
ವಾಣಿಜ್ಯ ಚಿಹ್ನೆ ಉಲ್ಲಂಘನೆ ಸಂಬಂಧ ಬಾರ್ಬಿ ಬೊಂಬೆಯ ವಾಣಿಜ್ಯ ಚಿಹ್ನೆ ಮಾಲೀಕತ್ವ ಹೊಂದಿರುವ ಕಂಪೆನಿ ಮ್ಯಾಟೆಲ್ ಹೂಡಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತನ್ನ ವ್ಯವಹಾರ ಚಟುವಟಿಕೆಗಳಲ್ಲಿ ಬಾರ್ಬಿ ಅಥವಾ ಅಂತಹ ಯಾವುದೇ ಇತರ ವಾಣಿಜ್ಯ ಚಿಹ್ನೆ ಬಳಸದಂತೆ ಭಾರತದ ವ್ಯಕ್ತಿಯೊಬ್ಬರಿಗೆ ಹಾಗೂ ಅವರು ನಡೆಸುತ್ತಿರುವ ಸಂಸ್ಥೆಗೆ ಈಚೆಗೆ ನಿರ್ಬಂಧ ವಿಧಿಸಿದೆ [ಮ್ಯಾಟೆಲ್ ಕಂಪೆನಿ ಮತ್ತು ಪದುಮ್ ಬೋರಾ ಇನ್ನಿತರರ ನಡುವಣ ಪ್ರಕರಣ] .
ಪ್ರತಿವಾದಿ ಪದುಮ್ ಬೋರಾ ಅವರು ಬಾರ್ಬಿ ಎಂಟರ್ಪ್ರೈಸಸ್, ಬಾರ್ಬಿ ಕಿಚನ್ ಅಥವಾ ಬಾರ್ಬಿ ಕ್ಯಾಟರಿಂಗ್‌ನಂತಹ ಚಿಹ್ನೆಗಳನ್ನು ತಮ್ಮ ಉತ್ಪನ್ನಗಳಲ್ಲಿ ನಿರಂತರ ಬಳಕೆ ಮಾಡಿರುವುದು ಬಾರ್ಬಿಯ ಮಾಲೀಕರಾದ ಮ್ಯಾಟೆಲ್ ಕಂಪೆನಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದೆ ಎಂದು ಸೆಪ್ಟೆಂಬರ್ 9ರಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ, ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಹೇಳಿದ್ದಾರೆ.
"ಈ ನ್ಯಾಯಾಲಯದ ಪರಿಗಣಿತ ಅಭಿಪ್ರಾಯದ ಪ್ರಕಾರ, ವಾದಿ ಮೇಲ್ನೋಟಕ್ಕೆ ತನ್ನ ಪರವಾಗಿ ವಾದ ಸಾಬೀತುಪಡಿಸಲು ಸಾಧ್ಯವಾಗಿದೆ. ಅನುಕೂಲತೆಯ ಸಮತೋಲನವು ವಾದಿಯ ಪರವಾಗಿ ಮತ್ತು ಪ್ರತಿವಾದಿ ಪದುಮ್ ಅವರ ವಿರುದ್ಧ ಇದೆ. ಮಧ್ಯಂತರ ತಡೆಯಾಜ್ಞೆ ನೀಡದಿದ್ದಲ್ಲಿ ವಾದಿಗೆ ಗಂಭೀರ ಸರಿಪಡಿಸಲಾಗದ ಹಾನಿ ಉಂಟಾಗುವ ಸಾಧ್ಯತೆಯಿದೆ" ಎಂದು ನ್ಯಾಯಾಲಯ ಹೇಳಿದೆ.
ಆದ್ದರಿಂದ, ಬೋರಾ ಅವರು ವಾಣಿಜ್ಯ ಚಿಹ್ನೆ ಬಳಸುವುದನ್ನು ನಿಲ್ಲಿಸಲು ಮತ್ತು ಬಾರ್ಬಿ ಹೆಸರನ್ನು ಬಳಸುವ ಎಲ್ಲಾ ಸಾಮಾಜಿಕ ಮಾಧ್ಯಮ ಹೇಳಿಕೆಗಳು ಮತ್ತು ಖಾತೆಗಳನ್ನು ತೆಗೆದುಹಾಕಲು ಅದು ಆದೇಶಿಸಿತು.
ಇದಲ್ಲದೆ, ಬಾರ್ಬಿ ಎಂಬ ಪದವಿರುವ ಡೊಮೇನ್ ಹೆಸರುಗಳನ್ನು ಅಮಾನತುಗೊಳಿಸುವಂತೆಯೂ ನ್ಯಾಯಾಲಯ ಆದೇಶಿಸಿತು.
ಜಾಗತಿಕವಾಗಿ ಮನ್ನಣೆ ಪಡೆದ ಬಾರ್ಬಿ ವಾಣಿಜ್ಯ ಚಿಹ್ನೆಯ ಮಾಲೀಕತ್ವ ಹೊಂದಿರುವ ಮ್ಯಾಟೆಲ್, 1985ರಿಂದ ಭಾರತದಲ್ಲಿ ಅನೇಕ ವರ್ಗಗಳಲ್ಲಿ ನೋಂದಾಯಿತವಾಗಿದ್ದು 1987ರಿಂದ ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ ಎಂದು ಮ್ಯಾಟೆಲ್ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದೆ.
ಆಗಸ್ಟ್ 2024ರಲ್ಲಿ, ಪ್ರತಿವಾದಿಗಳು (ಬೋರಾ) ವಾಣಿಜ್ಯ ಅಡುಗೆ ಸಲಕರಣೆಗಳು ಮತ್ತು ಅಡುಗೆ ಸೇವೆಗಳಿಗಾಗಿ 'ಬಾರ್ಬಿ ಒನ್ ಸ್ಟಾಪ್ ಸಲ್ಯೂಷನ್ ಫಾರ್ ಹೊರೆಕಾ ಫುಡ್ಸ್', 'ಬಾರ್ಬಿ ಎಂಟರ್ಪ್ರೈಸಸ್', 'ಬಾರ್ಬಿ ಹಾಸ್ಪಿಟಾಲಿಟಿ' ಮುಂತಾದ ಶ್ರೇಣಿಯ ಬ್ರ್ಯಾಂಡ್‌ಗಳಿಗೆ ಅರ್ಜಿ ಸಲ್ಲಿಸಿ ಬಳಸುತ್ತಿದ್ದಾರೆ ಎಂದು ಮ್ಯಾಟೆಲ್‌ಗೆ ತಿಳಿದುಬಂದಿತ್ತು.
ವಾಣಿಜ್ಯ ಚಿಹ್ನೆ ಬಳಕೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದ್ದರೂ, ಪ್ರತಿವಾದಿಗಳು ಪ್ರತಿಕ್ರಿಯಿಸಿರಲಿಲ್ಲ. ಇದಲ್ಲದೆ, ವಾಣಿಜ್ಯ ರಿಜಿಸ್ಟ್ರಿ ಕಚೇರಿ ಪ್ರತಿವಾದಿಗಳ ಅರ್ಜಿ ಮತ್ತು ಮ್ಯಾಟೆಲ್‌ನ ಹಿಂದಿನ ನೋಂದಣಿಗಳ ನಡುವಿನ ಸಂಘರ್ಷಗಳನ್ನು ಗುರುತಿಸಿತ್ತು.
ಮ್ಯಾಟೆಲ್ ಬಾರ್ಬಿ ಟ್ರೇಡ್‌ಮಾರ್ಕ್‌ನ ನೋಂದಾಯಿತ ಮಾಲೀಕ ಎಂದು ಪ್ರಕರಣದ ವಿಚಾರಣೆಯ ನಂತರ, ನ್ಯಾಯಾಲಯ ತೀರ್ಪು ನೀಡಿತು. ಹೀಗಾಗಿ ತಡೆಯಾಜ್ಞೆ ಆದೇಶವನ್ನು ನೀಡಿತ್ತು.
ಮ್ಯಾಟೆಲ್ ಪರ ವಕೀಲರಾದ ಶ್ವೇತಾಶ್ರೀ ಮಜುಂದಾರ್, ಪೃಥ್ವಿ ಸಿಂಗ್, ಪೃಥ್ವಿ ಗುಲಾಟಿ ಮತ್ತು ರಿತ್ವಿಕ್ ಮರ್ವಾಹ ವಾದ ಮಂಡಿಸಿದರು. ಪ್ರತಿವಾದಿಗಳ ಪರವಾಗಿ ಯಾರೂ ಹಾಜರಾಗಲಿಲ್ಲ.