

ಐಆರ್‌ಸಿಟಿಸಿ ಹಗರಣ ಪ್ರಕರಣದಲ್ಲಿ ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ವಿರುದ್ಧ ಕ್ರಿಮಿನಲ್ ಆರೋಪ ನಿಗದಿಪಡಿಸುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ ಸಿಬಿಐ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.
ಯಾದವ್ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಮಣಿಂದರ್ ಸಿಂಗ್ ಹಾಜರಾಗಿ, ಕೆಳನ್ಯಾಯಾಲಯದ ವಿಚಾರಣೆಗೆ ತಡೆ ಕೋರಿದರು. “ಒಂದು ತಿಂಗಳ ಅವಧಿಯಲ್ಲಿ ಇಬ್ಬರು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ,” ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಸಿಬಿಐ ಪ್ರತಿಕ್ರಿಯೆ ಬಳಿಕ ಮುಂದಿನ ವಿಚಾರಣೆ ನಡೆಯಲಿರುವ ಜನವರಿ 14ರಂದು ಲಾಲು ಅವರು ವಿಚಾರಣೆಗೆ ತಡೆ ಕೋರಿರುವ ಮನವಿಯನ್ನು ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಅವರು ತಿಳಿಸಿದರು. ಸಿಬಿಐ ಪ್ರತಿಕ್ರಿಯೆ ನೀಡಲಿ. ಲಾಲೂ ಅವರು ಮೊದಲೇ ಅರ್ಜಿ ಸಲ್ಲಿಸಬೇಕಿತ್ತು ಎಂದು ನ್ಯಾಯಾಲಯ ಹೇಳಿತು.
ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಪಿಸಿ ಕಾಯಿದೆ) ವಿಶಾಲ್ ಗೋಗ್ನೆ ಅವರು 2025ರ ಅಕ್ಟೋಬರ್ 13 ರಂದು ಲಾಲು ಯಾದವ್, ತೇಜಸ್ವಿ ಯಾದವ್, ರಾಬ್ರಿ ದೇವಿ ಹಾಗೂ ಇನ್ನಿತರರ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಆರೋಪ ನಿಗದಿಪಡಿಸಿದ್ದರು.
ಲಾಲು ಪ್ರಸಾದ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿನ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮಕ್ಕೆ( ಐಆರ್‌ಸಿಟಿಸಿ) ಸೇರಿದ ಹೊಟೆಲ್‌ಗಳನ್ನು ಸುಜಾತಾ ಹೊಟೆಲ್ಸ್ ಎನ್ನುವ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಟೆಂಡರ್ ನಿಯಮಾವಳಿಗಳನ್ನು ಲಾಲು ಮತ್ತವರ ಕುಟುಂಬವು ಬದಲಿಸಿತ್ತು. ಇದಕ್ಕೆ ಬದಲಾಗಿ ಲಾಲು, ಅವರ ಪತ್ನಿ ರಾಬ್ಡಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ಅವರಿಗೆ ಕೋಟಿಗಟ್ಟಲೆ ಬೆಲೆಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ವರ್ಗಾಯಿಸಲಾಗಿತ್ತು ಎಂದು ಸಿಬಿಐ ಆರೋಪಿಸಿತ್ತು.
ವಿಚಾರಣಾ ನ್ಯಾಯಾಲಯವು ಅಕ್ಟೋಬರ್ 13 ರಂದು ಹೊರಡಿಸಿದ್ದ ವಿವರವಾದ ಆದೇಶದಲ್ಲಿ, ಲಾಲು ಯಾದವ್ ಅವರಿಗೆ ಈ ಎಲ್ಲ ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಅರಿವಿತ್ತು. ಹೋಟೆಲ್‌ಗಳ ವರ್ಗಾವಣೆಯ ವಿಚಾರದಲ್ಲಿ ಅವರ ಮಧ್ಯಪ್ರವೇಶಿಸಿ ಪ್ರಭಾವ ಬೀರಿರುವುದಕ್ಕೆ ಮೇಲ್ನೋಟಕ್ಕೆ ಪುರಾವೆಗಳಿವೆ ಎಂದು ಹೇಳಿತ್ತು.
ಇಡೀ ಪ್ರಕ್ರಿಯೆಯು ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನೆಪದಲ್ಲಿ ಕ್ರೋನಿ ಕ್ಯಾಪಿಟಲಿಸಂನ (ಬಂಡವಾಳಶಾಹಿ ಶಕ್ತಿಗಳೊಂದಿಗಿನ ಅಪವಿತ್ರ ಮೈತ್ರಿ) ಉತ್ತೇಜನಕ್ಕೆ ಸಮನಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ಪಿತೂರಿಯನ್ನು ಸಂಪೂರ್ಣವಾಗಿ ಮರೆಮಾಚಲಾಗಿಲ್ಲ; ಇಡೀ ವಹಿವಾಟು ಮೇಲ್ನೋಟಕ್ಕೆ ವಂಚನೆಯಿಂದ ಕೂಡಿರುವುದು ಕಂಡುಬರುತ್ತದೆ. ಈ ಹಂತದಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.