ಜಾಮೀನು ಅರ್ಜಿ ವರ್ಗಾವಣೆ: ಆಪ್‌ ಸಚಿವ ಸತ್ಯೇಂದರ್ ಜೈನ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಇದು ಪ್ರಕರಣವನ್ನು ವರ್ಗಾಯಿಸಿದ ನ್ಯಾಯಾಧೀಶರ ಪ್ರಾಮಾಣಿಕತೆ ಅಥವಾ ನೈತಿಕತೆಯ ಪ್ರಶ್ನೆಯಲ್ಲ ಬದಲಿಗೆ ಎದುರು ಪಕ್ಷದ (ಇ ಡಿ) ಮನಸ್ಸಿನೊಳಗೆ ಆತಂಕ ಇದೆ ಎನ್ನುವುದು ಇದಕ್ಕೆ ಕಾರಣ ಎಂದು ಇಂದು ಆದೇಶ ಹೊರಡಿಸಿದ ನ್ಯಾಯಾಲಯ.
AAP minister Satyendar Jain and Enforcement Directorate
AAP minister Satyendar Jain and Enforcement Directorate Facebook
Published on

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೇರೊಬ್ಬ ನ್ಯಾಯಾಧೀಶರಿಗೆ ವರ್ಗಾಯಿಸಿದ ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೆಹಲಿಯ ಆಪ್‌ ಸರ್ಕಾರದ ಸಚಿವ ಸತ್ಯೇಂದರ್‌ ಜೈನ್‌ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಶನಿವಾರ ವಜಾಗೊಳಿಸಿದೆ.

ಇದು ಪ್ರಕರಣವನ್ನು ವರ್ಗಾಯಿಸಿದ ನ್ಯಾಯಾಧೀಶರ ಪ್ರಾಮಾಣಿಕತೆ ಅಥವಾ ನೈತಿಕತೆಯ ಪ್ರಶ್ನೆಯಲ್ಲ ಬದಲಿಗೆ ಎದುರು ಪಕ್ಷದ (ಜಾರಿ ನಿರ್ದೇಶನಾಲಯದ- ಇ ಡಿ) ಮನಸ್ಸಿನೊಳಗೆ ಆತಂಕ ಇದೆ ಎನ್ನುವುದು ಇದಕ್ಕೆ ಕಾರಣ ಎಂದು ಇಂದು ಆದೇಶ ಹೊರಡಿಸಿದ ನ್ಯಾ. ಯೋಗೇಶ್‌ ಖನ್ನಾ ತಿಳಿಸಿದರು.

ಪಕ್ಷಪಾತ ನಡೆದೀತು ಎಂದು ಜಾರಿ ನಿರ್ದೇಶನಾಲಯ ಕೇವಲ ಆತಂಕ ವ್ಯಕ್ತಪಡಿಸಿಲ್ಲ ಬದಲಿಗೆ ಹೈಕೋರ್ಟ್‌ಗೆ ಧಾವಿಸುವ ಮೂಲಕ ಆ ಆತಂಕವನ್ನು ಕ್ರಿಯೆಯಲ್ಲಿ ತೋರಿಸಿದೆ. ಆದ್ದರಿಂದ ಆತಂಕ ದುರ್ಬಲ ಅಥವಾ ಸಮಂಜಸವಲ್ಲ ಎಂದು ಹೇಳಲಾಗದು ಎಂಬುದಾಗಿ ಪೀಠ ಅಭಿಪ್ರಾಯಪಟ್ಟಿತು.

ಜೈನ್‌ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್‌ ಆಲಿಸುತ್ತಿದ್ದರು. ಪ್ರಕರಣ ಅಂತಿಮ ಹಂತದಲ್ಲಿದ್ದಾಗ ನ್ಯಾಯಾಧೀಶರು ಪಕ್ಷಪಾತ ನಡೆಸುತ್ತಿದ್ದಾರೆಂದು ಆರೋಪಿಸಿದ್ದ ಜಾರಿ ನಿರ್ದೇಶನಾಲಯ ಪ್ರಕರಣವನ್ನು ನ್ಯಾಯಾಧೀಶ ವಿಕಾಸ್‌ ಧುಲ್‌ ಅವರು ವಿಚಾರಣೆ ನಡೆಸಬೇಕು ಎಂದು ಕೋರಿತ್ತು. ಮನವಿಯನ್ನು ಪುರಸ್ಕರಿಸಿ ರೌಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ವಿನಯ್‌ ಕುಮಾರ್‌ ಗುಪ್ತಾ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಜೈನ್‌ ಹೈಕೋರ್ಟ್‌ ಕದ ತಟ್ಟಿದ್ದರು.

ಜೈನ್‌ ಅವರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌, ರಾಹುಲ್‌ ಮೆಹ್ರಾ ವಾದಿಸಿದರೆ ಜಾರಿ ನಿರ್ದೇಶನಾಲಯವನ್ನು ಎಸ್‌ ವಿ ರಾಜು ಮತ್ತಿತರರು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com