ನವದೆಹಲಿಯ ಹೃದಯ ಭಾಗದಲ್ಲಿ ಎಎಪಿ ಅಧಿನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ವಸತಿ ಸೌಕರ್ಯ ಕಲ್ಪಿಸುವಂತೆ ಕೋರಿ ಆಮ್ ಆದ್ಮಿ ಪಕ್ಷ (ಎಎಪಿ) ಸಲ್ಲಿಸಿದ್ದ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ [ಆಮ್ ಆದ್ಮಿ ಪಕ್ಷ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಮೂಲಕ ಭಾರತ ಒಕ್ಕೂಟ ನಡುವಣ ಪ್ರಕರಣ].
ಮನವಿ ಕುರಿತಂತೆ ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರತಿಕ್ರಿಯೆ ಕೇಳಿದೆ.
ವಸತಿ ಸಚಿವಾಲಯ ಜುಲೈ 31, 2014 ರಂದು ಹೊರಡಿಸಿರುವ ಕಚೇರಿಯ ಜ್ಞಾಪನಾಪತ್ರದ ಪ್ರಕಾರ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೆ ಒಂದೊಮ್ಮೆ ಬೇರಾವುದೇ ಅರ್ಹತೆಯ ಅಡಿ ಬೇರಾವುದೇ ವಸತಿಗೃಹವನ್ನು ನೀಡಿಲ್ಲವಾದಲ್ಲಿ ಅವರು ತಮಗೆ ಪ್ರಸ್ತುತ ನೀಡಲಾಗಿರುವ ವಸತಿಗೃಹದಲ್ಲಿ ಮುಂದುವರಿಯಬಹುದು ಅಥವಾ ಅವರಿಗೆ ಬೇರೊಂದು ವಸತಿಗೃಹ ಮಂಜೂರು ಮಾಡಬಹುದು ಎಂಬುದಾಗಿ ಎಎಪಿ ಪರವಾಗಿ ಹಿರಿಯ ವಕೀಲ ರಾಹುಲ್ ಮೆಹ್ರಾ ವಾದಿಸಿದರು.
ಕೇಜ್ರಿವಾಲ್ ಅವರು ವಸತಿ ಸೌಕರ್ಯ ಪಡೆಯಲು ಅರ್ಹರಾಗಿದ್ದು ಎಎಪಿ ಈಗಾಗಲೇ ಈ ಬಗ್ಗೆ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಪರವಾಗಿ ಸ್ಥಾಯಿ ವಕೀಲ ಅಪೂರ್ವ್ ಕುರುಪ್ ನೋಟಿಸ್ ಪಡೆದರು. ನವೆಂಬರ್ 26ರಂದು ನ್ಯಾಯಾಲಯ ಮುಂದಿನ ವಿಚಾರಣೆ ನಡೆಸಲಿದೆ.