ನಕಲಿ ಎನ್‌ಕೌಂಟರ್‌: ತನಿಖೆ ನಡೆಸುವಂತೆ ಅಸ್ಸಾಂ ಮಾನವ ಹಕ್ಕುಗಳ ಆಯೋಗಕ್ಕೆ ಸುಪ್ರೀಂ ಆದೇಶ

ಆಪಾದಿತ ಘಟನೆಗಳ ಸಂತ್ರಸ್ತರು ಅಥವಾ ಅವರ ಕುಟುಂಬಗಳಿಗೆ ವಿಚಾರಣೆಯಲ್ಲಿ ಭಾಗವಹಿಸಲು ನ್ಯಾಯಯುತ ಮತ್ತು ಅರ್ಥಪೂರ್ಣ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ನಕಲಿ ಎನ್‌ಕೌಂಟರ್‌: ತನಿಖೆ ನಡೆಸುವಂತೆ ಅಸ್ಸಾಂ ಮಾನವ ಹಕ್ಕುಗಳ ಆಯೋಗಕ್ಕೆ ಸುಪ್ರೀಂ ಆದೇಶ
Published on

ಅಸ್ಸಾಂನಲ್ಲಿ ಪೊಲೀಸರು ನಡೆಸಿದ್ದಾರೆ ಎಂದು ಆರೋಪಿಸಲಾದ ನಕಲಿ ಎನ್‌ಕೌಂಟರ್ ಹತ್ಯೆ ಪ್ರಕರಣಗಳ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಅಸ್ಸಾಂ ಮಾನವ ಹಕ್ಕುಗಳ ಆಯೋಗಕ್ಕೆ ನಿರ್ದೇಶನ ನೀಡಿದೆ [ಆರಿಫ್ ಯೀಸಿನ್ ಜ್ವಾಡರ್ ಮತ್ತು  ಅಸ್ಸಾಂ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಎನ್‌ಕೌಂಟರ್‌ಗಳ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸದ ಗುವಾಹಟಿ ಹೈಕೋರ್ಟ್ ತೀರ್ಪಿನ ವಿರುದ್ಧ ವಕೀಲ ಆರಿಫ್ ಯೀಸಿನ್ ಜ್ವಾಡರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ್‌ ಸಿಂಗ್ ಅವರಿದ್ದ ಪೀಠ ಈ ನಿರ್ದೇಶನ ನೀಡಿತು. ಮೇ 2021ರಿಂದ ರಾಜ್ಯದಲ್ಲಿ 80ಕ್ಕೂ ಹೆಚ್ಚು ಪೊಲೀಸ್ ಎನ್‌ಕೌಂಟರ್‌ಗಳು ನಡೆದಿವೆ ಎಂದು ಅರ್ಜಿ ಆತಂಕ ವ್ಯಕ್ತಪಡಿಸಿತ್ತು. 

Also Read
'ಪೊಲೀಸರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆಯೇ?' ಅಸ್ಸಾಂ ಎನ್‌ಕೌಂಟರ್‌ಗಳ ಕುರಿತು ಸುಪ್ರೀಂ ಪ್ರಶ್ನೆ

ಕೆಲ ಪ್ರಕರಣಗಳನ್ನು ಒಗ್ಗೂಡಿಸಿದ ಮಾತ್ರಕ್ಕೆ ಎಲ್ಲವನ್ನೂ ಒಳಗೊಳ್ಳುವ ಸರ್ವ ವ್ಯಾಪ್ತಿಯ ನ್ಯಾಯಾಂಗ ನಿರ್ದೇಶನ ನೀಡಲಾಗದು ಎಂದು ಅದು ಹೇಳಿತಾದರೂ ನಕಲಿ ಎನ್‌ಕೌಂಟರ್‌ ಆರೋಪ ಗಂಭೀರ ಸ್ವರೂಪದ್ದಾಗಿದೆ ಎಂದಿತು.

ಸಂತ್ರಸ್ತರ ಮೇಲೆ ಸರ್ಕಾರಿ ಅಧಿಕಾರಿಗಳು ಅತಿಯಾದ ಅಥವಾ ಕಾನೂನುಬಾಹಿರ ಬಲಪ್ರಯೋಗ ಮಾಡುವುದನ್ನು ಕಾನೂನುಬದ್ಧಗೊಳಿಸಲಾಗದು ಎಂದು ನ್ಯಾಯಪೀಠವು ಹೇಳಿತು.

"ಈ ಘಟನೆಗಳಲ್ಲಿ ಕೆಲವು ನಕಲಿ ಎನ್‌ಕೌಂಟರ್‌ ಆಗಿರಬಹುದು ಎಂಬ ಆರೋಪ ನಿಜಕ್ಕೂ ಗಂಭೀರವಾಗಿದ್ದು ಆರೋಪ ಸಾಬೀತಾದರೆ ಅದು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನ ಗಂಭೀರ ಉಲ್ಲಂಘನೆಯಾಗುತ್ತದೆ. ಅದೇ ರೀತಿ, ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಸ್ವತಂತ್ರ ತನಿಖೆಯ ನಂತರ, ಈ ಪ್ರಕರಣಗಳಲ್ಲಿ ಕೆಲವೊಂದು ನ್ಯಾಯಯುತವಾಗಿ ಸಮರ್ಥಿಸಬಹುದಾದ, ಅನಿವಾರ್ಯವಾದ ಕ್ರಮಗಳಾಗಿರಲೂಬಹುದು" ಎಂದು ಪೀಠವು ಅಭಿಪ್ರಾಯಪಟ್ಟಿತು.

Also Read
ಬುಲ್ಡೋಜರ್ ನ್ಯಾಯಕ್ಕೆ ಮುಂದಾದ ಅಸ್ಸಾಂ ಸರ್ಕಾರ: ಸೋಮವಾರ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ

ಆದರೆ, ಸರ್ಕಾರ ಸ್ವತಃ ದಾಖಲಿಸಿರುವ ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಮೌಲ್ಯಮಾಪನದ ಅಗತ್ಯವಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಂತೆಯೇ ತನಿಖೆ ನಡೆಸುವಂತೆ ಅಸ್ಸಾಂ ಮಾನವ ಹಕ್ಕುಗಳ ಆಯೋಗಕ್ಕೆ ಅದು ಸೂಚಿಸಿತು.

ಆಪಾದಿತ ಘಟನೆಗಳ ಸಂತ್ರಸ್ತರು ಅಥವಾ ಅವರ ಕುಟುಂಬಗಳಿಗೆ ವಿಚಾರಣೆಯಲ್ಲಿ ಭಾಗವಹಿಸಲು ನ್ಯಾಯಯುತ ಮತ್ತು ಅರ್ಥಪೂರ್ಣ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಆದೇಶಿಸಿತು.

ಕಳೆದ ಹತ್ತು ವರ್ಷಗಳಲ್ಲಿ, ಪಾತಕಗಳನ್ನು ನಡೆಸಿ ಪರಾರಿಯಾಗುತ್ತಿದ್ದ ಅಪರಾಧಿಗಳಲ್ಲಿ ಕೇವಲ ಶೇಕಡಾ 10ರಷ್ಟು ಜನರು ಮಾತ್ರ ಪೊಲೀಸ್ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಾರೆ ಹಾಗೂ ಇದು ಆತ್ಮರಕ್ಷಣೆಯ ಕ್ರಮವಾಗಿ ಕೈಗೊಂಡಿರುವುದಾಗಿದೆ ಎಂದು ಅಸ್ಸಾಂ ಸರ್ಕಾರ ಈ ಹಿಂದೆ ವಾದಿಸಿತ್ತು.

Kannada Bar & Bench
kannada.barandbench.com