ಮನೆ ಮನೆಗೆ ಪಡಿತರ ತಲುಪಿಸುವ ದೆಹಲಿ ಸರ್ಕಾರದ ಯೋಜನೆಯನ್ನು ದೆಹಲಿ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಆಮ್ ಆದ್ಮಿ ಪಕ್ಷ ಸರ್ಕಾರದ ಪ್ರಮುಖ ಯೋಜನೆಯಾದ ‘ಮುಖ್ಯ ಮಂತ್ರಿ ಘರ್ ಘರ್ ರೇಷನ್ ಯೋಜನಾ’ವನ್ನು ರದ್ದುಗೊಳಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಆದೇಶ ಪ್ರಕಟಿಸಿತು. ತೀರ್ಪಿನ ವಿವರವಾದ ಪ್ರತಿ ಇನ್ನಷ್ಟೇ ಲಭಿಸಬೇಕಿದೆ.
ಯೋಜನೆಯ ಅನುಷ್ಠಾನಕ್ಕಾಗಿ ವಿತರಣಾ ಏಜೆನ್ಸಿಗಳನ್ನು ಆಹ್ವಾನಿಸಿ ದೆಹಲಿ ಸರ್ಕಾರ ಹೊರಡಿಸಿದ್ದ ಮೂರು ಟೆಂಡರ್‌ಗಳನ್ನೂ ಸಹ ಇದೇ ವೇಳ ನ್ಯಾಯಾಲಯವು ರದ್ದುಗೊಳಿಸಿದೆ.
ಮುಂದುವರೆದು ನ್ಯಾಯಾಲಯವು, ದೆಹಲಿ ಸರ್ಕಾರವು ತನ್ನದೇ ಸಂಪನ್ಮೂಲಗಳಿಂದ ಇಂತಹ ಯೋಜನೆಯನ್ನು ರೂಪಿಸುವ ಅಧಿಕಾರವನ್ನು ಹೊಂದಿದ್ದು, ಇದು ಪ್ರಸ್ತುತ ಇರುವ ಕಾನೂನುಗಳಿಗೆ ಅನುಗುಣವಾಗಿ ಇರಬೇಕು ಎಂದು ಒತ್ತಿ ಹೇಳಿದೆ.
ಯೋಜನೆ ʼರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರದ ಕಾಯಿದೆʼ, ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ನಿಯಮಾವಳಿ ಹಾಗೂ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ದೆಹಲಿ ಸರ್ಕಾರಿ ಪಡಿತರ ವಿತರಕರ ಸಂಘವು ಹೈಕೋರ್ಟ್‌ನಲ್ಲಿ ಈ ಹಿಂದೆ ವಾದಿಸಿತ್ತು.
ಇದಕ್ಕೆ ಕೇಂದ್ರ ಸರ್ಕಾರ ಕೂಡ ಬೆಂಬಲ ವ್ಯಕ್ತಪಡಿಸಿ “ನ್ಯಾಯಬೆಲೆ ಅಂಗಡಿಗಳು ಆಹಾರ ಭದ್ರತಾ ಕಾಯಿದೆಯ ಅವಿಭಾಜ್ಯ ಅಂಗಗಳಾಗಿದ್ದು, ಕೈಬಳಕೆ ಪಾವತಿ ಯಂತ್ರಗಳು ಈ ಅಂಗಡಿಗಳ ಸಂಯೋಜಿತ ಅಂಗವಾಗಿದೆ” ಎಂದಿತ್ತು. ಆದರೆ ಮನೆ- ಮನೆಗೆ ಪಡಿತರ ವಿತರಿಸುವ ವ್ಯವಸ್ಥೆಯಿಂದ ವ್ಯವಸ್ಥೆಯ ಸೋರಿಕೆ ತಡೆಯಬಹುದು ಎಂದು ದೆಹಲಿ ಸರ್ಕಾರ ಯೋಜನೆಯನ್ನು ಸಮರ್ಥಿಸಿಕೊಂಡಿತ್ತು.