ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಸಲಾಗುತ್ತಿರುವ ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸೋಮವಾರ ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು, ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. (ಅನ್ಯಾ ಮಲ್ಹೋತ್ರಾ ವರ್ಸಸ್ ಭಾರತ ಸರ್ಕಾರ).
ಸದ್ಯ ನಡೆಯುತ್ತಿರುವ ಕೆಲಸವು ಯೋಜನೆಯ ಭಾಗವಾಗಿದ್ದು, ಅದು ಅತ್ಯಂತ ಪ್ರಮುಖವಾಗಿದೆ. ಇದನ್ನು ಪ್ರತ್ಯೇಕವಾಗಿ ನೋಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಹೇಳಿದೆ.
“ಸೆಂಟ್ರಲ್ ವಿಸ್ಟಾ ಯೋಜನೆ ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಅತ್ಯಂತ ಅಗತ್ಯ ಯೋಜನೆಯಾಗಿದೆ. ಸಾರ್ವಜನಿಕರು ಅದರ ಮೇಲೆ ತುಂಬಾ ಆಸಕ್ತಿ ಹೊಂದಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ, ಸಲ್ಲಿಕೆಯಾಗಿರುವ ಮನವಿಯು ಉತ್ತಮ ಉದ್ದೇಶದಿಂದ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಬದಲಿಗೆ ಇದು ಪ್ರಚೋದಿತ ಮನವಿಯಾಗಿದೆ ಎಂದಿದ್ದು, ಅರ್ಜಿದಾರರಿಗೆ ಪೀಠವು ದಂಡ ವಿಧಿಸಿದೆ.
“ಈ ವರ್ಷದ ನವೆಂಬರ್ ಒಳಗೆ ಅವರು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಹೀಗಾಗಿ ಸಮಯ ಅತ್ಯಂತ ಮುಖ್ಯ. ಕಾರ್ಮಿಕರು ಸ್ಥಳದಲ್ಲಿದ್ದು, ಅಲ್ಲಿ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ಕೋವಿಡ್ ನಿಯಮಗಳ ಅನುಸಾರ ಕೆಲಸ ನಡೆಸುತ್ತಿರಬೇಕಾದರೆ ಕಾಮಗಾರಿ ಸ್ಥಗತಿಗೊಳಿಸಲಾಗದು. ಇದು ಉತ್ತಮ ಉದ್ದೇಶ ಹೊಂದಿರುವ ಪಿಐಎಲ್ ಅಲ್ಲ” ಎಂದು ಪೀಠ ಹೇಳಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪರಿಸ್ಥಿತಿ ವಿಷಮಿಸಿದ್ದು, ಸೆಂಟ್ರಲ್ ವಿಸ್ಟಾ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಂದ ರೋಗ ಉಲ್ಬಣಿಸಬಹುದು ಎಂದು ಯೋಜನೆಗೆ ತಡೆ ನೀಡುವಂತೆ ಕೋರಿ ಅನ್ಯಾ ಮಲ್ಹೋತ್ರಾ ಮತ್ತು ಸೋಹೈಲ್ ಹಾಸ್ಮಿ ಅವರು ಮನವಿ ಸಲ್ಲಿಸಿದ್ದರು.
ಮನವಿಯನ್ನು ತೀವ್ರವಾಗಿ ವಿರೋಧಿಸಿದ್ದ ಕೆಂದ್ರ ಸರ್ಕಾರವು, ಪ್ರಸಕ್ತ ನಡೆಯುತ್ತಿರುವ ಕಾಮಗಾರಿಯು ನೂತನ ಸಂಸತ್ತು ಹಾಗೂ ಸಚಿವಾಲಯಗಳಿಗೆ ಸಂಬಂಧಿಸಿದ ನಿರ್ಮಾಣ ಕಾರ್ಯವಲ್ಲ. ಬದಲಿಗೆ ರಾಜ್‌ಪಥ್ ಹಾಗೂ ಇಂಡಿಯಾ ಗೇಟ್ ಸುತ್ತಮುತ್ತ ನಡೆಯುತ್ತಿರುವ ಪಸಕ್ತ ಕಾಮಗಾರಿಯು ಸಾರ್ವಜನಿಕ ಉಪಯೋಗಿ ಅವಶ್ಯಕತೆಗಳಾದ ಶೌಚಾಲಯ, ವಾಹನ ನಿಲುಗಡೆ ಸ್ಥಳ, ಪಾದಚಾರಿ ಸುರಂಗಮಾರ್ಗ ಮುಂತಾದವುಗಳಿಗೆ ಸಂಬಂಧಿಸಿದ್ದು ಎಂದು ಸಮರ್ಥಿಸಿತ್ತು.