ಕಳೆದ ವರ್ಷ ನಿಗೂಢವಾಗಿ ಮೃತಪಟ್ಟಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತ ಹೆಣೆದ ʼನ್ಯಾಯ್: ದಿ ಜಸ್ಟೀಸ್ʼ ಚಿತ್ರ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಆದರೆ ಚಿತ್ರದ ಹಣಕಾಸಿನ ಖಾತೆಗಳನ್ನು ನಿರ್ವಹಿಸುವಂತೆ ನಿರ್ಮಾಪಕರಿಗೆ ಪೀಠ ಸೂಚಿಸಿದೆ.
ಸುಶಾಂತ್ ವೈಯಕ್ತಿಕ ಜೀವನ, ಹೆಸರು, ಚಿತ್ರಗಳು, ವ್ಯಂಗ್ಯ ಭಾವಚಿತ್ರ (ಕ್ಯಾರಿಕೇಚರ್), ಜೀವನಶೈಲಿ, ಅಥವಾ ಅವರನ್ನು ಹೋಲುವ ಜೀವನಾಧಾರಿತ ಚಿತ್ರ ಅಥವಾ ಕತೆಯನ್ನು ಹೆಣೆಯುವಂತಿಲ್ಲ ಎಂದು ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾ. ಸಂಜೀವ್ ನರುಲಾ ಅವರಿದ್ದ ಪೀಠ ಮಧ್ಯಂತರ ಆದೇಶ ನೀಡಿದೆ.
ಮಗನ ಸಾವಿನ ಲಾಭವನ್ನು ಅನೇಕರು ಪಡೆದುಕೊಳ್ಳಲು ಹೊರಟಿದ್ದಾರೆ. ಸುಶಾಂತ್ ಸಾವಿನ ಸಂಬಂಧ ವಿಭಿನ್ನ ಸಿದ್ಧಾಂತ/ ಕತೆಗಳನ್ನು ರೂಪಿಸುವ ಮೂಲಕ ಖ್ಯಾತಿ ಪಡೆಯಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿ ಸುಶಾಂತ್ ತಂದೆ ಈ ವರ್ಷದ ಆರಂಭದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.
ʼನ್ಯಾಯ್: ದಿ ಜಸ್ಟೀಸ್ʼ, ʼಸೂಯಿಸೈಡ್ ಆರ್ ಮರ್ಡರ್: ಎ ಸ್ಟಾರ್ ವಾಸ್ ಲಾಸ್ಟ್ʼ ʼಶಶಾಂಕ್ʼ ಹೆಸರಿನ ಚಿತ್ರಗಳು ತೆರೆಗೆ ಬರಲಿವೆ ಎಂಬ ಹಿನ್ನೆಲೆಯಲ್ಲಿ ನಾಟಕ, ಚಲನಚಿತ್ರ, ವೆಬ್ ಸರಣಿ, ಪುಸ್ತಕ, ಸಂದರ್ಶನ ಅಥವಾ ಇನ್ನಾವುದೇ ರೂಪದಲ್ಲಿ ಪ್ರಕಟವಾಗುವ ವಿಚಾರಗಳು ಸುಶಾಂತ್ ಮತ್ತು ಅವರ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತರಬಹುದು ಎಂದು ಸಿಂಗ್ ಆತಂಕ ವ್ಯಕ್ತಪಡಿಸಿದ್ದರು.
ಫಿರ್ಯಾದಿ ಪರವಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಹಾಜರಿದ್ದರು. ಎಸ್‌ಕೆವಿ ಲಾ ಆಫೀಸಸ್‌ನ ವಕೀಲರಾದ ವರುಣ್ ಸಿಂಗ್, ಅಕ್ಷಯ್ ದೇವ್, ಅಭಿಜಿತ್ ಪಾಂಡೆ, ಸಮೃದ್ಧಿ ಬೆಂಡ್ಭರ್ ಮೂಲಕ ಮೊಕದ್ದಮೆ ಹೂಡಲಾಗಿತ್ತು. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಪರವಾಗಿ ಹಿರಿಯ ವಕೀಲ ಚಂದರ್ ಲಾಲ್ ಮತ್ತು ವಕೀಲ ಹಿರೇನ್ ಕಮೋದ್ ಹಾಜರಿದ್ದರು.