
ಸಾಕು ಪ್ರಾಣಿ ವಿಚಾರವಾಗಿ ನೆರೆಹೊರೆಯ ಇಬ್ಬರು ವ್ಯಕ್ತಿಗಳು ಪರಸ್ಪರ ಹೂಡಿದ್ದ ಎಫ್‌ಐಆರ್‌ಗಳನ್ನು ಈಚೆಗೆ ರದ್ದುಗೊಳಿಸಿದ ದೆಹಲಿ ಹೈಕೋರ್ಟ್, ಎರಡೂ ಬದಿಯ ಪಕ್ಷಕಾರರು ಸರ್ಕಾರವು ನಡೆಸುತ್ತಿರುವ ಮಕ್ಕಳ ಆರೈಕೆ ಸಂಸ್ಥೆಯ ಮಕ್ಕಳು ಹಾಗೂ ಸಿಬ್ಬಂದಿಗೆ ಪಿಜ್ಜಾ ಮತ್ತು ಮಜ್ಜಿಗೆ ಕೊಡಿಸಬೇಕೆಂದು ಷರತ್ತು ವಿಧಿಸಿದೆ [ಅರವಿಂದ್ ಕುಮಾರ್ ಮತ್ತಿತರು ಹಾಗೂ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ದೆಹಲಿಯ ಜಿಟಿಬಿ ಆಸ್ಪತ್ರೆ ಬಳಿಯ ಸಂಸ್ಕಾರ್ ಆಶ್ರಮದಲ್ಲಿರುವ ಮಕ್ಕಳಿಗೆ ಪಿಜ್ಜಾ ಜೊತೆಗೆ ಅಮುಲ್‌ನ ಮಜ್ಜಿಗೆ ಪೊಟ್ಟಣಗಳನ್ನು ಹಂಚಬೇಕು. ದೂರುದಾರರಲ್ಲೊಬ್ಬರು ಪಿಜ್ಜಾ ತರಬೇಕು ಅದನ್ನು ಎಲ್ಲಾ ದೂರುದಾರರು ಮತ್ತು ಆರೋಪಿಗಳು ಒಟ್ಟಿಗೆ ನೀಡುವ ಮೂಲಕ ಸಮುದಾಯ ಸೇವೆ ಮಾಡಬೇಕು ಎಂದು ನ್ಯಾಯಮೂರ್ತಿ ಅರುಣ್ ಮೋಂಗಾ ನಿರ್ದೇಶಿಸಿದರು.
ಸಾಕುಪ್ರಾಣಿ ನಿರ್ವಹಣೆ ವಿಚಾರವಾಗಿ ಜಗಳ ನಡೆದ ಹಿನ್ನೆಲೆಯಲ್ಲಿ ಎರಡೂ ಕಡೆಯವರು ಎಫ್‌ಐಆರ್ ದಾಖಲಿಸಿದ್ದರು. ಇಬ್ಬರೂ ಪರಸ್ಪರ ಹಲ್ಲೆ, ಬೆದರಿಕೆ ಮತ್ತು ಅನುಚಿತ ವರ್ತನೆಯ ಆರೋಪ ಮಾಡಿದ್ದರು. ಆದರೆ ಬಳಿಕ ಪ್ರಕರಣ ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದು ನೆರೆಹೊರೆಯ ಕಲಹದಿಂದ ಉದ್ಭವಿಸಿದ ಪ್ರಕರಣವಾಗಿದ್ದು ಈಗಾಗಲೇ ಇತ್ಯರ್ಥಗೊಂಡಿದೆ. ಹೀಗಾಗಿ ಕ್ರಿಮಿನಲ್ ಪ್ರಕರಣ ಮುಂದುವರೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನ್ಯಾಯಾಲಯ ಹೇಳಿತು.
ದೂರುದಾರರಲ್ಲಿ ಒಬ್ಬರು ಪಿಜ್ಜಾ ಮಾರಾಟ ಮಾಡುತ್ತಾರೆ ಎಂಬುದನ್ನು ಅರಿತ ನ್ಯಾಯಾಲಯ ಎರಡೂ ಕಡೆಯವರು ಮಕ್ಕಳಿಗೆ ಪಿಜ್ಜಾ ಹಾಗೂ ಮಜ್ಜಿಯನ್ನು ಮಕ್ಕಳ ಆರೈಕೆ ಹೊಣೆ ಹೊತ್ತಿರುವ ಸರ್ಕಾರವು ನಡೆಸುತ್ತಿರುವ ಸಂಸ್ಥೆಗೆ ನೀಡುವಂತೆ ಆದೇಶಿಸಿತು. ತನ್ನ ಆದೇಶ ಪಾಲನೆಯಾಗಿದೆಯೇ ಎಂಬುದನ್ನು ತನಿಖಾಧಿಕಾರಿ ಖಚಿತಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿತು.
[ಆದೇಶದ ಪ್ರತಿ]