
ತನ್ನ ಆದೇಶದಂತೆ ರಚಿಸಲಾದ ವಿಶೇಷ ಸಮಿತಿಯೊಂದಿಗೆ ಸಭೆ ನಡೆಸಿ ಯಮುನಾ ನದಿಗೆ ಸಂಸ್ಕರಿಸದ ಕೊಳಚೆ ನೀರು ಹರಿಯದಂತೆ ತಡೆಯುವುದಕ್ಕೆ ಮುಂದಾಗುವಂತೆ ರಾಷ್ಟ್ರ ರಾಜಧಾನಿಯ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ಈಚೆಗೆ ಆದೇಶಿಸಿದೆ [ಭಾರತ ಒಕ್ಕೂಟದ ವಿರುದ್ಧ ನ್ಯಾಯಾಲಯ ಕೈಗೆತ್ತಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣ].
ಸಮಿತಿ ಸಲ್ಲಿಸಿದ ವರದಿಯು ವಿವಿಧ ನ್ಯೂನತೆಗಳನ್ನು ಎತ್ತಿ ತೋರಿಸಿದ್ದು, ಸಂಸ್ಕರಿಸಿದ ನೀರನ್ನು ಮಾತ್ರ ನದಿಗೆ ಬಿಡುವುದಕ್ಕಾಗಿ ಈ ನ್ಯೂನತೆಗಳನ್ನು ಹೋಗಲಾಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಆದ್ದರಿಂದ, ಆಗಸ್ಟ್ 7ರಂದು ನಡೆಯುವ ಸಭೆಯಲ್ಲಿ ದೆಹಲಿ ಜಲ ಮಂಡಳಿ (ಡಿಜೆಬಿ), ದೆಹಲಿ ನಗರ ಪಾಲಿಕೆ (ಎಂಸಿಡಿ), ದೆಹಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಡಿಎಸ್‌ಐಐಡಿಸಿ) ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಅಧಿಕಾರಿಗಳು ಹಾಜರಿರಬೇಕು ಎಂದು ಅದು ಹೇಳಿತು.
"ಈ ಸಭೆಯ ನಂತರ, ಅಗತ್ಯವಿದ್ದರೆ, ಈ ನಿಟ್ಟಿನಲ್ಲಿ ಮತ್ತಷ್ಟು ಸಭೆಗಳನ್ನು ನಡೆಸಲು ಅಧಿಕಾರಿಗಳು ಮುಂದಾಗಬಹುದು. ಅಂತಿಮವಾಗಿ, ವಿಶೇಷ ಸಮಿತಿ ಸೂಚಿಸಿದಂತೆ ವಿವಿಧ ನ್ಯೂನತೆಗಳನ್ನು ತೊಡೆದುಹಾಕಿ ಸುಧಾರಣೆ ತರಲು ಡಿಜೆಬಿ ಮತ್ತು ಎಂಸಿಡಿ ತಮ್ಮ ಜಂಟಿ ವರದಿ ಮತ್ತು ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು" ಎಂದು ನ್ಯಾಯಾಲಯ ಜುಲೈ 28ರ ಆದೇಶದಲ್ಲಿ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 11ರಂದು ನಡೆಯಲಿದೆ.
ನದಿ ಮಾಲಿನ್ಯದ ಕುರಿತು ತಾನು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಕೊಳಚೆ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಮೂಲಕ ಗಣನೀಯ ಪ್ರಮಾಣದಲ್ಲಿ ಸಂಸ್ಕರಿಸದ ನೀರನ್ನು ಯಮುನಾ ನದಿಗೆ ಬಿಡಲಾಗುತ್ತಿದೆ ಎಂದು ಪರಿಸರ ಹೋರಾಟಗಾರ ಪಂಕಜ್ ಕುಮಾರ್ ಅವರು ಆರೋಪಿಸಿದ್ದ ಹಿನ್ನೆಲೆಯಲ್ಲಿ, ನ್ಯಾಯಾಲಯ ಸ್ಥಳ ಪರಿಶೀಲನೆ ನಡೆಸಲು ವಿಶೇಷ ಸಮಿತಿ ರಚಿಸಿತ್ತು.
ಜುಲೈ 28 ರಂದು, ಸಮಿತಿ ಎಲ್ಲಾ 37 ಎಸ್‌ಟಿಪಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿತ್ತು. ಸಂಸ್ಕರಿಸದ ಕೊಳಚೆನೀರು ನದಿಗೆ ಹರಿಯುವುದನ್ನು ತಡೆಯಲು ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದು ಅದು ವಿವರಿಸಿತ್ತು. ವರದಿಯನ್ನು ಪರಿಶೀಲಿಸಿದ ಹೈಕೋರ್ಟ್ ವರದಿಯ ಪ್ರತಿಯನ್ನು ಡಿಜೆಬಿ, ಎಂಸಿಡಿ, ಡಿಎಸ್ಐಐಡಿಸಿ ಮತ್ತು ಡಿಪಿಸಿಸಿಗೆ ನೀಡುವಂತೆ ಹೇಳಿತು. ಸಮಸ್ಯೆ ಪರಿಹರಿಸಲು ವಿಶೇಷ ಸಮಿತಿಯ ಸದಸ್ಯರು ಮತ್ತು ಅಧಿಕಾರಿಗಳು ಸಭೆ ನಡೆಸುವಂತೆ ಅದು ಆದೇಶಿಸಿತು.