
ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಬೇಕೆಂಬ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿ ಒದಗಿಸುವಂತೆ ವಿಶ್ವವಿದ್ಯಾಲಯಕ್ಕೆ ಸಿಐಸಿ 2017ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಸಚಿನ್ ದತ್ತ ಪುರಸ್ಕರಿಸಿದರು. "ಸಿಐಸಿ ಆದೇಶವನ್ನು ರದ್ದುಗೊಳಿಸಲಾಗಿದೆ" ಎಂದು ಏಕ ಸದಸ್ಯ ಪೀಠವು ತೀರ್ಪು ಪ್ರಕಟಣೆ ವೇಳೆ ಹೇಳಿತು.
ಪ್ರಧಾನಿ ಮೋದಿಯವರ ತಮ್ಮ ಶೈಕ್ಷಣಿಕ ಪದವಿಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಅವುಗಳನ್ನು ಬಹಿರಂಗಪಡಿಸಬೇಕು ಎಂದು ಆರ್‌ಟಿಐ ಅರ್ಜಿದಾರರು ದಾವೆ ಹೂಡಿದ್ದರು. ತಾನು 1978 ರಲ್ಲಿ ಡಿಯುನಿಂದ ಬಿಎ ರಾಜ್ಯಶಾಸ್ತ್ರ ಕೋರ್ಸ್‌ನಲ್ಲಿ ಪದವಿ ಪಡೆದಿರುವುದಾಗಿ ಮೋದಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ವಿವರಿಸಿದ್ದರು.
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2016ರಲ್ಲಿ ಪ್ರಧಾನಿ ಮೋದಿಯವರು "ತಮ್ಮ ಶೈಕ್ಷಣಿಕ ಪದವಿ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಪದವಿ ಪ್ರಮಾಣಪತ್ರಗಳನ್ನು ಬಹಿರಂಗಪಡಿಸಬೇಕು ಎಂದು ಕೋರಿದ್ದರು.
ಅದಕ್ಕೂ ಒಂದು ವರ್ಷದ ಮೊದಲು ದೆಹಲಿ ವಿಶ್ವವಿದ್ಯಾಲಯದಿಂದ ಪ್ರಧಾನಿ ಮೋದಿಯವರ ಪದವಿಯ ವಿವರಗಳನ್ನು ಕೋರಿ ಆರ್‌ಟಿಐ ಅಡಿ ಆಮ್ ಆದ್ಮಿ ಪಕ್ಷದ ಬೆಂಬಲಿಗ ನೀರಜ್ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಮಾಹಿತಿ ಖಾಸಗಿಯಾಗಿದ್ದು ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಸಂಬಂಧವಿಲ್ಲ ಎಂದ ವಿವಿ ಪದವಿ ವಿವರ ಬಹಿರಂಗಪಡಿಸಲು ನಿರಾಕರಿಸಿತು.
ಡಿಸೆಂಬರ್ 2016ರಲ್ಲಿ, ಶರ್ಮಾ ವಿಶ್ವವಿದ್ಯಾಲಯದ ಪ್ರತಿಕ್ರಿಯೆಯ ವಿರುದ್ಧ ಸಿಐಸಿಗೆ ಅರ್ಜಿ ಸಲ್ಲಿಸಿದರು. ಅಂದಿನ ಮಾಹಿತಿ ಆಯುಕ್ತ ಪ್ರೊ ಎಂ ಆಚಾರ್ಯುಲು ಅವರು 1978ರಲ್ಲಿ ಬಿ ಎ ಪದವಿ ಪಡೆದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿವರವುಳ್ಳ ರೆಜಿಸ್ಟರ್ ನೀಡುವಂತೆ ಅದೇಶಿಸಿದ್ದರು. ಈ ನಿರ್ಧಾರ ಪ್ರಶ್ನಿಸಿ ವಿವಿ ಜನವರಿ 23, 2017ರಂದು ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಜನವರಿ 2017ರಲ್ಲಿ ಸಿಐಸಿ ಆದೇಶಕ್ಕೆ ತಡೆ ನೀಡಿತ್ತು.
ಜನವರಿ 23, 2017ರಂದು ವಿಶ್ವವಿದ್ಯಾಲಯ ಸಿಐಸಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಸಿಐಸಿಯ ಆದೇಶ ದೂರಗಾಮಿ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಹೀಗೆ ಮಾಡಿದರೆ ಲಕ್ಷಾಂತರ ಅರ್ಜಿಗಳ ಪ್ರವಾಹವೇ ಹರಿದು ಬರುತ್ತದೆ ಎಂದು ವಿವಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದರು. ಜನವರಿ 2017 ರಲ್ಲಿ ಶರ್ಮಾ ಅವರಿಗೆ ನೋಟಿಸ್ ನೀಡಿದ್ದ ನ್ಯಾಯಾಲಯವು ಸಿಐಸಿ ಆದೇಶಕ್ಕೆ ತಡೆ ನೀಡಿತು.
ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಕೋಟ್ಯಂತರ ವಿದ್ಯಾರ್ಥಿಗಳ ಪದವಿ ವಿವರಗಳನ್ನು ವಿಶ್ವಸ್ಥ ಜವಾಬ್ದಾರಿಯಿಂದ (ಫಿಡ್ಯೂಷಿಯರಿ - ಮತ್ತೊಬ್ಬರ ಮಾಹಿತಿಯನ್ನು ನಂಬಿಕೆಯಿಂದ ಇರಿಸಿಕೊಂಡಿರುವ ಜವಾಬ್ದಾರಿಯುತ ಸಂಸ್ಥೆ) ಇರಿಸಿಕೊಂಡಿವೆ ಎಂಬ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರ ವಾದಗಳನ್ನು ಗಮನಿಸಿದ ನಂತರ ನ್ಯಾಯಾಲಯವು ಜನವರಿ 2017 ರಲ್ಲಿ ಶರ್ಮಾ ಅವರಿಗೆ ನೋಟಿಸ್ ನೀಡಿ ಆದೇಶವನ್ನು ತಡೆಹಿಡಿಯಿತು .
ಪ್ರಕರಣದ ಈ ಬಾರಿಯ ವಿಚಾರಣೆ ವೇಳೆ ಎಸ್ ಜಿ ಮೆಹ್ತಾ ಅವರು ಪ್ರಧಾನಿ ಮೋದಿ ಅವರ ಪದವಿ ವಿವರಗಳನ್ನು ಅರಿಯುವುದು ಆತ್ಯಂತಿಕ ಹಕ್ಕಲ್ಲ ಎಂದು ವಾದಿಸಿದರು. ಆರ್‌ಟಿಐ ಕಾಯ್ದೆಯಡಿಯಲ್ಲಿ ವೈಯಕ್ತಿಕ ಮಾಹಿತಿ ಕೇಳುವಂತಿಲ್ಲ. ಸಾರ್ವಜನಿಕ ಹುದ್ದೆಯಲ್ಲಿರುವವರನ್ನು ಬೆದರಿಸಲು ಆರ್‌ಟಿಐ ಕಾಯಿದೆ ಬಳಸುವಂತಿಲ್ಲ. ಆರ್‌ಟಿಐ ಅರ್ಜಿದಾರರು ಮಾಹಿತಿ ಹಕ್ಕು ಕಾಯಿದೆ ಅಣಕಿಸುತ್ತಿದ್ದಾರೆ ಎಂದರು.
ಆರ್‌ಟಿಐ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು, ವಿದ್ಯಾರ್ಥಿಗಳ ಪದವಿ ವಿವರಗಳನ್ನು ವಿವಿಯು ವಿಶ್ವಸ್ಥನಾಗಿ (ಫಿಡ್ಯೂಷಿಯರಿ) ಇರಿಸಿಕೊಂಡಿದೆ ಎಂಬ ವಾದವನ್ನು ಪ್ರಶ್ನಿಸಿದರು.
ಯಾರಾದರೂ ಚಾಲನಾ ಪರೀಕ್ಷೆಗೆ ಹೋದರೆ ಉತ್ತೀರ್ಣ ಅಥವಾ ಅನುತ್ತೀರ್ಣ ಎಂಬ ಮಾಹಿತಿ ಬಹಿರಂಗಗೊಳ್ಳುತ್ತದೆ. ಫಿಡ್ಯೂಷಿಯರಿ ವಿಚಾರ ವಿಶ್ವವಿದ್ಯಾಲಯದ ಮೌಲ್ಯಮಾಪನ ಪತ್ರಿಕೆಗಳಿಗೆ ಅನ್ವಯವಾಗದು ಎಂದರು. ವಿವರ ಬಹಿರಂಗವಾದರೆ ಸಾರ್ವಜನಿಕರಿಗೆ ಒಳಿತಾಗುತ್ತದೆಯೇ ಅಥವಾ ಹಾನಿಯಾಗುತ್ತದೆಯೇ ಎಂಬುದನ್ನೂ ಮಾಹಿತಿ ಅಧಿಕಾರಿ ಗಮನಿಸಬೇಕಾಗುತ್ತದೆ. "ಪದವಿ ಸಂಬಂಧಿತ ಮಾಹಿತಿಯು ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ. ಸಾಮಾನ್ಯ ವ್ಯಕ್ತಿಯೇ ಆಗಲಿ ಅಥವಾ ಸೆಲೆಬ್ರಿಟಿಗಳೇ ಆಗಲಿ ಸಂಬಂಧಿಸಿದ ಮಾಹಿತಿ ಪಡೆಯಲು ಅವಕಾಶ ಇರಬೇಕು" ಎಂದು ಅವರು ಹೇಳಿದರು.