ಭಾರತದಲ್ಲಿ 5ಜಿ ತರಂಗಾಂತರ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದಂತೆ ಜುಲೈ 4ರಂದು ದೆಹಲಿ ಹೈಕೋರ್ಟ್ ತಮ್ಮ ಅರ್ಜಿಯನ್ನು ವಜಾ ಮಾಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಗುರುವಾರ ಬಾಲಿವುಡ್ ನಟಿ ಜೂಹಿ ಚಾವ್ಲಾ ಹಿಂಪಡೆದಿದ್ದಾರೆ.
5ಜಿ ತರಂಗಾಂತರ ಬಳಕೆಗೆ ಸಂಬಂಧಿಸಿದ ತೀರ್ಪಿನಲ್ಲಿ ಅರ್ಜಿ ವಜಾ ಮಾಡಲಾಗಿದೆ ಎಂಬ ಬದಲಿಗೆ ತಿರಸ್ಕರಿಸಲಾಗಿದೆ ಎಂದು ತಿದ್ದುಪಡಿ ಮಾಡುವಂತೆ ಕೋರಿ ಚಾವ್ಲಾ ಮನವಿ ಸಲ್ಲಿಸಿದ್ದರು.
ಗುರುವಾರ ಪ್ರಕರಣವು ವಿಚಾರಣೆಗೆ ಬಂದಾಗ ಚಾವ್ಲಾ ಪರ ವಕೀಲ ದೀಪಕ್ ಖೋಸ್ಲಾ ಅವರು ಅರ್ಜಿ ಹಿಂಪಡೆಯಲು ಅನುಮತಿಸುವಂತೆ ಕೋರಿದರು. ನ್ಯಾಯಾಲಯವು ಅದಕ್ಕೆ ಸಮ್ಮತಿಸಿತು.
5ಜಿ ತರಂಗಾಂತರ ಸುರಕ್ಷತೆಯ ಬಗ್ಗೆ ಖಾತರಿ ನೀಡದ ಹೊರತು ಅದನ್ನು ಬಳಕೆಗೆ ತರಲು ಅನುಮತಿ ನೀಡಬಾರದು ಎಂದು ಜೂಹಿ ಚಾವ್ಲಾ, ವೀರೇಶ್ ಮಲಿಕ್ ಮತ್ತು ಟೀನಾ ವಚನಿ ಅವರು ಹೈಕೋರ್ಟ್‌ನಲ್ಲಿ ಈ ಹಿಂದೆ ಮನವಿ ಸಲ್ಲಿಸಿದ್ದರು.
ನ್ಯಾಯಾಲಯವು ಅರ್ಜಿ ವಜಾ ಮಾಡುತ್ತಿದ್ದಂತೆ ಚಾವ್ಲಾ ಅವರು ಮೂರು ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದ್ದರು. ಒಂದರಲ್ಲಿ ನ್ಯಾಯಾಲಯದ ಶುಲ್ಕ ಹಿಂದಿರುಗಿಸುವಂತೆ, ವೆಚ್ಚ ಮನ್ನಾ ಮತ್ತು ಅರ್ಜಿ ವಜಾ ಮಾಡಲಾಗಿದೆ ಎಂಬ ಪದಕ್ಕೆ ಬದಲಾಗಿ ತಿರಸ್ಕರಿಸಲಾಗಿದೆ ಎಂದು ತಿದ್ದುಪಡಿ ಮಾಡುವಂತೆ ಕೋರಿದ್ದರು. ನ್ಯಾಯಾಲಯ ಗಂಭೀರವಾದ ಆಕ್ಷೇಪಣೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಜುಲೈ 7ರಂದು ಮೊದಲೆರಡು ಅರ್ಜಿಗಳನ್ನು ಚಾವ್ಲಾ ಹಿಂಪಡೆದಿದ್ದರು. ಈಗ ಮೂರನೇ ಅರ್ಜಿಯನ್ನು ಕೂಡ ವಾಪಸ್ ಪಡೆದಿದ್ದಾರೆ.
“ಫಿರ್ಯಾದುದಾರರ ವರ್ತನೆ ನ್ಯಾಯಾಲಯಕ್ಕೆ ಆಘಾತ ಉಂಟು ಮಾಡಿದೆ. ಮೊದಲಿಗೆ ಇದು ಕ್ಷುಲ್ಲಕ ಮನವಿಯಾಗಿದ್ದು, ಎರಡನೇಯದಾಗಿ ದಂಡ ಪಾವತಿಸಿ ಅರ್ಜಿ ಹಿಂಪಡೆಯಲು ನ್ಯಾಯಾಲಯವು ಫಿರ್ಯಾದುದಾರರಿಗೆ ಆದೇಶಿಸಿದ್ದು, ಇದುವರೆಗೂ ದಂಡ ಪಾವತಿ ಮಾಡಿಲ್ಲ. ಫಿರ್ಯಾದುದಾರರು ರೂ. 20 ಲಕ್ಷ ದಂಡ ಪಾವತಿ ಮಾಡಿದ ಬಳಿಕ ಅರ್ಜಿ ವಿಲೇವಾರಿ ಮಾಡಬಹುದು” ಎಂದು ನ್ಯಾಯಾಲಯ ಹೇಳಿತ್ತು.
ಅರ್ಜಿ ವಜಾ ಮಾಡುವಾಗ ನ್ಯಾಯಾಲಯವು ಮಾಧ್ಯಮಗಳ ಮೂಲಕ ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ಮೊಕದ್ದಮೆ ಹೂಡಿರುವ ಸಾಧ್ಯತೆ ಇದೆ ಎಂದಿತ್ತು. ಜೊತೆಗೆ ಚಾವ್ಲಾ ಮತ್ತು ಇತರೆ ಫಿರ್ಯಾದುದಾರರಿಗೆ ರೂ. 20 ಲಕ್ಷ ದಂಡ ವಿಧಿಸಿತ್ತು. “ಫಿರ್ಯಾದಿಗಳು ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರಿಗೆ ರೂ. 20 ಲಕ್ಷ ದಂಡ ವಿಧಿಸಲಾಗಿದೆ. ಪ್ರಕರಣದ ವಿಚಾರಣೆಯ ಲಿಂಕ್ ಅನ್ನು ಜೂಹಿ ಚಾವ್ಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪ್ರಚಾರಕ್ಕಾಗಿ ದಾವೆ ಹೂಡಿರುವ ಸಾಧ್ಯತೆ ಇದೆ” ಎಂದು ನ್ಯಾಯಮೂರ್ತಿ ಜೆ ಆರ್ ಮಿಧಾ ಅವರಿದ್ದ ಏಕಸದಸ್ಯ ಪೀಠ ತೀರ್ಪಿನಲ್ಲಿ ಹೇಳಿತ್ತು.