ವಿವಾದಾಸ್ಪದ ಜಾಗವೊಂದನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ಸೇರಿದ್ದೇ ವಿನಾ ಮಸೀದಿಗೆ ಅಲ್ಲ ಎಂದು ತೀರ್ಪು ನೀಡಿದ್ದ ಏಕಸದಸ್ಯ ಪೀಠದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಹಿ ಈದ್ಗಾ ವ್ಯವಸ್ಥಾಪಕ ಸಮಿತಿ ಕ್ಷಮೆಯಾಚಿಸಬೇಕು ಎಂದು ದೆಹಲಿ ಹೈಕೋರ್ಟ್ ಬುಧವಾರ ತಾಕೀತು ಮಾಡಿದೆ.
ಶಾಹಿ ಈದ್ಗಾ ಉದ್ಯಾನದಲ್ಲಿ ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪಿಸಲು ಡಿಡಿಎಗೆ ಅನುಮತಿ ನೀಡಿದ ಏಕ ಸದಸ್ಯ ಪೀಠದ ತೀರ್ಪಿನ ಸಮಂಜಸತೆ ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಕೆಲ ಸಾಲುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಇಂದು ಪ್ರಕರಣದ ವಿಚಾರಣೆ ನಡೆದ ವೇಳೆ, ವಿವಾದಕ್ಕೆ ಕೋಮು ಬಣ್ಣ ನೀಡಿದ್ದಕ್ಕಾಗಿ ಸಮಿತಿಯನ್ನು ಖಂಡಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ನಾಳೆಯೊಳಗೆ ಕ್ಷಮೆಯಾಚಿಸುವಂತೆ ತಾಕೀತು ಮಾಡಿತು.
ನ್ಯಾಯಾಲಯದ ಮುಖೇನ ಕೋಮು ರಾಜಕಾರಣ ಮಾಡಲಾಗುತ್ತಿದೆ! ನೀವು ಪ್ರಕರಣವನ್ನು ಧಾರ್ಮಿಕ ವಿಷಯ ಎಂಬಂತೆ ಬಿಂಬಿಸುತ್ತಿದ್ದೀರಿ, ಆದರೆ ಇದು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಆಕ್ಷೇಪಿಸಿದರು.
ರಾಣಿ ಝಾನ್ಸಿ ಪ್ರತಿಮೆ ಸ್ಥಾಪಿಸುವುದು ಅತೀವ ಹೆಮ್ಮೆಯ ಸಂಗತಿಯಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಅದು ನಿಮಗೆ ಸಮಸ್ಯೆಯಾಗಿದೆ ಎಂದು ನ್ಯಾ. ಗೆಡೆಲಾ ಕಿಡಿಕಿಡಿಯಾದರು.
"ಝಾನ್ಸಿ ರಾಣಿ ಧಾರ್ಮಿಕ ಎಲ್ಲೆಗಳನ್ನು ಮೀರಿದ ರಾಷ್ಟ್ರೀಯ ನಾಯಕಿ. ಅರ್ಜಿದಾರರು ಕೋಮು ಗೆರೆಗಳನ್ನು ಎಳೆಯುತ್ತಿದ್ದು ಅದಕ್ಕಾಗಿ ನ್ಯಾಯಾಲಯವನ್ನು ಬಳಸುತ್ತಿದ್ದಾರೆ. ಕೋಮು ವಿಭಜನೆ ಅಗತ್ಯವಿಲ್ಲ. ನಿಮ್ಮ ಸಲಹೆಯೇ ವಿಭಜಕವಾಗಿದೆ. ಜಮೀನು ನಿಮಗೆ ಸೇರಿದ್ದಾದರೆ ನೀವೇ ಪ್ರತಿಮೆ ಸ್ಥಾಪನೆಗೆ ಖುದ್ದು ಮುಂದಾಗಬೇಕಿತ್ತು" ಎಂಬುದಾಗಿ ನ್ಯಾಯಾಲಯ ಚಾಟಿ ಬೀಸಿತು.
ಶಾಹಿ ಈದ್ಗಾಗೆ ಎದುರಾಗಿ ಝಾನ್ಸಿ ಮಹಾರಾಣಿ ಪ್ರತಿಮೆಯನ್ನು ಸ್ಥಾಪಿಸುವುದರಿಂದ ಆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ಶಾಹಿ ಈದ್ಗಾ ಸಮಿತಿ ಪರ ವಕೀಲರು ಇಂದು ವಾದಿಸಿದ್ದರು.
ನ್ಯಾಯಾಲಯದ ಟೀಕೆಗಳ ಬಳಿಕ ಸಮಿತಿ ಪರ ವಕೀಲರು ಬೇಷರತ್ ಕ್ಷಮೆಯಾಚನೆಗೆ ಒಪ್ಪಿರುವುದಾಗಿ ತಿಳಿಸಿದ್ದಲ್ಲದೆ ಮೇಲ್ಮನವಿ ಹಿಂಪಡೆಯಲು ಅನುಮತಿ ಕೋರಿದರು. ಪ್ರಕರಣದ ಮುಂದಿನ ವಿಚಾರಣೆ ಶುಕ್ರವಾರ (ಸೆಪ್ಟೆಂಬರ್ 27) ನಡೆಯಲಿದೆ.