

ಡಿಜಿಟಲ್ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿಗಳು) ಸಾಲಗಾರರ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರತಿಕ್ರಿಯೆ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ
ಡಿಜಿಟಲ್ ಸಾಲಕ್ಕೆ ಸಂಬಂಧಿಸಿದಂತೆ 2025ರಲ್ಲಿ ನೀಡಲಾಗಿದ್ದ ನಿರ್ದೇಶನ ಜಾರಿಯಾಗಿದೆಯೇ ಎಂಬ ಕುರಿತಂತೆ ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಆರ್‌ಬಿಐಗೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠ ನಿರ್ದೇಶನ ನೀಡಿದೆ.
"ಈ ಅರ್ಜಿಗೆ ಸಂಬಂಧಿಸಿದಂತೆ ಮಾತ್ರವಲ್ಲದೆ, 2025ರ ಮಾರ್ಗಸೂಚಿ ಜಾರಿಗಾಗಿ ತೆಗೆದುಕೊಂಡ ಕ್ರಮಗಳನ್ನು ವಿವರಿಸುವಂತೆ ನಾವು ಆರ್‌ಬಿಐಗೆ ಮನವಿ ಮಾಡುತ್ತಿದ್ದೇವೆ. ನಿರ್ದೇಶನಗಳ ಉಲ್ಲಂಘನೆಯಾಗಿದ್ದಲ್ಲಿ ಸಂಬಂಧಪಟ್ಟ ಘಟಕಗಳು ಯಾವ ಕ್ರಮ ಕೈಗೊಂಡಿವೆ ಎಂಬುದರ ಕುರಿತೂ ಮಾಹಿತಿ ನೀಡಬೇಕು" ಎಂದು ನ್ಯಾಯಾಲಯ ಹೇಳಿದೆ.
ಮಾರ್ಗಸೂಚಿಗಳ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿತ ಸಂಸ್ಥೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ವಿವರಿಸುವಂತೆ ನ್ಯಾಯಾಲಯ ಆರ್‌ಬಿಐಗೆ ನಿರ್ದೇಶನ ನೀಡಿದೆ.
ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿರುವ ಅಪ್ಲಿಕೇನ್‌ಗಳು ಆರ್‌ಬಿಐನ ಡಿಜಿಟಲ್ ಸಾಲ ಮಾರ್ಗಸೂಚಿ 2025ನ್ನು ಉಲ್ಲಂಘಿಸಿದ್ದು ಬಳಕೆದಾರರ ವೈಯಕ್ತಿಕ ದತ್ತಾಂಶ ಹೊರತೆಗೆಯುತ್ತಿವೆ ಮತ್ತು ಬಲವಂತದ ಡಿಜಿಟಲ್ ಸಾಲ ಸಮ್ಮತಿ ಕ್ರಮಗಳನ್ನು ಅನುಸರಿಸುತ್ತಿವೆ ಎಂದು ಅರ್ಜಿ ದೂರಿತ್ತು.
ದತ್ತಾಂಶ ಸುರಕ್ಷತೆ ಮತ್ತು ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಒಳಗೊಂಡ ಡಿಜಿಟಲ್ ಸಾಲ ಚಟುವಟಿಕೆಗಳಿಗೆ ಸಂಬಂಧಿಸಿದ ಶಾಸನಬದ್ಧ ಮಾರ್ಗಸೂಚಿಗಳನ್ನು ಆರ್‌ಬಿಐ ಹೊರಡಿಸಿದೆ. ಇಷ್ಟಾದರೂ ಉಲ್ಲಂಘನೆ ಮುಂದುವರೆದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಹೀಗಾಗಿ ನಿಯಮ ಉಲ್ಲಂಘಿಸುವ ಎನ್‌ಬಿಎಫ್‌ಸಿಗಳು ಹಾಗೂ ಡಿಜಿಟಲ್ ಸಾಲ ವೇದಿಕಗಳ ಪರವಾನಗಿ ರದ್ದುಪಡಿಸಬೇಕು ಅಥವಾ ಅಮಾನತುಗೊಳಿಸಬೇಕು. ಮಾರ್ಗಸೂಚಿ ಪಾಲಿಸದ ಅಪ್ಲಿಕೇಷನ್‌ಗಳನ್ನು ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದ ತೆಗೆದುಹಾಕಲು ಕೇಂದ್ರ ಹಣಕಾಸು ಸಚಿವಲಾಯ, ಆರ್‌ಬಿಐ, ಗೂಗಲ್ ಹಾಗೂ ಆಪಲ್‌ಗೆ ಸೂಚಿಸಬೇಕು ಎಂದು ಅರ್ಜಿ ಕೋರಿತ್ತು. ಮುಂದಿನ ವಿಚಾರಣೆ ಏಪ್ರಿಲ್ 1ರಂದು ನಡೆಯಲಿದೆ.