[ಕೋವಿಡ್‌–19] ಸೆಂಟ್ರಲ್‌ ವಿಸ್ಟಾಗೆ ತಡೆ ಕೋರಿದ್ದ ಮನವಿ: ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್‌

ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.
Delhi high court and Central vista
Delhi high court and Central vista

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಸೆಂಟ್ರಲ್‌ ವಿಸ್ಟಾ ಪುನರಭಿವೃದ್ಧಿ ಯೋಜನೆಗೆ ತಡೆ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಸೋಮವಾರ ತೀರ್ಪು ಕಾಯ್ದಿರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ಅರ್ಜಿದಾರರ ಪರ ವಾದಿಸಿದರೆ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದರು. ಹಿರಿಯ ವಕೀಲ ಮಣಿಂದರ್ ಸಿಂಗ್‌ ಅವರು ಕಟ್ಟಡ ನಿರ್ಮಾಣ ಸಂಸ್ಥೆ ಶಾಪೂರ್‌ಜಿ ಪಲ್ಲೊಂಜಿಯನ್ನು ಪ್ರತಿನಿಧಿಸಿದ್ದರು.

ಕೋವಿಡ್‌ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಸಮಯದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಅಗತ್ಯ ಸೇವೆಗಳೆಂದು ಹೇಗೆ ವರ್ಗೀಕರಿಸಲಾಗಿದೆ ಎಂದು ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಪ್ರಶ್ನಿಸಿದರು “ಕರ್ಫ್ಯೂ ಜಾರಿಯಲ್ಲಿರುವುದರಿಂದ ಎಲ್ಲವನ್ನೂ ಮುಚ್ಚಲಾಗಿದೆ. ಇದ್ದಕ್ಕಿದ್ದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಕೆಲಸ ಕೈಗೊಳ್ಳಲು ಕಠಿಣ ನಿಯಮಗಳು ಜಾರಿಯಲ್ಲಿದ್ದಾಗಲೂ ಶಾಪೂರ್‌ಜಿ ಪಲ್ಲೊಂಜಿಗೆ ಅನುಮತಿಸುವಂತೆ ಪತ್ರದಲ್ಲಿ ಕೋರಲಾಗಿದೆ” ಎಂದು ಲೂಥ್ರಾ ಹೇಳಿದರು.

“ಸರ್ಕಾರದ ಕರ್ತವ್ಯಲೋಪದಿಂದ ದೆಹಲಿಯ ಉದ್ಯಾನದಲ್ಲಿ ಆಶ್‌ವಿಟ್ಜ್‌ (ಜರ್ಮನಿಯಲ್ಲಿ ನಾಜಿ ಆಡಳಿತವಿದ್ದಾಗ ಜನರನ್ನು ಹಿಂಸಿಸಲು ನಿರ್ಮಿಸಲಾಗಿದ್ದ ಶಿಬಿರ) ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಭಯದಿಂದ ನಾವು ಮನವಿ ಸಲ್ಲಿಸಿದ್ದೇವೆ” ಎಂದು ಲೂಥ್ರಾ ಹೇಳಿದರು.

ಕೆಲಸದ ಸ್ಥಳದಲ್ಲಿ ಕೋವಿಡ್‌ಗೆ ಶುಶ್ರೂಷೆ ಮಾಡಲು ವ್ಯವಸ್ಥೆ ಮಾಡಲಾಸ್ಗಿದ್ದು, ಕೋವಿಡ್‌ ಶಿಷ್ಟಾಚಾರ ಅನುಸರಿಸಲಾಗುತ್ತಿದೆ ಎಂಬ ಸರ್ಕಾರದ ವಾದವನ್ನೂ ಲೂಥ್ರಾ ಪ್ರಶ್ನಿಸಿದ್ದಾರೆ. “ಭಾರತ ಸರ್ಕಾರವು ಸುಳ್ಳುಗಳನ್ನು ಹೇಳುತ್ತಿದ್ದು, ವಾಸ್ತವ ಸಂಗತಿಗಳನ್ನು ಬಚ್ಚಿಡುತ್ತಿದೆ… ಅಲ್ಲಿ ಯಾವುದೇ ಹಾಸಿಗೆ ವ್ಯವಸ್ಥೆ ಇಲ್ಲ, ಉಪಚಾರದ ವ್ಯವಸ್ಥೆ ಇಲ್ಲ. ಏಪ್ರಿಲ್‌ 24ರಂದು ಖಾಲಿ ಟೆಂಟ್‌ಗಳಿದ್ದವು ಮೈ ಲಾರ್ಡ್‌. ಇದನ್ನು ನೀವು ನಂಬಬೇಕು ಎಂದು ಅವರು ಬಯಸುತ್ತಿದ್ದಾರೆ?” ಎಂದಿದ್ದಾರೆ.

ಮತ್ತೊಂದೆಡೆ ಲೂಥ್ರಾ ವಾದವನ್ನು ಅಲ್ಲಗಳೆದ ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ “ಯಾವುದಾದರೂ ಒಂದು ಕಾರಣ ಹೇಳಿ ಅವರು ಈ ಯೋಜನೆ ನಿಲ್ಲಿಸುವ ಉದ್ದೇಶ ಹೊಂದಿದ್ದಾರೆ” ಎಂದರು. “ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಕೇವಲ ಆಯ್ಕೆಯಾಗಿದೆ. ಅರ್ಜಿದಾರರು ಅಲ್ಲಿಯೇ 2 ಅಥವಾ 3 ಕಿ ಮೀ ದೂರದಲ್ಲಿ (ಬೇರೆ ಯೋಜನೆಗಳಲ್ಲಿ) ಕೆಲಸ ಮಾಡುವ ಕೆಲಸಗಾರರ ಬಗ್ಗೆ ಯಾವುದೇ ಆಸಕ್ತಿ ಹೊಂದಿಲ್ಲ” ಎಂದು ದೆಹಲಿಯ ಇತರೆಡೆ ನಡೆಯುತ್ತಿರುವ ನಿರ್ಮಾಣ ಕೆಲಸಗಳನ್ನು ಉಲ್ಲೇಖಿಸಿ ಹೇಳಿದರು.

ಕೆಲಸದ ಸ್ಥಳದಲ್ಲಿ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಕೆಲಸಗಾರರು ಅಲ್ಲಿನ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮೆಹ್ತಾ ಹೇಳಿದರು. ಯೋಜನೆಯನ್ನು ಆಶ್‌ವಿಟ್ಜ್‌ ನಾಜಿ ಶಿಬಿರಕ್ಕೆ (ಕಾನ್ಸಂಟ್ರೇಷನ್‌ ಕ್ಯಾಂಪ್) ಹೋಲಿಕೆ ಮಾಡಿದ್ದಕ್ಕೂ ಮೆಹ್ತಾ ತಗಾದೆ ಎತ್ತಿದರು.

“ಟೀಕೆ ಮಾಡಲು ಮತ್ತು ವಿಷಕಾರಲು ಎಲ್ಲರಿಗೂ ಹಕ್ಕಿದೆ. ಆದರೆ, ಆಶ್‌ವಿಟ್ಜ್‌ ಎಂಬ ಪದಗಳನ್ನು ನ್ಯಾಯಾಲಯದ ವೇದಿಕೆಯಲ್ಲಿ ಬಳಸಬಾರದು. ಅದು ನಾಜಿ ಶಿಬಿರವಾಗಿದ್ದು, ಇಂಥ ಗೌರವಾನ್ವಿತ ಸ್ಥಳದಲ್ಲಿ ಅದನ್ನು ಬಳಸಲಾಗುತ್ತಿದೆ” ಎಂದು ಮೆಹ್ತಾ ಅಸಮಾಧಾನ ಹೊರಹಾಕಿದರು.

Also Read
ಸೆಂಟ್ರಲ್‌ ವಿಸ್ತಾ ಮರುನಿರ್ಮಾಣ: ಶಿಲಾನ್ಯಾಸ ನಡೆಸಬಹುದು, ಸದ್ಯಕ್ಕೆ ನಿರ್ಮಾಣ, ನೆಲಸಮ ಮಾಡುವಂತಿಲ್ಲ ಎಂದ ಸುಪ್ರೀಂ

ನಿಮ್ಮ ಅಭಿಪ್ರಾಯವನ್ನು ನೀವು ವ್ಯಕ್ತಪಡಿಸಬಹುದು. ಆದರೆ, ಇಂಥ ಯೋಜನೆಗಳನ್ನು ನಿಲ್ಲಿಸಲು ನ್ಯಾಯಾಲಯಕ್ಕೆ ಬರಬೇಡಿ. ಇದು ನ್ಯಾಯಾಲಯದ ವ್ಯಾಪ್ತಿಯನ್ನು ದುರ್ಬಳಕೆ ಮಾಡಿಕೊಂಡಂತೆ ಎಂದು ಮೆಹ್ತಾ ಹೇಳಿದರು.

ಶಾಪೂರ್‌ಜಿ ಪಲ್ಲೊಂಜಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್‌ ಅವರು ಸಾಲಿಸಿಟರ್‌ ಜನರಲ್‌ ಅವರ ನಿಲುವನ್ನು ಸಮರ್ಥಿಸಿದ್ದು, ಪಿಐಎಲ್‌ ಪ್ರಾಮಾಣಿಕತೆಯಿಂದ ಕೂಡಿಲ್ಲ ಎಂದರು.

“ಇದು (ಸೆಂಟ್ರಲ್‌ ವಿಸ್ಟಾ) ಕೊರೊನಾ ಕೇಂದ್ರವಾಗಿದ್ದು, ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಅನಗತ್ಯವಾಗಿ ಭಾವೋದ್ರೇಕಗೊಳಿಸಲಾಗುತ್ತಿದೆ. ಕಾರ್ಮಿಕರು ಸ್ಥಳದಲ್ಲಿಯೇ ಇರುತ್ತಾರೆ ಮತ್ತು ಅವರನ್ನು ಅಲ್ಲಿಗೆ ಸಾಗಿಸಲಾಗುತ್ತಿಲ್ಲ ಎಂದು ಅರ್ಜಿದಾರರಿಗೆ ತಿಳಿದ ನಂತರ ಅವರು ಅರ್ಜಿಯನ್ನು ಹಿಂತೆಗೆದುಕೊಳ್ಳಬೇಕಿತ್ತು. ಆದರೆ, ಅವರು ಹಾಗೆ ಮಾಡುತ್ತಿಲ್ಲ"ಎಂದು ಸಿಂಗ್‌ ಹೇಳಿದರು.

ಕೋವಿಡ್‌ ನಿಯಮಗಳನ್ನು ಪಾಲಿಸುತ್ತಿರುವುದರಿಂದ ಮನವಿಯು ನಿರ್ವಹಣೆಗೆ ಅರ್ಹವಲ್ಲ ಎಂದು ವಾದಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ಪೀಠವು ತೀರ್ಪನ್ನು ಕಾಯ್ದಿರಿಸಿದೆ.

Related Stories

No stories found.
Kannada Bar & Bench
kannada.barandbench.com