ದುಬೆ, ದೆಹದ್ರಾಯ್ ವಿರುದ್ಧ ಮಾನಹಾನಿಕರ ಆರೋಪ: ಮಹುವಾ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ ಎಂದು ದೆಹದ್ರಾಯ್ ಮತ್ತು ದುಬೆ ಆರೋಪಿಸಿದ್ದಾರೆ.
ಮಹುವಾ ಮೊಯಿತ್ರಾ, ನಿಶಿಕಾಂತ್ ದುಬೆ ಹಾಗೂ ಜೈ ಅನಂತ್ ದೆಹದ್ರಾಯ್
ಮಹುವಾ ಮೊಯಿತ್ರಾ, ನಿಶಿಕಾಂತ್ ದುಬೆ ಹಾಗೂ ಜೈ ಅನಂತ್ ದೆಹದ್ರಾಯ್

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಪಡೆದಿದ್ದಾರೆ ಎಂಬ ಆರೋಪ ಮಾಡದಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೆಹದ್ರಾಯ್ ಅವರಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಮೊಯಿತ್ರಾ ಸಲ್ಲಿಸಿದ್ದ ಮಧ್ಯಂತರ ಪರಿಹಾರ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸಚಿನ್ ದತ್ತಾ, "ನಾನು ಪ್ರತಿಬಂಧಕಾಜ್ಞೆ ಕೋರಿರುವ ಅರ್ಜಿ ವಜಾಗೊಳಿಸಿದ್ದೇನೆ," ಎಂದರು. ಅವರು ಡಿಸೆಂಬರ್ 20ರಂದು ಪ್ರಕರಣದ ತೀರ್ಪು ಕಾಯ್ದಿರಿಸಿದ್ದರು.

ಮೊಯಿತ್ರಾ ಅವರು ಸಂಸತ್ತಿನಲ್ಲಿ ಹಿರಾನಂದಾನಿ ಸೂಚಿಸಿದಂತೆ ಪ್ರಶ್ನೆ ಕೇಳಿದ್ದು ಅದಕ್ಕಾಗಿ ದುಬಾರಿ ಉಡುಗೊರೆ ಪಡೆದಿದ್ದಾರೆ. ಅಲ್ಲದೇ ತಮ್ಮ ಸಂಸತ್ತಿನ ಖಾತೆ ಲಾಗ್ ಇನ್ ಅಂಶಗಳನ್ನು ಹಂಚಿಕೊಂಡಿದ್ದಾರೆ ಎಂದು ದೆಹದ್ರಾಯ್ ಮತ್ತು ದುಬೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಹುವಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ದುಬೆ ಮತ್ತು ದೆಹ್ರದಾಯ್‌ ಅವರ ಆರೋಪಗಳ ಆಧಾರದ ಮೇಲೆ, ಲೋಕಸಭಾ ನೈತಿಕ ಸಮಿತಿಯು ಮೊಯಿತ್ರಾ ಅವರನ್ನು ಲೋಕಸಭೆಯಿಂದ ತೆಗೆದುಹಾಕಲು ಸೂಚಿಸಿತ್ತು, ನಂತರ ಅವರನ್ನು ಡಿಸೆಂಬರ್ 8ರಂದು ಸಂಸತ್ತಿನಿಂದ ಉಚ್ಛಾಟಿಸಲಾಗಿತ್ತು.

Also Read
ನಿಶಿಕಾಂತ್ ದುಬೆ, ಜೈ ಅನಂತ್ ದೆಹದ್ರಾಯ್ ವಿರುದ್ಧ ಮಹುವಾ ಸಲ್ಲಿಸಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ಆರೋಪಗಳನ್ನು ನಿರಾಕರಿಸಿದ್ದ ಮಹುವಾ ಹಿರಾನಂದಾನಿ ತನ್ನ ಸ್ನೇಹಿತರಾಗಿದ್ದು ಯಾವುದೇ ಪ್ರತಿಫಾಲಾಪೇಕ್ಷೆ ಇರಲಿಲ್ಲ. ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿವೆ ಎಂದಿದ್ದರು.

ಆದರೆ, ಲೋಕಸಭಾ ಖಾತೆಯ ಪಾಸ್‌ವರ್ಡನ್ನು ಹಿರಾನಂದಾನಿ ಅವರಿಗೆ ಮಹುವಾ ನೀಡಿದ್ದಾರೆ. ಮೊಯಿತ್ರಾ ಕೇಳಿದ 61 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳು ಹಿರಾನಂದಾನಿ ಅವರ ಪರವಾಗಿ ಕೇಳಿರುವುದಾಗಿದೆ ಎಂದು ದೆಹದ್ರಾಯ್ ಮತ್ತು ದುಬೆ ಆರೋಪಿಸಿದ್ದರು.

Kannada Bar & Bench
kannada.barandbench.com