ಆಕಾಶ ಏರ್ ವಾಣಿಜ್ಯ ಚಿಹ್ನೆ ಬಳಸದಂತೆ ದೆಹಲಿ ಹೈಕೋರ್ಟ್ ನಿರ್ಬಂಧ

ಪ್ರತಿವಾದಿಗಳು ನೇಮಕಾತಿ ಹಗರಣದಲ್ಲಿ ತೊಡಗಿದ್ದು ಆಕಾಶ್ ಏರ್‌ ಪ್ರತಿನಿಧಿಗಳು ಇಲ್ಲವೇ ಉದ್ಯೋಗಿಗಳು ಎಂದು ಸುಳ್ಳೇ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆಕಾಶ್ ಏರ್ ದೂರಿತ್ತು,
Akasa Air
Akasa Air
Published on

ಆಕಾಶ್‌ ಏರ್‌ ಸೋಗಿನಲ್ಲಿ ನೇಮಕಾತಿ ಅಕ್ರಮದಲ್ಲಿ ತೊಡಗದಂತೆ ಹಾಗೂ ಅದರ ವಾಣಿಜ್ಯ ಚಿಹ್ನೆ ಬಳಸದಂತೆ ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಮಧ್ಯಂತರ ತಡೆಯಾಜೆ ನೀಡಿದೆ [ಎಸ್‌ಎನ್‌ವಿ ಏವಿಯೇಷನ್‌ ಮತ್ತು ಅಲಸ್ಕಾ ಏವಿಯೇಷನ್‌ ಅಕಾಡೆಮಿ ನಡುವಣ ಪ್ರಕರಣ].

ವಾಣಿಜ್ಯ ಚಿಹ್ನೆ ಉಲ್ಲಂಘನೆ, ಗೊಂದಲ ಸೃಷ್ಟಿ ಮತ್ತು ಅನ್ಯಾಯದ ಸ್ಪರ್ಧೆಗೆ ಸಂಬಂಧಿಸಿದಂತೆ ಶಾಶ್ವತ ತಡೆಯಾಜ್ಞೆ ವಿಧಿಸಬೇಕು ಎಂದು ಕೋರಿ ಆಕಾಶ ಏರ್‌ ನಿರ್ವಾಹಕರಾದ ಎಸ್ಎನ್‌ವಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ವಾಣಿಜ್ಯ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಅವರು ಮಧ್ಯಂತರ ಆದೇಶ ಹೊರಡಿಸಿದರು.

Also Read
ಏರ್‌ ಇಂಡಿಯಾ ವಿಮಾನದ ಬಿಸ್ನೆಸ್‌ ಕ್ಲಾಸ್‌ನಲ್ಲಿ ಆಸನ ಅವ್ಯವಸ್ಥೆ: ವಯೋವೃದ್ಧ ದಂಪತಿಗೆ ₹ 50,000 ಪರಿಹಾರ

“ದಾಖಲೆಗಳಲ್ಲಿರುವ ಮಾಹಿತಿಯನ್ನು ಪರಿಗಣಿಸಿದ ಬಳಿಕ, ಮೊಕದ್ದಮೆದಾರ (ಎಸ್‌ಎನ್‌ವಿ ಏವಿಯೇಷನ್/ ಅಕಾಸಾ ಏರ್) ಪರವಾಗಿ ಮೇಲ್ನೋಟದ ವಾದ ಸಾಬೀತಾಗಿದೆ ಎಂಬದು ನ್ಯಾಯಾಲಯದ ಅಭಿಪ್ರಾಯ. ಪ್ರತಿವಾದಿಗಳು ಮುಗ್ಧ ಸಾರ್ವಜನಿಕರನ್ನು ಸಂಪರ್ಕಿಸಿ, ತಾವು ಮೊಕದ್ದಮೆದಾರದ ಪರವಾಗಿ ಉದ್ಯೋಗ ನೀಡುತ್ತಿದ್ದಾರೆಂದು ಸುಳ್ಳು ಹೇಳಿ, ಅಂತಹ ಉದ್ಯೋಗಕ್ಕಾಗಿ ‘ಪ್ರಕ್ರಿಯಾ ಶುಲ್ಕ’ಪಡೆಯುತ್ತಿರುವುದು ಸ್ಪಷ್ಟವಾಗಿ ಅರ್ಜಿದಾರರನ್ನು ತಪ್ಪಾಗಿ ಪ್ರತಿನಿಧಿಸುವ ಮೂಲಕ, ವಂಚನೆ ಹಾಗೂ ಗೊಂದಲ ಸೃಷ್ಟಿಗೆ ಕಾರಣವಾಗಿದೆ” ಎಂದು ನ್ಯಾಯಾಲಯ ವಿವರಿಸಿದೆ.

ಪ್ರತಿವಾದಿಗಳು ನೇಮಕಾತಿ ಹಗರಣದಲ್ಲಿ ತೊಡಗಿದ್ದು ಆಕಾಶ್ ಏರ್‌ನ ಪ್ರತಿನಿಧಿಗಳು ಇಲ್ಲವೇ ಉದ್ಯೋಗಿಗಳು ಎಂದು ಸುಳ್ಳೇ ಬಿಂಬಿಸಿ ಉದ್ಯೋಗಾವಕಾಶ ನೀಡುವುದಾಗಿ ವಂಚಿಸುತ್ತಾರೆ. ಸುಳ್ಳೇ ಪ್ರಕ್ರಿಯಾ ಶುಲ್ಕ ವಿಧಿಸುತ್ತಿದ್ದಾರೆ ಎಂದು ಆಕಾಶ್ ಏರ್ ದೂರಿತ್ತು,

ಈ ಸಂಸ್ಥೆಗಳು "ಆಕಾಶ" ಮತ್ತು "ಆಕಾಶ ಏರ್‌" ಸೇರಿದಂತೆ ತನ್ನ ನೋಂದಾಯಿತ ವಾಣಿಜ್ಯ ಚಿಹ್ನೆಗಳನ್ನು ಹಾಗೂ "ಆಕಾಶ" ಮತ್ತು "ಆಕಾಶಾ" ರೀತಿಯ ಮೋಸಗೊಳಿಸುವ ಹೋಲಿಕೆಯ ಗುರುತುಗಳನ್ನು ಅನಧಿಕೃತವಾಗಿ ಬಳಸಿಕೊಂಡಿವೆ.   ಏರ್‌ಲೈನ್‌ ಸಂವಹನ  ನಡೆಸುತ್ತಿದೆ ಎಂದು ಉದ್ಯೋಗಾಕಾಂಕ್ಷಿಗಳು ನಂಬುವಂತೆ ತಪ್ಪುದಾರಿಗೆಳೆಯಲು ಈ ಬಗೆಯ ಉಲ್ಲಂಘಿತ ಡೊಮೇನ್ ಹೆಸರುಗಳನ್ನು ನೋಂದಾಯಿಸಿವೆ ಎಂದು ಆಕಾಶ ಏರ್‌ ಅಳಲು ತೋಡಿಕೊಂಡಿತ್ತು.

ಈ ಬಗೆಯ ವ್ಯವಹಾರದ ಕುರಿತು ಸಾರ್ವಜನಿಕರಿಂದ ದೂರು ಬಂದಿದ್ದು ಇದರಿಂದ ತನ್ನ ವರ್ಚಸ್ಸಿಗೆ ಗಂಭೀರ ಹಾನಿ, ಸದ್ಭಾವನೆಗೆ ಧಕ್ಕೆ ಹಾಗೂ ಬ್ರಾಂಡ್‌ನಲ್ಲಿ ಸಾರ್ವಜನಿಕರು ಇರಿಸಿದ್ದ ನಂಬಿಕೆ ಕುಸಿದಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿತ್ತು.

 ವಾದ ಆಲಿಸಿದ ನ್ಯಾಯಾಲಯ ಆಕಾಶ ಏನ ವಾಣಿಜ್ಯ ಚಿಹ್ನೆ ಅಥವಾ ಅದನ್ನು ಹೋಲುವ ಚಿಹ್ನೆಗಳನ್ನು ಹಾಗೂ ಅಂತಹ ಡೊಮೇನ್ ಹೆಸರು, ಇಮೇಲ್ ವಿಳಾಸ ಅಥವಾ ನೇಮಕಾತಿ ಸಂವಹನ ನಡೆಸದಂತೆ ಡಿಸೆಂಬರ್ 22 ರಂದು ತಡೆ ನೀಡಿದೆ.

Also Read
ಎರಡು ವಿಮಾನ, 3 ಎಂಜಿನ್ ವಾಪಸ್: ಸ್ಪೈಸ್‌ಜೆಟ್‌ಗೆ ನೀಡಿದ್ದ ನಿರ್ದೇಶನ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಜೊತೆಗೆ, ನಿರ್ದಿಷ್ಟ ಡೊಮೇನ್ ಹೆಸರುಗಳನ್ನು ಸ್ಥಗಿತಗೊಳಿಸಬೇಕು, ಆರೋಪಿತರ ಮೊಬೈಲ್ ಸಂಖ್ಯೆಗಳು, ಯುಪಿಐ ಐಡಿ‌ಗಳು ಹಾಗೂ ಬ್ಯಾಂಕ್ ಖಾತೆಗಳ ಕೆವೈಸಿ ವಿವರಗಳನ್ನು ಬಹಿರಂಗಪಡಿಸಿ ಅವುಗಳನ್ನು ನಿರ್ಬಂಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅದು ನಿರ್ದೇಶಿಸಿದೆ.

ಪ್ರಕರಣವನ್ನು ಫೆಬ್ರವರಿ 3, 2026ರಂದು ಜಂಟಿ ರಿಜಿಸ್ಟ್ರಾರ್  ಎದುರು ಹಾಗೂ ಮೇ 22, 2026ರಂದು ನ್ಯಾಯಾಲಯದೆದುರು ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಲಾಗಿದೆ.

[ಆದೇಶದ ಪ್ರತಿ]

Attachment
PDF
SNV_Aviation_Vs_Alaska_Aviation
Preview
Kannada Bar & Bench
kannada.barandbench.com