ಸಿಜೆಐ ಚಂದ್ರಚೂಡ್ ನೇಮಕಾತಿ ಪ್ರಶ್ನಿಸಿದ್ದ ಮರುಪರಿಶೀಲನಾ ಅರ್ಜಿ ತಿರಸ್ಕಾರ: ದಂಡದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಹೈಕೋರ್ಟ್ ನವೆಂಬರ್‌ನಲ್ಲಿ ನೀಡಿದ್ದ ಆದೇಶದಲ್ಲಿ ಅರ್ಜಿಯನ್ನು ವಜಾಗೊಳಿಸಿತ್ತು. ಜೊತೆಗೆ ಅರ್ಜಿದಾರರಿಗೆ ₹ 1 ಲಕ್ಷ ದಂಡ ವಿಧಿಸಿತ್ತು.
CJI DY Chandrachud and Delhi High Court
CJI DY Chandrachud and Delhi High Court

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಇದೇ ಹೈಕೋರ್ಟ್‌ ನವೆಂಬರ್ 11, 2022ರಂದು ನೀಡಿದ್ದ ಆದೇಶದಲ್ಲಿ ಅರ್ಜಿಯನ್ನು ವಜಾಗೊಳಿಸಿತ್ತು. ಜೊತೆಗೆ ಅರ್ಜಿದಾರ ಗ್ರಾಮ್‌ ಉದಯ್‌ ಫೌಂಡೇಶನ್‌ ಅಧ್ಯಕ್ಷ ಸಂಜೀವ್‌ ಕುಮಾರ್‌ ತಿವಾರಿ ಅವರಿಗೆ  ₹ 1 ಲಕ್ಷ ದಂಡ ವಿಧಿಸಿತ್ತು. ಈ ಆದೇಶವನ್ನು ಮರುಪರಿಶೀಲಿಸಲು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಆದೇಶ ಮತ್ತು ವಿಧಿಸಲಾದ ದಂಡವನ್ನು ನ್ಯಾಯಮೂರ್ತಿಗಳಾದ ಸಂಜೀವ್ ಸಚ್‌ದೇವ ಮತ್ತು ವಿಕಾಸ್ ಮಹಾಜನ್ ಅವರಿದ್ದ ಪೀಠ ಎತ್ತಿ ಹಿಡಿದಿದೆ.  

"ನವೆಂಬರ್ 11ರ ಆದೇಶವನ್ನು ಪರಿಶೀಲಿಸಲು ಯಾವುದೇ ಕಾರಣ ಇಲ್ಲ. ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮರು ವಿಚಾರಣೆ ಕೋರುವ ಸೋಗಿನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದ್ದು ಮರುಪರಿಶೀಲನೆಗೆ ಅನುಮತಿ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ಬಯಸಿದಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದ ಪೀಠ ಹೇಳಿದೆ. "ನೀವು ಯಾವ ಕ್ರಮ ಬೇಕೋ ಅದನ್ನು ಕೈಗೊಳ್ಳಿ. ಇದು ಪರಿಶೀಲನೆಗೆ ಒಳಪಡುವುದಿಲ್ಲ. ದೋಷ ಇದ್ದಾಗ ಮಾತ್ರ ಪರಿಶೀಲನೆ ನಡೆಸಬಹುದು. ದೋಷ ಏನು ಎಂಬುದನ್ನು ನಿಮ್ಮ (ಮರುಪರಿಶೀಲನಾ) ಅರ್ಜಿಯಲ್ಲಿ ಅಥವಾ ನಿಮ್ಮ ವಾದದಲ್ಲಿ ನೀವು ಸೂಚಿಸಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಹಿಂದಿ - ಇಂಗ್ಲಿಷ್‌ ಚರ್ಚೆ:

ಈ ಮಧ್ಯೆ 'ನ್ಯಾಯಾಲಯ ಹಿಂದಿಯಲ್ಲಿ ತನಗೆ ಆದೇಶದ ಪ್ರತಿ ನೀಡಿಲ್ಲ. ಇದು ಅಸಾಂವಿಧಾನಿಕʼ ಎಂದು ತಿವಾರಿ ಆಕ್ಷೇಪ ವ್ಯಕ್ತಪಡಿಸಿದಾಗ ಪೀಠ ʼಹಿಂದಿಯಲ್ಲಿ ಆದೇಶ ನೀಡದಿರುವುದಕ್ಕೂ ಕಾರಣವಿದೆ. ಅದನ್ನು ಕೂಡ ಸಂವಿಧಾನದಲ್ಲಿ ಬರೆಯಲಾಗಿದೆʼ ಎಂದು ಪ್ರತಿಕ್ರಿಯಿಸಿತು. ಪೀಠ ತನ್ನೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಿತು. ನನ್ನನ್ನು ಇಂಗ್ಲಿಷ್‌ ಕಲಿ ಎಂದು ಅದು ಒತ್ತಾಯಿಸಬಹುದೇ? ಭಾರತ ಈಗ ಸ್ವತಂತ್ರ ದೇಶʼ ಎಂದು ಅರ್ಜಿದಾರ ತಿವಾರಿ ಹೇಳಿದರು.  ಆಗ ನ್ಯಾಯಾಲಯ "ಎಷ್ಟೆಲ್ಲಾ ಭಾಷೆಗಳಿವೆ? ಹಿಂದಿ ಬಾರದ ಜನರೊಂದಿಗೆ ನೀವು ಹೇಗೆ ಮಾತನಾಡುತ್ತೀರಿ" ಎಂದು ಪೀಠ ಕೇಳಿತು. ಆಗ ತಿವಾರಿ “ಹೌದು ಹಿಂದಿಯಲ್ಲಿ (ಮಾತನಾಡುತ್ತೇನೆ). ದೇಶದ ಎಲ್ಲಾ ಭಾಷೆಗಳೂ ಸಂಸ್ಕೃತದಿಂದ ಬಂದಿವೆ ಎಂದರು. ಈ ಹಂತದಲ್ಲಿ ನ್ಯಾಯಾಲಯ “ನೀವು ನಮಗೆಲ್ಲಾ ಸಂಸ್ಕೃತ ಕಲಿಸಲು ಹೊರಟಿದ್ದೀರಾ? ಹೌದು ಎನ್ನುವುದಾದರೆ ಯಾರು ಬೋಧಿಸುತ್ತಾರೆ? ಸರ್ಕಾರವೇ ಸರಿ” ಎಂದು ತಿರುಗೇಟು ನೀಡಿತು.

 ಮರಳಿ ಮರಳಿ ಯತ್ನ:

ಈ ಹಿಂದೆ ತಿವಾರಿ ಅವರು ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ್ದ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್‌ ಅವರಿದ್ದ ಪೀಠ ಅವರಿಗೆ ₹1 ಲಕ್ಷ ದಂಡ ವಿಧಿಸಿತ್ತು. ಈ ವೇಳೆ ನ್ಯಾಯಾಲಯ “ಇದೇ ರೀತಿಯ ಅರ್ಜಿಯನ್ನು ಈಗಾಗಲೇ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರು ಹೊಸ ದಾವೆ ಎಂದು ಸೋಗು ಹಾಕಿ ಹೈಕೋರ್ಟ್‌ಗೆ ಬರುತ್ತಿದ್ದು ಇದು ಅವರ ಸಂಕುಚಿತ ದೃಷ್ಟಿಕೋನವನ್ನು ಹೇಳುತ್ತದೆ ಮತ್ತು ಅರ್ಜಿದಾರರ ಆಕ್ಷೇಪಾರ್ಹ ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸುತ್ತದೆ” ಎಂದಿತ್ತು.

ಆದರೆ ತಿವಾರಿ ಅವರು ಮುಖ್ಯ ನ್ಯಾಯಮೂರ್ತಿ ಶರ್ಮಾ ಮತ್ತು ನ್ಯಾಯಮೂರ್ತಿ ಪ್ರಸಾದ್‌ ಅವರಿದ್ದ ಪೀಠದೆದುರು ಈಗಿನ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ನ್ಯಾಯಾಲಯ ಮತ್ತು ಪೀಠಕ್ಕೆ ಸಂಬಂಧಿಸಿದಂತೆ ಹಲವು ಟೀಕೆಗಳನ್ನು ಮಾಡಿದ್ದ ಹಿನ್ನೆಲೆಯಲ್ಲಿ ಇಬ್ಬರು ನ್ಯಾಯಾಮೂರ್ತಿಗಳು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ನಂತರ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಸಂಜೀವ್ ಸಚದೇವ್‌ ಮತ್ತು ವಿಕಾಸ್ ಮಹಾಜನ್ ಅವರಿದ್ದ ಈಗಿನ ಪೀಠದೆದುರು ಪ್ರಸ್ತಾಪಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com