ನಟ ವಿವೇಕ್ ಒಬೆರಾಯ್ ಅವರ ವ್ಯಕ್ತಿತ್ವ ಹಕ್ಕುಗಳಿಗೆ ದೆಹಲಿ ಹೈಕೋರ್ಟ್‌ ರಕ್ಷಣೆ

ಒಬೆರಾಯ್ ಅವರ ಹೆಸರು, ಧ್ವನಿ, ಚಿತ್ರ, ರೂಪಸಾದೃಶ್ಯ ಹಾಗೂ ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ಬಳಸದಂತೆ ನ್ಯಾಯಾಲಯ ನಿಷೇಧಿಸಿದೆ.
Vivek Oberoi and Delhi High Court
Vivek Oberoi and Delhi High Court facebook
Published on

ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ [ವಿವೇಕ್‌ ಆನಂದ್‌ ಒಬೆರಾಯ್‌ ಮತ್ತು ಕಲೆಕ್ಟರ್‌ ಬಜಾರ್‌ ಇನ್ನಿತರರ ನಡುವಣ ಪ್ರಕರಣ].

ಒಬೆರಾಯ್ ಅವರ ಅನುಮತಿ ಇಲ್ಲದೆ ವಾಣಿಜ್ಯ ಲಾಭಕ್ಕಾಗಿ ಅವರ ಹೆಸರು, ಧ್ವನಿ, ಚಿತ್ರ, ರೂಪಸಾದೃಶ್ಯ ಅಥವಾ ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಯಾವುದೇ ಅಂಶಗಳನ್ನು ಬಳಸದಂತೆ ಫೆಬ್ರವರಿ 5ರಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ಆದೇಶಿಸಿದರು.

Also Read
ವಿದ್ಯಾರ್ಥಿಗಳಿಂದ ವೈಯಕ್ತಿಕ ಮಾಹಿತಿ ಸಂಗ್ರಹ: ತಮಿಳುನಾಡು ಸರ್ಕಾರದ ಕ್ರಮವನ್ನು ರದ್ದುಪಡಿಸಿದ ಮದ್ರಾಸ್‌ ಹೈಕೋರ್ಟ್‌

ಕೃತಕ ಬುದ್ಧಿಮತ್ತೆ (ಎಐ), ಜನರೇಟಿವ್ ಕೃತಕ ಬುದ್ಧಿಮತ್ತೆ (ಜೆನ್‌ಎಐ), ಮೆಷಿನ್ ಲರ್ನಿಂಗ್, ಡೀಪ್‌ಫೇಕ್‌ಗಳು ಹಾಗೂ ಫೇಸ್ ಮಾರ್ಫಿಂಗ್ ಸೇರಿದಂತೆ ಯಾವುದೇ ತಂತ್ರಜ್ಞಾನದ ಮೂಲಕ ಅವರ ವ್ಯಕ್ತಿತ್ವದ ಅಂಶಗಳನ್ನು ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಒಬೆರಾಯ್ ಅವರು ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಕೆಲವು ಜಾಲತಾಣಗಳು ಮತ್ತು ಸಂಸ್ಥೆಗಳ ವಿರುದ್ಧ ಪ್ರತಿಬಂಧಕಾಜ್ಞೆ ಕೋರಿ ದಾವೆ ಹೂಡಿದ್ದರು. ಆ ಸಂಸ್ಥೆಗಳು ತಮ್ಮನ್ನು ಅನುಕರಣೆ ಮಾಡುತ್ತಿವೆ, ತಮ್ಮ ಹೆಸರು ವ್ಯಕ್ತಿತ್ವ ಬಳಸಿಕೊಂಡು ಅನುಮತಿ ಇಲ್ಲದೆ ವಸ್ತುಗಳನ್ನು ಮಾರಾಟ ಮಾಡುತ್ತಿವೆ, ಅವಮಾನಕಾರಿಯಾದ ಎಐ  ವಸ್ತುವಿಷಯಗಳು ಹಾಗೂ ಡೀಪ್‌ಫೇಕ್‌ಗಳನ್ನು ಬಳಸಿ ತಮ್ಮ “ಅಭಿರುಚಿಹೀನ” ಚಿತ್ರಗಳನ್ನು ಸೃಷ್ಟಿಸುತ್ತಿರುವುದಾಗಿ ವಿವೇಕ್‌ ದೂರಿದ್ದರು.

ಇಂತಹ ಹಕ್ಕು ಉಲ್ಲಂಘನೆ ಮಾಡುವ ಎಲ್ಲಾ ವ್ಯಕ್ತಿಗಳ ವಿರುದ್ಧ ಸಮಗ್ರ ಆದೇಶ ನೀಡುವಂತೆ ಒಬೆರಾಯ್ ಮನವಿ ಮಾಡಿದ್ದರು. ಇಂತಹ ಚಟುವಟಿಕೆಗಳ ಪರಿಣಾಮವಾಗಿ ತಮ್ಮ ಗೌರವ, ವ್ಯವಹಾರ ಹಾಗೂ ಪ್ರತಿಷ್ಠೆಗೆ ತೊಂದರೆ ಒದಗಿದೆ ಎಂದು ಅವರು ತಿಳಿಸಿದ್ದರು.

Also Read
ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಸರ್ಕಾರಿ ಅಭಿಯೋಜಕರು, ನ್ಯಾಯಾಧೀಶರು, ತನಿಖಾಧಿಕಾರಿಗಳ ಸಭೆ ನಡೆಸಿ: ನ್ಯಾ. ಸಂದೇಶ್‌ ಸಲಹೆ

ಹಕ್ಕುಸ್ವಾಮ್ಯ ಕಾಯಿದೆಯಡಿ ಚಿತ್ರಗಳಲ್ಲಿ ತಮ್ಮ ಅಭಿನಯಕ್ಕೆ ಸಂಬಂಧಿಸಿದ ನೈತಿಕ ಹಕ್ಕುಗಳಿಗೂ ರಕ್ಷಣೆಯನ್ನು ಅವರು ಬೇಡಿದ್ದರು. ಜೊತೆಗೆ “ವಿವೇಕ್ ಒಬೆರಾಯ್” ಎಂಬ ತಮ್ಮ ಹೆಸರು ವಾಣಿಜ್ಯ ಚಿಹ್ನೆಯಾಗಿ ರಕ್ಷಣೆ ಪಡೆಯುವಂತಹುದು ಎಂದು ಅವರು ವಾದಿಸಿದ್ದರು.

ವಾದಗಳನ್ನು ಪುರಸ್ಕರಿಸಿದ ನ್ಯಾಯಾಲಯ ವಿವೇಕ್‌ ಅವರು ಪ್ರಸಿದ್ಧ ನಟ ಮತ್ತು ದಾನಿಯಾಗಿದ್ದು, ತಮ್ಮ ಚಿತ್ರ, ಧ್ವನಿ ಮತ್ತು ಹೆಸರಿನ ಮೇಲೆ ವಿಶೇಷ ಹಕ್ಕುಗಳನ್ನು ಹೊಂದಿದ್ದಾರೆ ಎಂದು ತೀರ್ಪು ನೀಡಿದೆ. ತಡೆಯಾಜ್ಞೆ ನಿರಾಕರಿಸಿದರೆ ಅವರ ಪ್ರತಿಷ್ಠೆಗೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗುವ ಸಾಧ್ಯತೆ ಇರುವುದರಿಂದ ಸಮಂಜಸತೆಯ ಸಮತೋಲನ ಅವರ ಪರ ವಾಲುತ್ತದೆ ಎಂದಿದೆ. ಅಂತೆಯೇ ಅವರ ವ್ಯಕ್ತಿತ್ವ ಹಕ್ಕಿಗೆ ರಕ್ಷಣೆ ನೀಡಿ ಆದೇಶ ಹೊರಡಿಸಿದೆ.

Kannada Bar & Bench
kannada.barandbench.com