ಮತ ಎಣಿಕೆ ಪರಿಶೀಲನೆ ಕೋರಿದರೆ ಇವಿಎಂ ದತ್ತಾಂಶ ಅಳಿಸುವುದಿಲ್ಲ: ಸುಪ್ರೀಂ ಕೋರ್ಟ್‌ಗೆ ಇಸಿಐ ಆಶ್ವಾಸನೆ

ಇವಿಎಂಗಳನ್ನು ಪರಿಶೀಲಿಸುವಾಗ ಮತ್ತು ಅಣಕು ಮತದಾನ ನಡೆಸುವಾಗ ಅನುಸರಿಸಬೇಕಾದ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿವರಿಸಿದೆ.
EVM VVPAT and Supreme Court
EVM VVPAT and Supreme Court
Published on

ಅಭ್ಯರ್ಥಿಯೊಬ್ಬರು ಮತ ಎಣಿಕೆ ಅಥವಾ ಮತದಾನದ ಫಲಿತಾಂಶಗಳ ಪರಿಶೀಲನೆ ಕೋರಿದರೆ ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ದತ್ತಾಂಶ ಅಳಿಸಿಹಾಕುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಬುಧವಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ಇವಿಎಂಗಳನ್ನು ಪರಿಶೀಲಿಸುವಾಗ ಮತ್ತು ಅಣಕು ಮತದಾನಗಳನ್ನು ನಡೆಸುವಾಗ ಅನುಸರಿಸಬೇಕಾದ ಪ್ರಕ್ರಿಯೆಯನ್ನು ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತ ಅವರಿದ್ದ ಪೀಠ ವಿಚಾರಣೆ ವೇಳೆ ನಿಗದಿಪಡಿಸಿತು.

Also Read
ಎಲ್ಲ ವಿವಿಪ್ಯಾಟ್‌ ಚೀಟಿಗಳನ್ನು ಇವಿಎಂ ಮತಗಳೊಂದಿಗೆ ತಾಳೆ ನೋಡಲು ಕೋರಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಇವಿಎಂ-ವಿವಿಪ್ಯಾಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಅನುಗುಣವಾಗಿಲ್ಲದ ಕಾರಣ, ಇವಿಎಂಗಳ ಪರಿಶೀಲನೆಗಾಗಿ ಇಸಿಐ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು ರೂಪಿಸಬೇಕು ಎಂದು ಅರ್ಜಿ ಸಲ್ಲಿಸಿರುವ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಕೋರಿದರು.

ಅಭ್ಯರ್ಥಿಯು ಪರಿಶೀಲನೆ ಕೋರುವ ಇವಿಎಂ ಘಟಕಗಳಲ್ಲಿನ ದತ್ತಾಂಶವನ್ನು ಇನ್ನು ಮುಂದೆ ಅಳಿಸುವುದಿಲ್ಲ ಎಂದು ಇಸಿಐ ಅಫಿಡವಿಟ್ ಸಲ್ಲಿಸಿರುವುದು ಮತ್ತು ತಾಂತ್ರಿಕ ಎಸ್‌ಒಪಿಯನ್ನು ತಿದ್ದುಪಡಿ ಮಾಡಲು ಇಸಿಐ ಉದ್ದೇಶಿಸಿರುವುದನ್ನು ಪೀಠ ಗಣನೆಗೆ ತೆಗೆದುಕೊಂಡಿತು.   

ಭಾರತ್ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿಇಎಲ್‌) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ (ಇಸಿಐಎಲ್‌) ಎಂಜಿನಿಯರ್‌ಗಳು ಪರಿಶೀಲನೆ ನಡೆಸಿ ಮೈಕ್ರೋಕಂಟ್ರೋಲರ್ ಮತ್ತು ಮತಯಂತ್ರದಲ್ಲಿರುವ ತಂತ್ರಾಂಶ ಹಾಳಾಗಿಲ್ಲ ಮತ್ತು ಇಡೀ ಮತಯಂತ್ರ ಸುರಕ್ಷಿತವಾಗಿದೆ ಎಂದು ತೃಪ್ತಿ ವ್ಯಕ್ತಪಡಿಸುವ ಪ್ರಮಾಣ ಪತ್ರವನ್ನು ಅವರು ನೀಡಬೇಕು ಎಂಬುದಾಗಿ ನ್ಯಾಯಾಲಯ ಸೂಚಿಸಿತು.

Also Read
ಸಿಎಂ ಆಯ್ಕೆ ಪ್ರಕರಣ: ವರುಣಾದಲ್ಲಿ ಬಳಕೆ ಮಾಡಿದ್ದ ಇವಿಎಂ-ವಿವಿಪ್ಯಾಟ್‌ ಲೋಕಸಭಾ ಚುನಾವಣೆಗೆ ಬಳಸಲು ಹೈಕೋರ್ಟ್‌ ಸಮ್ಮತಿ

"ಯಾವುದೇ ಅಭ್ಯರ್ಥಿ ಅಣಕು ಮತದಾನ ನಡೆಸಲು ಬಯಸಿದರೆ, ಸಂಗ್ರಹಿಸಲಾದ ದತ್ತಾಂಶವನ್ನು ಡೌನ್‌ಲೋಡ್ ಮಾಡಿದ ನಂತರ ಇವಿಎಂಗಳಲ್ಲಿನ ದತ್ತಾಂಶವನ್ನು ಅಳಿಸಲು ಅವರು ವಿನಂತಿಸಿಕೊಳ್ಳಬಹುದು. ಡೌನ್‌ಲೋಡ್ ಮಾಡಿರುವುದನ್ನು ಎಂಜಿನಿಯರ್‌ಗಳು ಪ್ರಮಾಣೀಕರಿಸಬೇಕು. ನಂತರ ಅಣಕು ಮತದಾನದ ಮಾಹಿತಿಯನ್ನು ಡೌನ್‌ಲೋಡ್ ಮಾಡಿ ಬಿಇಎಲ್ ಮತ್ತು ಇಸಿಐಎಲ್ ಮತ್ತೆ ಪರಿಶೀಲಿಸಬಹುದು." ಎಂದು ಕೂಡ ಅದು ಹೇಳಿದೆ.

ಚುನಾವಣಾ ಫಲಿತಾಂಶದಲ್ಲಿ ಎರಡನೇ ಅಥವಾ ಮೂರನೇ ಸ್ಥಾನ ಪಡೆಯುವ ಅಭ್ಯರ್ಥಿಗಳು, ಪ್ರತಿ ವಿಧಾನಸಭಾ ಕ್ಷೇತ್ರ ಅಥವಾ ಸಂಸತ್‌ ಕ್ಷೇತ್ರದ ಒಂದು ವಿಧಾನಸಭಾ ಕ್ಷೇತ್ರದಲ್ಲಿನ ಶೇಕಡಾ ಐದರಷ್ಟು ಇವಿಎಂಗಳಲ್ಲಿ ಬರ್ನ್ಟ್‌ ಮೆಮೊರಿ ಇಲ್ಲವೇ ಮೈಕ್ರೋಕಂಟ್ರೋಲರ್ ಅನ್ನು ಇವಿಎಂ ತಯಾರಕರ ಎಂಜಿನಿಯರ್‌ಗಳ ಪರಿಶೀಲನೆಗೆ ಕೋರಬಹುದು ಎಂದು ನ್ಯಾಯಾಲಯ ಕಳೆದ ವರ್ಷ ಹೇಳಿತ್ತು .

Kannada Bar & Bench
kannada.barandbench.com