ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಪ್ರಕರಣ: ನಾಲ್ವರ ಜೀವಾವಧಿ ಶಿಕ್ಷೆ ಅಮಾನತಿನಲ್ಲಿಟ್ಟ ದೆಹಲಿ ಹೈಕೋರ್ಟ್

ಇಂಡಿಯಾ ಟುಡೇ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸೌಮ್ಯಾ ಅವರು ಸೆಪ್ಟೆಂಬರ್ 2008ರಲ್ಲಿ ವಸಂತ್ ಕುಂಜ್ ಪ್ರದೇಶದ ಬಳಿ ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು.
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್
Published on

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರನ್ನು 2008ರಲ್ಲಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ ನಾಲ್ವರ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಸೋಮವಾರ ಅಮಾನತಿನಲ್ಲಿರಿಸಿದೆ.

ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಗಿರೀಶ್ ಕತ್ಪಾಲಿಯಾ ಅವರಿದ್ದ ವಿಭಾಗೀಯ ಪೀಠ ಅಪರಾಧಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್ ಮತ್ತು ಬಲ್ಜೀತ್ ಮಲಿಕ್ ಅವರಿಗೆ ಜಾಮೀನು ನೀಡಿತು.

ಇದೇ ವೇಳೆ ತಮಗೆ ವಿಧಿಸಿದ ಶಿಕ್ಷೆಯ ವಿರುದ್ಧ ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸುವವರೆಗೂ ಅವರ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯವು ಅಮಾನತಿನಲ್ಲಿರಿಸಿತು.

ಕೊಲೆಗೆ ಸಂಬಂಧಿಸಿದಂತೆ ದೆಹಲಿಯ ಸಾಕೇತ್ ನ್ಯಾಯಾಲಯ 2023ರ ನವೆಂಬರ್ 24ರಂದು ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಕ್ಟೋಬರ್ 18ರಂದು ಅವರನ್ನು ತಪ್ಪಿತಸ್ಥರು ಎಂದು ಘೋಷಿಸಲಾಗಿತ್ತು. ಮತ್ತೊಬ್ಬ ಆರೋಪಿ ಅಜಯ್ ಸೇಥಿ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

'ಇಂಡಿಯಾ ಟುಡೇ' ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಸೌಮ್ಯಾ ಅವರು ಸೆಪ್ಟೆಂಬರ್ 2008ರಲ್ಲಿ ವಸಂತ್ ಕುಂಜ್ ಪ್ರದೇಶದ ಬಳಿ ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ತಲೆಗೆ ಗುಂಡು ಹೊಕ್ಕ ಕಾರಣ ಆಕೆ ಮೃತಪಟ್ಟಿದ್ದಾರೆ ಎಂದು ವಿಧಿವಿಜ್ಞಾನ ವರದಿಗಳು ತಿಳಿಸಿದ್ದವು. ಪೊಲೀಸರ ಪ್ರಕಾರ, ಸೌಮ್ಯ ಅವರು ಕಚೇರಿಯಿಂದ ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ಅವರನ್ನು ಬೆನ್ನಟ್ಟಿ ಗುಂಡು ಹಾರಿಸಲಾಗಿತ್ತು.

ಪ್ರಕರಣದಲ್ಲಿ ಭಾಗಿಯಾಗಿದ್ದ ರವಿ ಕಪೂರ್ ಮತ್ತು ಅಮಿತ್ ಶುಕ್ಲಾ ಅವರನ್ನು ಪೊಲೀಸರು 2009ರ ಮಾರ್ಚ್‌ನಲ್ಲಿ ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದರು. ತನಿಖೆಯ ವೇಳೆ ಆರೋಪಿಗಳು ಸೌಮ್ಯ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದರು.

ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ಕಪೂರ್, ಶುಕ್ಲಾ, ಕುಮಾರ್ ಮತ್ತು ಮಲಿಕ್ ತಪ್ಪಿತಸ್ಥರು ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಐಪಿಸಿ, ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯ (ಮೋಕಾ) ವಿವಿಧ ಸೆಕ್ಷನ್‌ಗಳಡಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿತ್ತು.

Kannada Bar & Bench
kannada.barandbench.com