ಆರೋಪಿಗೆಯೊಬ್ಬನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆತ ಹತ್ತು ಸಸಿಗಳನ್ನು ನೆಟ್ಟು ಮುಂದಿನ ಮೂರು ವರ್ಷಗಳ ಕಾಲ ಪೋಷಿಸಬೇಕು ಎಂದು ಶುಕ್ರವಾರ ಷರತ್ತು ವಿಧಿಸಿರುವ ಮಧ್ಯಪ್ರದೇಶ ಹೈಕೋರ್ಟ್ ಮಾಸಿಕವಾಗಿ ಗಿಡಗಳ ಪೋಷಣೆಯ ಸ್ಥಿತಿಗತಿ ವಿವರ ನೀಡುವಂತೆ ಆದೇಶಿಸಿದೆ [ಎಡಲ್ ಸಿಂಗ್ ಮತ್ತು ಮಧ್ಯಪ್ರದೇಶದ ಸರ್ಕಾರ ನಡುವಣ ಪ್ರಕರಣ].
ಹಣ್ಣು ಬಿಡುವ ಮರಗಳು ಅಥವಾ ಬೇವು ಇಲ್ಲವೇ ಅಶ್ವತ್ಥದ 10 ಸಸಿಗಳನ್ನು ನೆಡುವಂತೆ ಆರೋಪಿಗಳಿಗೆ ಸೂಚಿಸಿದ ನ್ಯಾಯಮೂರ್ತಿ ಆನಂದ್ ಪಾಠಕ್ ಅವರು ಮರಗಳನ್ನು ರಕ್ಷಿಸಲು ಬೇಲಿ ಹಾಕುವ ವ್ಯವಸ್ಥೆಗೂ ಆದೇಶಿಸಿದರು.
“ಆದೇಶ ಪಾಲಿಸಲಾಗಿದೆಯೇ ಎಂಬುದನ್ನುಖಚಿತಪಡಿಸಿಕೊಳ್ಳುವುದಕ್ಕಾಗಿ ಅರ್ಜಿದಾರರು ನೆಟ್ಟ ಗಿಡಗಳ ಎಲ್ಲಾ ಫೋಟೊಗಳನ್ನು ಆತ ಜೈಲಿನಿಂದ ಬಿಡುಗಡೆಯಾದ ದಿನದಿಂದ 30 ದಿವಸದೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಂತರ, ಮುಂದಿನ ಮೂರು ವರ್ಷಗಳವರೆಗೆ, ಅರ್ಜಿದಾರರು ಪ್ರತಿ ತಿಂಗಳು ನ್ಯಾಯಾಲಯಕ್ಕೆ ಪ್ರಗತಿ ವರದಿ ಸಲ್ಲಿಸಬೇಕು” ಎಂದು ಆದೇಶಿಸಿದೆ.
ಉಪಗ್ರಹ ಇಲ್ಲವೇ ಜಿಯೋ-ಟ್ಯಾಗಿಂಗ್ ಅಥವಾ ಜಿಯೋ ಫೆನ್ಸಿಂಗ್ ಮೂಲಕ ತೋಟದ ಮೇಲ್ವಿಚಾರಣೆ ಮಾಡಲು ಹೈಕೋರ್ಟ್ ಉಸ್ತುವಾರಿಯಲ್ಲಿ ಸಿದ್ಧಪಡಿಸಿದ ಮೊಬೈಲ್ ಅಪ್ಲಿಕೇಶನ್ (NISARG ಅಪ್ಲಿಕೇಶನ್) ಡೌನ್‌ಲೋಡ್ ಮಾಡುವ ಮೂಲಕ ಆರೋಪಿಗಳು ಸಸಿ ನೆಟ್ಟು ಪೋಷಿಸುತ್ತಿರುವ ಛಾಯಾಚಿತ್ರ ಸಲ್ಲಿಸಬೇಕು ಎಂದು ಪೀಠ ಹೇಳಿದೆ.
ಆರೋಪಿ ಎಡಲ್ ಸಿಂಗ್ ಎಂಬಾತನ ಮೇಲೆ 1959ರ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆತ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ. ತಾನು ತಪ್ಪು ಮಾಡುವ ಮೂಲಕ ಕಠಿಣ ರೀತಿಯಲ್ಲಿ ಪಾಠ ಕಲಿತಿದ್ದು ನನ್ನ ಹಾದಿ ಸರಿಪಡಿಸಿಕೊಳ್ಳುತ್ತೇನೆ. ಮುಂದೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ತನ್ನನ್ನು ಮನ್ನಿಸುವಂತೆ ಆತ ನ್ಯಾಯಾಲಯವನ್ನು ಕೋರಿದ್ದ.
ವಿಚಾರಣೆ ವೇಳೆ ಪ್ರಕರಣದ ಸಂದರ್ಭ ಸನ್ನಿವೇಶಗಳನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿ ಪುರಸ್ಕರಿಸಿತು. ಸಸಿ ನೆಡುವ ಷರತ್ತಿನ ಜೊತೆಗೆ ₹1,00,000 ವೈಯಕ್ತಿಕ ಬಾಂಡ್ ನೀಡುವಂತೆ ಅದು ಸೂಚಿಸಿದೆ.
ಆದರೆ ಇದರರ್ಥ ಸಮಾಜ ಸೇವೆ ಮಾಡಲು ಉದ್ದೇಶಿಸಿದ ವ್ಯಕ್ತಿಗೆ ಅರ್ಹತೆ ಪರಿಗಣಿಸದೆ ಜಾಮೀನು ನೀಡಲಾಗುತ್ತದೆ ಎಂದಲ್ಲ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.