ಪಿಎಂ ಕೇರ್ಸ್‌ ನಿಧಿಯನ್ನು ದೇಶದ ನಿಧಿ ಎಂದು ಘೋಷಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಮನವಿ

ಪಿಎಂ ಕೇರ್ಸ್‌ ಅನ್ನು ಮಾಹಿತಿ ಹಕ್ಕು ಕಾಯಿದೆ ಅಡಿ 'ಸಾರ್ವಜನಿಕ ಸಂಸ್ಥೆ' ಎಂದು ಘೋಷಿಸುವಂತೆ ಸಲ್ಲಿಸಲಾಗಿರುವ ಮನವಿಯ ಜೊತೆ ಸೇರಿಸಿ ಏಪ್ರಿಲ್‌ 23ರಂದು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
PM CARES Fund
PM CARES Fund
Published on

'ತುರ್ತು ಸಂದರ್ಭಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ನೀಡುವ ಪ್ರಧಾನ ಮಂತ್ರಿಯವರ ನಿಧಿ'ಯನ್ನು (ಪಿಎಂ ಕೇರ್ಸ್‌) ಸಂವಿಧಾನದ 12ನೇ ವಿಧಿಯಡಿ ದೇಶದ ನಿಧಿ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯನ್ನು ಏಪ್ರಿಲ್‌ನಲ್ಲಿ ದೆಹಲಿ ಹೈಕೋರ್ಟ್‌ ನಡೆಸಲಿದೆ. ಪಿಎಂ ಕೇರ್ಸ್‌ ಅನ್ನು ಮಾಹಿತಿ ಹಕ್ಕು ಕಾಯಿದೆ ಅಡಿ 'ಸಾರ್ವಜನಿಕ ಸಂಸ್ಥೆ' ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ, ವಿಚಾರಣೆಗೆ ಬಾಕಿ ಉಳಿದಿರುವ ಮನವಿಯೊಟ್ಟಿಗೆ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ. ಎರಡೂ ಮನವಿಗಳನ್ನು ಸಮ್ಯಕ್‌ ಗಂಗ್ವಾಲ್‌ ಎಂಬವರು ಸಲ್ಲಿಸಿದ್ದಾರೆ (ಸಮ್ಯಕ್‌ ಗಂಗ್ವಾಲ್‌ ವರ್ಸಸ್‌ ಪಿಎಂಒ, ಸಮ್ಯಕ್‌ ಗಂಗ್ವಾಲ್‌ ವರ್ಸಸ್‌ ಭಾರತ ಸರ್ಕಾರ).

ಪಿಎಂ ಕೇರ್ಸ್‌ ಅನ್ನು ದೇಶದ ನಿಧಿ ಎಂದು ಘೋಷಿಸುವಂತೆ ಕೋರಿದ್ದ ಮನವಿಯು ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರಿದ್ದ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಆದರೆ, ಪೀಠವು ಪಿಐಎಲ್‌ಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿಗೊಳಿಸಲು ಒಲವು ತೋರಲಿಲ್ಲ. ಅದರೆ, ಮಾಹಿತಿ ಹಕ್ಕಿನ ವ್ಯಾಪ್ತಿಯಡಿ ಪಿಎಂ ಕೇರ್ಸ್‌ ತರುವಂತೆ ಕೋರಲಾಗಿರುವ ಮನವಿಯನ್ನು ಇದರ ಜೊತೆ ಸೇರಿಸಿ ಎರಡೂ ಮನವಿಗಳ ವಿಚಾರಣೆಯನ್ನು ಏಪ್ರಿಲ್‌ 23ರಂದು ನಡೆಸುವುದಾಗಿ ಪೀಠ ಹೇಳಿತು.

ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಉಂಟಾಗಿದ್ದರಿಂದ ಜನರಿಗೆ ನೆರವಾಗಲು ಕಳೆದ ವರ್ಷದ ಮಾರ್ಚ್‌ನಲ್ಲಿ ಪ್ರಧಾನ ಮಂತ್ರಿ ಇದನ್ನು ಹುಟ್ಟು ಹಾಕಿದ್ದಾರೆ. ಪಿಎಂ ಕೇರ್ಸ್‌ ಟ್ರಸ್ಟಿಗಳಾಗಿ ಪ್ರಧಾನ ಮಂತ್ರಿ, ರಕ್ಷಣಾ ಸಚಿವ, ಗೃಹ ಸಚಿವ ಮತ್ತು ಹಣಕಾಸು ಸಚಿವರು ಇದ್ದಾರೆ. ಪಿಎಂ ಕೇರ್ಸ್‌ ಆರಂಭಿಸಿದ ತಕ್ಷಣ ಇದನ್ನು ಭಾರತ ಸರ್ಕಾರ ನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಇದಕ್ಕಾಗಿ ಸರ್ಕಾರದ ‘.gov.inʼ ಎಂಬ ಡೊಮೈನ್, ಸರ್ಕಾರದ ಲಾಂಛನ, ಪ್ರಧಾನ ಮಂತ್ರಿ ಹೆಸರಿನ ಸಂಕ್ಷಿಪ್ತ ರೂಪವಾದ ಪಿಎಂ ಕೇರ್ಸ್‌ ಸೇರಿದಂತೆ ಹಲವು ಸರ್ಕಾರಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ, ನವದೆಹಲಿಯ ದಕ್ಷಿಣ ಬ್ಲಾಕ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯ ವಿಳಾಸವನ್ನು ಅಧಿಕೃತ ವಿಳಾಸವನ್ನಾಗಿ ನೀಡಲಾಗಿದೆ. ಪಿಎಂಒ ಅಧಿಕಾರಿಗಳು ಕಾರ್ಯದರ್ಶಿ ಇದಕ್ಕೆ ನೆರವು ನೀಡಿದ್ದಾರೆ. ಇಡೀ ನಿಧಿಯನ್ನು ಭಾರತ ಸರ್ಕಾರ ನಿಯಂತ್ರಿಸುತ್ತದೆ. ಅಲ್ಲದೇ, ನಿಧಿಯ ಪರವಾಗಿ ದೇಣಿಗೆ ಸಂಗ್ರಹಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸುತ್ತದೆ. ಪಿಎಂಒ ಮೂಲಕ ಭಾರತ ಸರ್ಕಾರವು ಪಿಎಂ ಕೇರ್ಸ್‌ ಸೃಷ್ಟಿಸಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪಿಎಂ ಕೇರ್ಸ್‌ ನಿಧಿಯು ಸಂವಿಧಾನದ 12ನೇ ವಿಧಿಯಡಿ ದೇಶದ ನಿಧಿಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಕಳೆದ ವರ್ಷದ ಮಾರ್ಚ್‌ 27-31ರ ಅವಧಿಯಲ್ಲಿ 3,076.62 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ. ಇಂಡಿಯಾಸ್ಪೆಂಡ್‌ ವೆಬ್‌ಸೈಟ್‌ ಪ್ರಕಾರ 9,677.9 ಕೋಟಿ ರೂಪಾಯಿ ದೇಣಿಗೆಯಾಗಿ ಸಂಗ್ರಹವಾಗಿದೆ. ಈ ಪೈಕಿ 4,308.3 ಕೋಟಿ ರೂಪಾಯಿ ದೇಣಿಗೆಯು ಸರ್ಕಾರಿ ಸಂಸ್ಥೆಗಳಿಂದ ಹರಿದು ಬಂದಿದೆ (ಸಿಬ್ಬಂದಿ ವೇತನ). ಇಷ್ಟಾಗಿಯೂ ಪಿಎಂ ಕೇರ್ಸ್‌ ವೆಬ್‌ಸೈಟ್‌ನಲ್ಲಿ ಪಿಎಂ ಕೇರ್ಸ್‌ ಟ್ರಸ್ಟ್‌ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿಲ್ಲ ಎಂದು ಹೇಳಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Also Read
ಪಿಎಂ ಕೇರ್ಸ್‌ ನಿಧಿಗೆ ಸಲ್ಲಿಕೆಯಾಗಿರುವ ಕೋವಿಡ್ ದೇಣಿಗೆ ವರ್ಗಾಯಿಸುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಅರ್ಜಿದಾರರ ಕೋರಿಕೆ: ಸಂವಿಧಾನದ 12ನೇ ವಿಧಿಯಡಿ ಪಿಎಂ ಕೇರ್ಸ್‌ ಅನ್ನು ದೇಶದ ನಿಧಿ ಎಂದು ಘೋಷಿಸಬೇಕು. ಕಾಲಕಾಲಕ್ಕೆ ಪಿಎಂ ಕೇರ್ಸ್‌ ನಿಧಿಯ ಆಡಿಟ್‌ ವರದಿ ಸಲ್ಲಿಸಲು ನಿರ್ದೇಶಿಸಬೇಕು. ತ್ರೈಮಾಸಿಕಕ್ಕೆ ಒಮ್ಮೆ ದೇಣಿಗೆ ಸಂಗ್ರಹ ಮತ್ತು ಅದರ ಖರ್ಚಿನ ವಿವರವನ್ನು ಪ್ರಕಟಿಸಬೇಕು.

ಇದು ಸಾದ್ಯವಿಲ್ಲವಾದರೆ, ಪಿಎಂ ಕೇರ್ಸ್‌ ನಿಧಿಯು ಭಾರತ ಸರ್ಕಾರದ ನಿಧಿಯಲ್ಲ ಎಂದು ಘೋಷಿಸಬೇಕು. ಪ್ರಧಾನ ಮಂತ್ರಿ ಹೆಸರು, ಅದರ ಸಂಕ್ಷಿಪ್ತ ರೂಪ ಮತ್ತಿತರ ಅಂಶಗಳನ್ನು ವೆಬ್‌ಸೈಟ್‌, ಜಾಹೀರಾತು, ಅಧಿಕೃತ ಮತ್ತು ಅನಧಿಕೃತ ದಾಖಲೆಗಳಲ್ಲಿ ಹೊಂದಬಾರದು ಎಂದು ಮನವಿಯಲ್ಲಿ ಹೇಳಲಾಗಿದೆ.

ಹಿರಿಯ ವಕೀಲರಾದ ಶ್ಯಾಮ್‌ ದಿವಾನ್‌ ಸೇರಿದಂತೆ ವಕೀಲರಾದ ದೇಬೊಪ್ರಿಯೊ ಮೌಲಿಕ್‌, ಆಯುಷ್‌ ಶ್ರೀವಾಸ್ತವ್‌, ಕೃಷ್ಣೇಷ್‌ ಬಾಪಟ್ ಮತ್ತು ಗೋವಿಂದ್‌ ಮನೋಹರನ್‌ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.

ಪಿಎಂ ಕೇರ್ಸ್‌ ನಿಧಿ ಅಡಿ ಇಲ್ಲಿಯವರೆಗೆ ಸಂಗ್ರಹಿಸಿರುವ ದೇಣಿಗೆಯನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್‌ಡಿಆರ್‌ಎಫ್‌) ವರ್ಗಾಯಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಕಳೆದ ಆಗಸ್ಟ್‌ನಲ್ಲಿ ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌ ಪಿಎಂ ಕೇರ್ಸ್‌ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು.

Kannada Bar & Bench
kannada.barandbench.com