
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ನಡೆಸುತ್ತಿರುವ ತನಿಖೆ ರದ್ದುಗೊಳಿಸುವಂತೆ ಕೋರಿ ಪತ್ರಕರ್ತ ಮತ್ತು ʼದಿ ಕ್ವಿಂಟ್ʼ ಸಂಸ್ಥಾಪಕ ರಾಘವ್ ಬಹಲ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ʼಬಹಲ್ ವಿರುದ್ಧ ಹೊರಡಿಸಲಾದ ಲುಕ್ ಔಟ್ ಸುತ್ತೋಲೆಯನ್ನು (LOC) ರದ್ದುಗೊಳಿಸಲು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ನಿರಾಕರಿಸಿದರು.
ಬಹಲ್ ಅವರ ವಿರುದ್ಧದ ಆರೋಪಗಳು ಇನ್ನೂ ವಿಚಾರಣೆಯ ಹಂತ ತಲುಪಿಲ್ಲ ಮತ್ತು ಅಪರಾಧ ನಡೆದಿರುವ ಕುರಿತಂತೆ ಇನ್ನಷ್ಟೇ ತನಿಖೆ ನಡೆಸಬೇಕಿದೆ. ಇಸಿಐಆರ್ ರದ್ದುಪಡಿಸುವುದಕ್ಕೆ ಸಂಬಂಧಿಸಿದ ಅರ್ಜಿ ಆಲಿಸಲು ಇದು ಅವಧಿಪೂರ್ವ ಹಂತವಾಗಿರುವುದರಿಂದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಬಹಲ್ ಅವರ ವಿರುದ್ಧದ ಲುಕ್ ಔಟ್ ಸುತ್ತೋಲೆ ರದ್ದುಪಡಿಸಲು ಕೂಡ ನಿರಾಕರಿಸಿದ ನ್ಯಾಯಾಲಯ, ಅವರ ವಿರುದ್ಧದ ಆರೋಪಗಳು ಭಾರತದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರುವುದಕ್ಕೆ ಸಂಬಂಧಿಸಿವೆ ಎಂದು ಉಲ್ಲೇಖಿಸಿತು. ಆದರೆ, ಬಹಲ್ ಕೆಲಸದ ನಿಮಿತ್ತ ಇಲ್ಲವೇ ಇನ್ನಾವುದೇ ನೈಜ ಕಾರಣಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವಂತಿದ್ದರೆ ಆ ಹಕ್ಕನ್ನು ಮೊಟಕುಗೊಳಿಸುವುದಿಲ್ಲ ಅದಕ್ಕೆ ಸಂಬಂಧಿಸಿದಂತೆ ಅವರು ಸೂಕ್ತ ಅರ್ಜಿ ಸಲ್ಲಿಸಬಹುದು ಎಂದು ಹೇಳಿತು. ತನಿಖೆಗೆ ಸಹಕರಿಸುವುದಾಗಿ ಬಹಲ್ ಅವರು ನೀಡಿದ ಹೇಳಿಕೆಯನ್ನು ನ್ಯಾ. ಸಿಂಗ್ ಇದೇ ಸಂದರ್ಭದಲ್ಲಿ ದಾಖಲಿಸಿಕೊಂಡರು.
ಲಂಡನ್‌ನಲ್ಲಿ ಆಸ್ತಿ ಖರೀದಿಸಲು ಬಳಸಲಾದ ಹಣದ ಮಾಹಿತಿ ಬಹಿರಂಗಪಡಿಸದಿರುವ ಆರೋಪದ ಮೇಲೆ ಬಹಲ್ ಅವರ ವಿರುದ್ಧ ಆದಾಯ ತೆರಿಗೆ (ಐಟಿ) ಇಲಾಖೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಇ ಡಿ ಪ್ರಕರಣ ದಾಖಲಿಸಿಕೊಂಡಿತ್ತು. 2018-19ನೇ ಸಾಲಿಗೆ ಬಹಲ್ ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಅಕ್ರಮ ನಡೆದಿದೆ ಎಂದು ಐಟಿ ಇಲಾಖೆ ಆರೋಪಿಸಿತ್ತು.