ತಮ್ಮ ಆದಾಯ ತೆರಿಗೆ ದಾಖಲೆಗಳನ್ನು ಕೇಂದ್ರ ವಲಯಕ್ಕೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಆದಾಯ ತೆರಿಗೆ ಇಲಾಖೆಯ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿಗೊಳಿಸಿದೆ.
ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಅವರ ಕಂಪನಿಗಳ ಸಮೂಹದೊಂದಿಗೆ "ಸಂಘಟಿತ ತನಿಖೆ" ನಡೆಸುವ ಸಲುವಾಗಿ ಕಾಂಗ್ರೆಸ್ ಪಕ್ಷದ ವರಿಷ್ಠ ಕುಟುಂಬವಾದ ಸೋನಿಯಾ ಗಾಂಧಿ, ರಾಹುಲ್ ಗಾಂದಿ ಹಾಗೂ ಪ್ರಿಯಾಂಕಾ ವಾದ್ರಾ ಅವರ 2018-2019ನೇ ಸಾಲಿನ ಆದಾಯ ತೆರಿಗೆ ವರ್ಷದ ಲೆಕ್ಕಾಚಾರದ (ಅಸೆಸ್ಮೆಂಟ್) ವರ್ಗಾವಣೆಯನ್ನು ಇಲಾಖೆಯು ಮಾಡಿದೆ. ಇದನ್ನು ಪ್ರಶ್ನಿಸಿ ಹಾಗೂ ತಮಗೂ ಸಂಜಯ್ ಭಂಡಾರಿ ಸಮೂಹದ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲವೆಂದು ತಿಳಿಸಿ ಸೋನಿಯಾ ಪರಿವಾರ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ನ್ಯಾಯಮೂರ್ತಿಗಳಾದ ರಾಜೀವ್ ಶಖ್ದೇರ್ ಮತ್ತು ತಲವಂತ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಆದಾಯ ತೆರಿಗೆ ಇಲಾಖೆಯಿಂದ ಪ್ರತಿಕ್ರಿಯೆ ಬಯಸಿದೆ.
ಅರ್ಜಿದಾರರ ವಿರುದ್ಧದ ಪ್ರಕರಣಗಳು 'ಶೋಧನಾ ರಹಿತ' (ನಾನ್ ಸರ್ಚ್) ಪ್ರಕರಣಗಳಾಗಿರುವುದರಿಂದ ಅವುಗಳನ್ನು ಕೇಂದ್ರ ವಲಯಕ್ಕೆ ವರ್ಗಾಯಿಸಲಾಗದು ಎಂದು ಗಾಂಧಿಗಳ ಪರ ಹಿರಿಯ ವಕೀಲ ಅರವಿಂದ್ ದಾತಾರ್ ಹೇಳಿದರು.
ಮೂಲ ಪರಿಶೋಧನಾ ಪ್ರಕರಣಗಳ ಜೊತೆ ಸಂಪರ್ಕ ಹೊಂದಿರುವ ಪ್ರಕರಣಗಳನ್ನು ಸಂಘಟಿತ ತನಿಖೆಗಾಗಿ ಕೇಂದ್ರ ವಿಭಾಗಕ್ಕೆ ವರ್ಗಾಯಿಸಬಹುದು. ಆದರೆ, ಸದರಿ ಪ್ರಕರಣದಲ್ಲಿ ಇದು ಆ ರೀತಿಯಿಲ್ಲ ಎಂದು ತಗಾದೆ ಎತ್ತಿದ್ದಾರೆ. “ಆಕ್ಷೇಪಿತ ಆದೇಶದಲ್ಲಿ ಸಂಜಯ್ ಭಂಡಾರಿ ಸಮೂಹದ ಪ್ರಕರಣಗಳು ಎಂದು ಹೇಳಲಾಗಿದೆ. ವರ್ಗಾವಣೆ ದೃಷ್ಟಿಯಿಂದ ಕನಿಷ್ಠ ಪಕ್ಷ ಯಾವ ರೀತಿಯ ಸಂಬಂಧ ಎಂಬುದನ್ನಾದರೂ ಹೇಳಿ” ಎಂದರು.
ಇದುವರೆಗೆ ಗಾಂಧಿಗಳ ವಿರುದ್ಧ ಯಾವುದೇ ಪ್ರಕ್ರಿಯೆ ಬಾಕಿ ಇಲ್ಲದೇ ಇರುವುದರಿಂದ ಮನವಿಗೆ ಸಂಬಂಧಿಸಿದಂತೆ ಯಾವುದೇ ತೆರನಾದ ಮಧ್ಯಂತರ ಪರಿಹಾರ ಕಲ್ಪಿಸದಂತೆ ಆದಾಯ ತೆರಿಗೆ ಇಲಾಖೆ ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ಮನವಿ ಮಾಡಿದರು.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 127 (2) ಮತ್ತು (3) ರ ಅಡಿಯಲ್ಲಿ ನಗರದೊಳಗೆ ವರ್ಗಾವಣೆಯನ್ನು ಎಸ್‌ಜಿ ಮೆಹ್ತಾ ಸಮರ್ಥಿಸಿಕೊಂಡಿದ್ದು, ಆದಾಯ ತೆರಿಗೆ ಪಾವತಿದಾರರನ್ನು ಈ ಸಂಬಂಧ ಆಲಿಸುವ ಬಗ್ಗೆ ಚಿಂತಿಸಲಿಲ್ಲ ಎಂದಿದ್ದಾರೆ.
“ಇಂತಹದ್ದೇ ವೃತ್ತದ ಅಡಿಯಲ್ಲಿ ಆದಾಯ ಪರಿಶೀಲಿಸಬೇಕು ಎನ್ನುವುದು ತೆರಿಗೆದಾರರ ಮೂಲಭೂತ ಅಥವಾ ಶಾಸನಬದ್ಧ ಹಕ್ಕಲ್ಲ. ನ್ಯಾಯಯುತ ಆದಾಯ ತೆರಿಗೆ ಪರಿಶೀಲನೆ ಮಾತ್ರವೇ ಶಾಸನಬದ್ಧ ಹಕ್ಕು” ಎಂದು ಮೆಹ್ತಾ ಹೇಳಿದರು.
ಶೋಧನಾ ರಹಿತ ಪ್ರಕರಣಗಳಿಗೂ ಕೇಂದ್ರ ವಲಯ ಅನ್ವಯಿಸುತ್ತದೆ ಎಂದಿರುವ ಮೆಹ್ತಾ ಅವರು “"ಶೋಧನೇತರ ಪ್ರಕರಣಗಳನ್ನು ಘಟಕಕ್ಕೆ ಕಳುಹಿಸಲು ನಿರ್ಬಂಧವಿಲ್ಲ.. ಭಂಡಾರಿ ಏನಾದರೂ ಮಾಡಿರಬಹುದು .. ಎಲ್ಲಾ ಪ್ರಕರಣಗಳನ್ನು ಏಕಕಾಲದಲ್ಲಿ ಕೈಗೆತ್ತಿಕೊಂಡರೆ ಉತ್ತಮ ಸಮನ್ವಯ ಸಾಧಿಸಲು ಅನುಕೂಲ ಎಂದು ದಾಖಲಿಸಲಾಗಿದೆ" ಎಂದರು. ತೆರಿಗೆದಾರರಿಗೆ ವರ್ಗಾವಣೆಯು ಯಾವುದೇ ಪೂರ್ವಾಗ್ರಹ ಉಂಟು ಮಾಡಿಲ್ಲ ಎಂದು ಮೆಹ್ತಾ ಹೇಳಿದ್ದಾರೆ.
ಏಪ್ರಿಲ್ 6ಕ್ಕೆ ವಿಚಾರಣೆ ಮುಂದೂಡಲಾಗಿದೆ.