದಿನ ವಿಚಾರಣೆಗೆ ಬರಲಿದೆ.

ಕೃತಕ ಬುದ್ಧಿಮತ್ತೆ (ಎಐ) ಬಳಸಿ ತಮ್ಮ ವ್ಯಕ್ತಿತ್ವವನ್ನು ಸೃಷ್ಟಿಸಿ ಅಶ್ಲೀಲ ಮತ್ತು ಅಸಭ್ಯ ವಿಷಯಗಳಿಗೆ ಬಳಕೆ ಮಾಡುವ ಮೂಲಕ ತಮ್ಮ ಖ್ಯಾತಿಗೆ ಹಾನಿ ಉಂಟುಮಾಡುತ್ತಿದ್ದು, ವಾಣಿಜ್ಯ ಲಾಭಕ್ಕಾಗಿ ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೃತಿಕ್‌ ರೋಷನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅಕ್ರಮ ಲಾಭಕ್ಕಾಗಿ ತನ್ನ ಅಭಿಮಾನಿಗಳನ್ನು ವಂಚಿಸಲು ತನ್ನ ಇಮೇಜ್, ವ್ಯಕ್ತಿತ್ವ, ಧ್ವನಿ ಮತ್ತು ಇತರ ಗುಣಲಕ್ಷಣಗಳನ್ನು ಬಳಸಿಕೊಳ್ಳುವ ಮೂಲಕ ಸರಕುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅವರು ಕೆಲವು ವೆಬ್‌ಸೈಟ್‌ಗಳು, ಮಾರಾಟಗಾರರು ಮತ್ತು ಜಾನ್ ಡೋ ಪ್ರತಿವಾದಿಗಳ ವಿರುದ್ಧ ಮೊಕದ್ದಮೆ ಹೂಡಿದ್ದರು.

ಅಲ್ಲದೆ, ತಾನು ಕಂಪನಿಯ ಸ್ಥಾಪಕ ಎಂದು ಸಾರ್ವಜನಿಕರಿಗೆ ತಪ್ಪಾಗಿ ಬಿಂಬಿಸಿದ್ದಕ್ಕಾಗಿ ಮಾರ್ಕ್‌ಮಾನಿಟರ್.ಇಂಕ್ ಸಂಸ್ಥೆಯ ವಿರುದ್ಧವೂ ಹೃತಿಕ್‌ ರೋಷನ್‌ ಮೊಕದ್ದಮೆ ಹೂಡಿದ್ದಾರೆ. ಇಂತಹ ಅನಧಿಕೃತ ಕೃತ್ಯಗಳು 1957 ರ ಹಕ್ಕುಸ್ವಾಮ್ಯ ಕಾಯ್ದೆ, 1999 ರ ಟ್ರೇಡ್ ಮಾರ್ಕ್ಸ್ ಕಾಯ್ದೆಯ ಉಲ್ಲಂಘನೆಯಾಗಿದ್ದು ತಮ್ಮ ಗೌಪ್ಯತೆ, ಪ್ರತಿಷ್ಠೆ ಮತ್ತು ಖ್ಯಾತಿಗೆ ಧಕ್ಕೆಯೊದಗಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯವು ಸಾಮಾಜಿಕ ಮಾಧ್ಯಮಗಳಲ್ಲಿನ ಹೃತಿಕ್ ರೋಷನ್ ಅವರ ಅಭಿಮಾನಿ ಪುಟಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ದೂರ ಉಳಿಯಿತು.

"ಈ ಹಂತದಲ್ಲಿ ನಾವು ಅಭಿಮಾನಿ ಪುಟಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ. ಅವರ ಹಕ್ಕುಗಳ ಬಗ್ಗೆ ನಾವು ನಿರ್ಧರಿಸುತ್ತೇವೆ. ನಾವು ಬಿಎಸ್‌ಐ (ಸಾಮಾಜಿಕ ಮಾಧ್ಯಮಗಳ ಸೂಚ್ಯಂಕ) ವಿವರಗಳನ್ನು ತಿಳಿದುಕೊಳ್ಳುತ್ತೇವೆ. ಇನ್‌ಸ್ಟಾಗ್ರಾಮ್ ವಾಣಿಜ್ಯೀಕರಣಕ್ಕಾಗಿ ಮಾತ್ರವಲ್ಲ, ಜನರು ಅದನ್ನು ವಿನೋದಕ್ಕಾಗಿಯೂ ಬಳಸುತ್ತಾರೆ. ಅದು ಮಾನಹಾನಿಕರವಲ್ಲ. ವಾಣಿಜ್ಯೀಕರಣ, ಅಶ್ಲೀಲ, ಮಾರ್ಫ್ ಮಾಡಿದವುಗಳ ವಿರುದ್ಧದ ದೂರನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ ಆದರೆ, ಅಭಿಮಾನಿ ಕ್ಲಬ್ ಪುಟಗಳನ್ನು ತೆಗೆದುಹಾಕುವಂತೆ ಕೋರುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಅಭಿಮಾನಿ ಪುಟಗಳನ್ನು ವ್ಯಕ್ತಿತ್ವ ಹಕ್ಕುಗಳ ವಾಣಿಜ್ಯ ಬಳಕೆ ಅಥವಾ ಮಾನಹಾನಿಯೊಂದಿಗೆ ಹೋಲಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

Kannada Bar & Bench
kannada.barandbench.com