
ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ಬಳಕೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ [ಉಪೇಂದ್ರ ನಾಥ್ ದಲೈ ಮತ್ತು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರ ನಡುವಣ ಪ್ರಕರಣ].
ಇದೇ ರೀತಿಯ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಈಗಾಗಲೇ ಮಂಗಳ ಹಾಡಿದೆ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಹೇಳಿತು.
ಸುಪ್ರೀಂ ಕೋರ್ಟ್ ಈ ಹಿಂದೆ ಇದೇ ಬಗೆಯ ಅರ್ಜಿ ತಿರಸ್ಕರಿಸಿದ್ದರಿಂದ ದೆಹಲಿ ಹೈಕೋರ್ಟ್ ಸಮನ್ವಯ ಪೀಠ ಕೂಡ ಈ ನಿಟ್ಟಿನಲ್ಲಿ ಆದೇಶ ನೀಡಲು ನಿರಾಕರಿಸಿತ್ತು ಎಂದು ಪೀಠ ನೆನಪಿಸಿತು.
“ಇವಿಎಂ ಬಳಕೆ ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ. ಅದೇ ತೀರ್ಪಿನ ಆಧಾರದ ಮೇಲೆ, ಈ ನ್ಯಾಯಾಲಯದ ಇನ್ನೊಂದು ಪೀಠ ಕೂಡ ಮನವಿಯೊಂದನ್ನು ಬದಿಗೆ ಸರಿಸಿತ್ತು… ಈ ವಿಚಾರ ಗಮನದಲ್ಲಿಟ್ಟುಕೊಂಡು, ನಾವು ರಿಟ್ ಅರ್ಜಿ ತಿರಸ್ಕರಿಸುತ್ತಿದ್ದೇವೆ” ಎಂದು ನ್ಯಾಯಾಲಯ ಆದೇಶಿಸಿದೆ.
ಇವಿಎಂ ಬಳಕೆ ವಿರುದ್ಧ ಉಪೇಂದ್ರ ನಾಥ್ ದಲೈ ಎಂಬುವವರು ಅರ್ಜಿ ಸಲ್ಲಿಸಿದ್ದರು. ಮತಪತ್ರಗಳ ಮೂಲಕವಷ್ಟೇ ಚುನಾವಣೆ ನಡೆಸಲು ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದರು.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, "ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದ್ದರಿಂದ ಅರ್ಜಿ ಸಲ್ಲಿಸದಂತೆ ಮನವಿದಾರರಿಗೆ ಆಕ್ಷೇಪಿಸಲಾಗಿತ್ತು. ಯಾರೂ ನ್ಯಾಯಾಲಯದ ವಿಚಾರಣೆಯನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳಬಾರದು" ಎಂದರು.
ಆಗ ಪೀಠ, "ಹಿಂದಿನ ತೀರ್ಪುಗಳನ್ನು ಅಧ್ಯಯನ ಮಾಡದೆ ಪ್ರಕರಣ ಹೂಡಬಾರದು" ಎಂದು ಅಸಮಾಧಾನ ವ್ಯಕ್ತಪಡಿಸಿತು. ಆದರೂ ದಾವೆ ಮುಂದುವರೆಸುವಂತೆ ಅರ್ಜಿದಾರರು ಮನವಿ ಮಾಡಿದಾಗ ನ್ಯಾಯಾಲಯ ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿತು.