5ಜಿ ಪ್ರಕರಣ: ನಟಿ ಜೂಹಿ ಚಾವ್ಲಾಗೆ ವಿಧಿಸಿದ್ದ ದಂಡದ ಮೊತ್ತ ₹20 ಲಕ್ಷದಿಂದ ₹2 ಲಕ್ಷಕ್ಕೆ ಇಳಿಸಿದ ದೆಹಲಿ ಹೈಕೋರ್ಟ್

ಇದೇ ವೇಳೆ 5ಜಿ ವಿರುದ್ಧ ದಾವೆ ಹೂಡಲು ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಪೀಠ ಜೂಹಿ ಅವರಿಗೆ ಸೂಚಿಸಿತು.
Delhi High Court + Juhi Chawla

Delhi High Court + Juhi Chawla

Published on

5ಜಿ ತಂತ್ರಜ್ಞಾನ ಬಳಕೆ ಪ್ರಶ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜೂಹಿ ಚಾವ್ಲಾಗೆ ವಿಧಿಸಿದ್ದ ದಂಡವನ್ನು ದೆಹಲಿ ಹೈಕೋರ್ಟ್ ಗುರುವಾರ ₹20 ಲಕ್ಷದಿಂದ ₹2 ಲಕ್ಷಕ್ಕೆ ಇಳಿಸಿದೆ. ಕಾನೂನು ನೆರವಿನ ಅಗತ್ಯವಿರುವ ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳ ಪರವಾಗಿ ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ (ಡಿಎಸ್ಎಲ್ಎಸ್ಎ) ಕೆಲಸ ಮಾಡಲು ಜೂಹಿ ಅವರು ಒಪ್ಪಿದ ಬಳಿಕ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

ಜೂಹಿ ಅವರು ಡಿಎಸ್ಎಲ್ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜ ಸೇವೆ ಮಾಡಬೇಕು ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ಪೀಠ ಸೂಚಿಸಿತು. ಅಲ್ಲದೆ “ಜೂಹಿ ಅವರು ಸಲ್ಲಿಸಿರುವ ಅರ್ಜಿ ಕ್ಷುಲ್ಲಕವಾದದ್ದು ಮತ್ತು ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ” ಎಂದು ಈ ಹಿಂದೆ ಹೈಕೋರ್ಟ್‌ನ ಏಕಸದಸ್ಯ ಪೀಠ ಮಾಡಿದ್ದ ಪ್ರತಿಕೂಲ ಟೀಕೆಯನ್ನು ತೆಗೆದುಹಾಕಿತು.

Also Read
ಮಾದಕ ವಸ್ತು ಪ್ರಕರಣ: ಆರ್ಯನ್‌ ಖಾನ್‌ಗೆ ಜಾಮೀನು ಭದ್ರತೆ ನೀಡಿದ ಬಾಲಿವುಡ್‌ ನಟಿ ಜೂಹಿ ಜಾವ್ಲಾ

ನೈಜ ಕಾರಣಕ್ಕಾಗಿಯೇ ಮೊಕದ್ದಮೆ ಹೂಡಿರಬಹುದು. ಆದರೆ ಕಾನೂನು ಹಿನ್ನೆಲೆ ಅಥವಾ ಜ್ಞಾನ ಇರದ ಅರ್ಜಿದಾರರಿಗೆ ಅರ್ಜಿಯನ್ನು ರೂಪಿಸಿರಯವ ವಿಧಾನಗಳಿಂದ ಉಂಟಾಗುವ ಪರಿಣಾಮದ ಬಗ್ಗೆ ತಿಳಿದಿರಲಿಲ್ಲ ಎಂದು ತೋರುತ್ತದೆ ಎಂಬುದಾಗಿ ಅದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ 5ಜಿ ವಿರುದ್ಧ ದಾವೆ ಹೂಡಲು ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಪೀಠ ಸೂಚಿಸಿತು.

Also Read
5ಜಿ ತರಂಗಾಂತರ ಬಳಕೆ ತೀರ್ಪು: ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೂರನೇ ಮನವಿಯನ್ನೂ ಹಿಂಪಡೆದ ನಟಿ ಜೂಹಿ ಚಾವ್ಲಾ

ಕಳೆದ ವರ್ಷ ಜೂನ್‌ನಲ್ಲಿ ನ್ಯಾಯಮೂರ್ತಿ ಜೆ ಆರ್‌ ಮಿಧಾ ಅವರ ನೇತೃತ್ವದ ಏಕಸದಸ್ಯ ಪೀಠ ನೀಡಿದ್ದ ತೀರ್ಪಿನಲ್ಲಿ “ಫಿರ್ಯಾದಿಗಳು ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ರೂ. 20 ಲಕ್ಷ ದಂಡ ವಿಧಿಸಲಾಗಿದೆ. ಪ್ರಕರಣದ ವಿಚಾರಣೆಯ ಲಿಂಕ್‌ ಅನ್ನು ಜೂಹಿ ಚಾವ್ಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪ್ರಚಾರಕ್ಕಾಗಿ ದಾವೆ ಹೂಡಿರುವ ಸಾಧ್ಯತೆ ಇದೆ” ಎಂದು ಹೇಳಲಾಗಿತ್ತು.

Kannada Bar & Bench
kannada.barandbench.com