ಬಿಕಾನೇರ್ ಹೌಸ್ ಬಾಡಿಗೆ ಬಾಕಿ: ರಾಜ ವಂಶಸ್ಥರು ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ಒಪ್ಪಂದವೊಂದರ ಪ್ರಕಾರ ಕೇಂದ್ರ ಸರ್ಕಾರ 1991ರಿಂದ 2014ರವರೆಗೆ ಪಾವತಿಸಬೇಕಾದ ಬಾಡಿಗೆ ಪಡೆಯಲು ತಾವು ಅರ್ಹರು ಎಂದು ರಾಜ ವಂಶಸ್ಥರು ಹೇಳಿಕೊಂಡಿದ್ದಾರೆ.
Bikaner House, New DelhiI
Bikaner House, New DelhiInstagram
Published on

ಕೇಂದ್ರ ಸರ್ಕಾರ ದೆಹಲಿಯಲ್ಲಿರುವ ರಾಜರ ಕಾಲದ ಅರಮನೆಯಾಗಿದ್ದ ಈಗ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವ ಕಟ್ಟಡವಾಗಿರುವ ಬಿಕಾನೇರ್ ಹೌಸ್‌ಅನ್ನು ಬಾಡಿಗೆ ಪಡೆದಾಗಿನಿಂದ ಪಾವತಿಸಬೇಕಾದ ಬಾಕಿ ಮೊತ್ತ ಪಾವತಿಸಲು ನಿರ್ದೇಶಿಸಬೇಕೆಂದು ಕೋರಿ ಬಿಕಾನೇರ್‌ನ ಕೊನೆಯ ಮಹಾರಾಜ ಡಾ. ಕರ್ಣಿ ಸಿಂಗ್ ಅವರ ಉತ್ತರಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಈಚೆಗೆ ತೀರ್ಪು ಕಾಯ್ದಿರಿಸಿದೆ [ಆಡಳಿತಗಾರ್ತಿ ಮೂಲಕ ಬಿಕಾನೇರ್‌ ಮಹಾರಾಜ ಡಾ ಕರ್ಣಿ ಸಿಂಗ್‌ ಸಂಸ್ಥಾನ ಮತ್ತು ಭಾರತ ಒಕ್ಕೂಟ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

1951ರಲ್ಲಿ ಏರ್ಪಟ್ಟಿದ್ದ ಒಪ್ಪಂದದ ಪ್ರಕಾರ 1991ರಿಂದ 2014ರವರೆಗೆ ಬಿಕಾನೇರ್‌ ಹೌಸ್‌ನ ಬಾಡಿಗೆಯನ್ನು ಕೇಂದ್ರ ಸರ್ಕಾರ ಪಾವತಿಸಬೇಕಿದೆ ಎಂದು ರಾಜವಂಶಸ್ಥರು ಕೋರಿದ್ದಾರೆ.

Also Read
ಚಾಮುಂಡೇಶ್ವರಿ ದೇವಸ್ಥಾನದ ಚರ-ಸ್ಥಿರ ಆಸ್ತಿ ವಿಲೇವಾರಿ ಮಾಡದಂತೆ ಪ್ರಾಧಿಕಾರಕ್ಕೆ ಹೈಕೋರ್ಟ್‌ ಮಧ್ಯಂತರ ಆದೇಶ

ರಾಜ ವಂಶಸ್ಥರನ್ನು ಪ್ರತಿನಿಧಿಸುವ ವಕೀಲ ಶ್ರೀಹರ್ಷ ಪೀಚರ ಅವರು ಒಪ್ಪಂದದ ಪ್ರಕಾರ ಕೇಂದ್ರ ಸರ್ಕಾರ ಬಿಕಾನೇರ್‌ ಹೌಸ್‌ ಬಾಡಿಗೆ ಪಡೆದಿತ್ತು. 1951ರಿಂದ 1991ರವರೆಗೆ ಬಾಡಿಗೆ ಮೊತ್ತದ ಮೂರನೇ ಒಂದು ಭಾಗವನ್ನು ಮಹಾರಾಜರಿಗೆ ಮತ್ತು ಮೂರನೇ ಎರಡರಷ್ಟು ರಾಜಸ್ಥಾನ ಸರ್ಕಾರಕ್ಕೆ ಪಾವತಿಸಲಾಗುತ್ತಿತ್ತು. ಆದರೆ ಮಹಾರಾಜರ ನಿಧನಾನಂತರ ಬಾಡಿಗೆ ಪಾವತಿಯಾಗಿಲ್ಲ. ಮಹಾರಾಜರ ಕಾನೂನುಬದ್ಧ ಉತ್ತರಾಧಿಕಾರಿಗಳ ನಡುವೆ ಆಸ್ತಿ ವಿವಾದ ಇದೆ ಎಂಬ ನೆಪದಲ್ಲಿ ಕೇಂದ್ರ ಸರ್ಕಾರ ಬಾಡಿಗೆ ನೀಡಲಿಲ್ಲ ಎಂದು ವಾದಿಸಿದರು.  

ಬಾಕಿ ಹಣ ಪಾವತಿಸುವುದಾಗಿ ಕೇಂದ್ರ ಸರ್ಕಾರ ಹೇಳುತ್ತಲೇ ಬಂದಿದೆ. ಕೇಂದ್ರ ಸರ್ಕಾರ ತನ್ನ ಹಕ್ಕುಗಳನ್ನು ಎಂದಿಗೂ ಪ್ರಶ್ನಿಸಿಲ್ಲ. ಮಹಾರಾಜರ ನಿಧನದ ನಂತರ ಪಾವತಿ ನಿಲ್ಲಿಸಲಾಗುವುದು ಎಂದು ಅದು ಎಂದಿಗೂ ಹೇಳಿಲ್ಲ ಎಂದು ಶ್ರೀಹರ್ಷ ವಾದಿಸಿದರು. ಪ್ರಕರಣದ ಸಂಬಂಧ  ಜನವರಿ 14ರಂದು ತೀರ್ಪು ನೀಡುವುದಾಗಿ ನ್ಯಾ. ಸಚಿನ್‌ ದತ್ತಾ ಅವರು ತಿಳಿಸಿದ್ದಾರೆ.  

Also Read
ಕೆಂಪು ಕೋಟೆ ಸ್ವಾಧೀನ ಕೋರಿ ಬಹದ್ದೂರ್ ಷಾ ಜಫರ್ ಉತ್ತರಾಧಿಕಾರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಇದೇ ವೇಳೆ ರಾಜ ವಂಶಸ್ಥರ ವಾದ ನಿರಾಕರಿಸಿದ ಕೇಂದ್ರ ಸರ್ಕಾರ ಬಿಕಾನೇರ್‌ ಹೌಸ್‌ ಬಾಡಿಗೆ ಪಡೆದಾಗ ಮಹಾರಾಜರು ಅದರ ಮಾಲೀಕರಾಗಿರಲಿಲ್ಲ. 1951ರ ಒಪ್ಪಂದ ಕೇವಲ ಕೃಪಾನುದಾನ (ಎಕ್ಸ್‌ಗ್ರೇಷಿಯಾ) ಎಂದಿತು. ಅಲ್ಲದೆ ಕೃಪಾನುದಾನ  ಕೇವಲ ₹ 6 ಲಕ್ಷದಷ್ಟು ಸಣ್ಣ ಮೊತ್ತವಾಗಿದೆ ಎಂದಿತು. ಇದನ್ನು ಪರಿಗಣಿಸುವುದಾಗಿ ನ್ಯಾ. ದತ್ತಾ ತಿಳಿಸಿದರು.

ಬಿಕಾನೇರ್‌ ಮಹಾರಾಜ 1988ರಲ್ಲಿ ನಿಧನರಾಗಿದ್ದರು. 1922ರಲ್ಲಿ ಮಹಾರಾಜ ಗಂಗಾ ಸಿಂಗ್ ಆಳ್ವಿಕೆಯಲ್ಲಿ ಬಿಕಾನೇರ್‌ ಹೌಸ್ ನಿರ್ಮಾಣವಾಗಿತ್ತು. ಸ್ವಾತಂತ್ರ್ಯಾನಂತರ ಬಿಕಾನೇರ್‌ ಹೌಸ್‌ಅನ್ನು ಕೇಂದ್ರ ಸರ್ಕಾರ ಸ್ವಾಧೀನಪಡಿಸಿಕೊಂಡಿತು. ಡಿಸೆಂಬರ್ 2014ರಲ್ಲಿ, ಸುಪ್ರೀಂ ಕೋರ್ಟ್ ರಾಜಸ್ಥಾನ ಸರ್ಕಾರದ ವಶಕ್ಕೆ ಅದನ್ನು ನೀಡಿತು.

ರಾಜಸ್ಥಾನದ ನೋಖಾ ನಗರ ಪಾಲಿಕೆ ಪ್ರಸ್ತು ಅರಮನೆಯನ್ನು ನಿರ್ವಹಿಸುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ, ಮಧ್ಯಸ್ಥಿಕೆ ತೀರ್ಪನ್ನು ನಗರಪಾಲಿಕೆ ಪಾಲಿಸದೇ ಇದ್ದುದರಿಂದ ದೆಹಲಿಯ ವಿಚಾರಣಾ ನ್ಯಾಯಾಲಯ ಬಿಕಾನೆರ್ ಹೌಸ್ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿತ್ತು. ಒಂದು ತಿಂಗಳ ಬಳಿಕ ತನ್ನ ಆದೇಶಕ್ಕೆ ತಡೆ ನೀಡಿದ ಸ್ಥಳೀಯ ನ್ಯಾಯಾಲಯ ಮಧ್ಯಸ್ಥಿಕೆ ಪ್ರಕಾರ ಇತ್ಯರ್ಥಪಡಿಸಿರುವ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಿತ್ತು.

Kannada Bar & Bench
kannada.barandbench.com