

ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ ನೆಟ್‌ಫ್ಲಿಕ್ಸ್ ವೆಬ್ ಸರಣಿ 'ದ ಬಾ***ಡ್ಸ್ ಆಫ್ ಬಾಲಿವುಡ್' ನಲ್ಲಿ ತಮ್ಮನ್ನು ಹೋಲುವಂತೆ ಚಿತ್ರಿಸಿರುವ ದೃಶ್ಯಗಳಿಗೆ ತಡೆ ನೀಡಿ ಅವುಗಳನ್ನು ತೆಗೆದುಹಾಕಬೇಕು ಎಂದು ಕೋರಿ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಸಮೀರ್ ವಾಂಖೆಡೆ ಅವರು ಹೂಡಿದ್ದ ಮಾನಹಾನಿ ದಾವೆಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ [ಸಮೀರ್ ಜ್ಞಾನದೇವ್ ವಾಂಖೆಡೆ ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ಸ್ ಪ್ರೈ. ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಅರ್ಜಿ ಕುರಿತು ತೀರ್ಪು ನೀಡುವ ಅಧಿಕಾರ ವ್ಯಾಪ್ತಿ ತನಗೆ ಇಲ್ಲ. ಸೂಕ್ತ ನ್ಯಾಯಾಲಯ ಸಂಪರ್ಕಿಸುವಂತೆ ನ್ಯಾಯಮೂರ್ತಿ ಪುರುಷೈಂದ್ರ ಕುಮಾರ್ ಕೌರವ್ ಅವರು ವಾಂಖೆಡೆ ಅವರಿಗೆ ತಿಳಿಸಿದರು.
ಮುಂಬೈನಲ್ಲಿ 2021ರಲ್ಲಿ ನಡೆದ ಮಾದಕವಸ್ತು ವಿರೋಧಿ ಕಾರ್ಯಾಚರಣೆ ವೇಳೆ ಮಾದಕವಸ್ತು ನಿಯಂತ್ರಣ ದಳದ ವಲಯ ನಿರ್ದೇಶಕರಾಗಿದ್ದ ವಾಂಖೆಡೆ ಅವರು ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರನ್ನು ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆಯಡಿ ಬಂಧಿಸಿದ್ದರು. ಪ್ರಕರಣ ದೇಶಾದ್ಯಂತ ಸಂಚಲನ ಉಂಟು ಮಾಡಿತ್ತು. ನಂತರ ಅವರ ಬಿಡುಗಡೆಯಾಗಿತ್ತು.
ಬಳಿಕ ಆರ್ಯನ್ ಖಾನ್ ನಿರ್ದೇಶನದ 'ದ ಬಾ***ಡ್ಸ್ ಆಫ್ ಬಾಲಿವುಡ್' ವೆಬ್ ಸರಣಿಯಲ್ಲಿ ತನ್ನನ್ನು ಹೋಲುವ ಪಾತ್ರವಿದ್ದು ಆ ಪಾತ್ರದ ಮೂಲಕ ತನ್ನನ್ನು ಅಪಹಾಸ್ಯ ಮಾಡಲಾಗಿದೆ ಎಂದು ಸಮೀರ್ ವಾಂಖೆಡೆ ದೂರಿದ್ದರು.
ಪ್ರಕರಣದ ಸಂಬಂಧ ನಟ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಒಡೆತನದ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ನೆಟ್‌ಫ್ಲಿಕ್ಸ್, 'ಎಕ್ಸ್' ಕಾರ್ಪ್, ಗೂಗಲ್, ಮೆಟಾ ಮತ್ತು ಆರ್‌ಪಿಜಿ ಲೈಫ್‌ಸ್ಟೈಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮಾಧ್ಯಮ ಸಂಸ್ಥೆ ವಿರುದ್ಧ ವಾಂಖೆಡೆ ಮಾನನಷ್ಟ ದಾವೆ ಹೂಡಿದ್ದು ₹2 ಕೋಟಿ ಪರಿಹಾರ ಕೋರಿದ್ದರು.
ವಾಂಖೆಡೆ ಅವರು ಮಾನಹಾನಿಕರ ವಿಷಯವನ್ನು ತೆಗೆದುಹಾಕುವಂತೆ ಮತ್ತು ತಮ್ಮ ಬಗ್ಗೆ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡುವುದು, ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದನ್ನು ತಡೆಯಲು ತಡೆಯಾಜ್ಞೆ ನೀಡುವಂತೆಯೂ ಕೋರಿದ್ದರು.
ಈ ಕುರಿತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ನೆಟ್‌ಫ್ಲಿಕ್ಸ್ ನ್ಯಾಯಾಲಯಕ್ಕೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ವಾಂಖೆಡೆ ಅವರ ವರ್ಚಸ್ಸು ಶೋ ಬಿಡುಗಡೆಗೂ ಮುನ್ನವೇ ಸಾರ್ವಜನಿಕ ಚರ್ಚೆ ಮತ್ತು ಟೀಕೆಗೆ ತುತ್ತಾಗಿತ್ತು ಎಂದು ತಿಳಿಸಿದ್ದವು. ಸಿಬಿಐ ವಾಂಖೆಡೆ ಅವರ ವಿರುದ್ಧ ಹೂಡಿದ್ದ ಪ್ರಕರಣವನ್ನೂ ಉಲ್ಲೇಖಿಸಲಾಗಿತ್ತು.
ಜೊತೆಗೆ ಇದು ವ್ಯಂಗ್ಯ ಮತ್ತು ಅಣಕದ ಸ್ವರಪದ ಸರಣಿಯಾಗಿದ್ದು ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದಡಿ ರಕ್ಷಣೆ ಇದೆ, ಮಾನನಷ್ಟ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಲಾಗಿತ್ತು. ವೆಬ್ ಸರಣಿ ಸ್ವಜನ ಪಕ್ಷಪಾತ, ಮಾದಕ ವಸ್ತು ದುರುಪಯೋಗ, ಮೀಟೂ ದೌರ್ಜನ್ಯದಂತಹ ವಿಷಯಗಳನ್ನು ವಿಡಂಬನೆ ಮೂಲಕ ಹೇಳುತ್ತದೆ ಎಂದು ನೆಟ್‌ಫ್ಲಿಕ್ಸ್ ಪರ ವಕೀಲರು ಹೇಳಿದ್ದರು.
ಆದರೆ ವಾಂಖೆಡೆ ಅವರ ಸೇವಾ ದಾಖಲೆ ಅತ್ಯುತ್ತಮವಾಗಿದೆ ಎಂದು ಅವರ ಪರ ಹಿರಿಯ ವಕೀಲ ಜೆ. ಸಾಯಿ ದೀಪಕ್ ಹೇಳಿದ್ದರು. ವೈಯಕ್ತಿಕ ಪ್ರತೀಕಾರ ಮತ್ತು ದುರುದ್ದೇಶದಿಂದಲೇ ಅವರನ್ನು ಗುರಿಯಾಗಿಸಲಾಗಿದೆ. ವ್ಯಂಗ್ಯಕ್ಕೆ ಸಂಪೂರ್ಣ ರಕ್ಷಣೆ ಇಲ್ಲ. ಬೃಹತ್ ಚಿತ್ರ ನಿರ್ಮಾಣ ಸಂಸ್ಥೆ ಸಾರ್ವಜನಿಕ ಸೇವಕರೊಬ್ಬರನ್ನು ಗುರಿಯಾಗಿಸಿಕೊಂಡಿದೆ ಎಂದಿದ್ದರು.