ಅಗ್ನಿಪಥ್ ಯೋಜನೆ ಕುರಿತು ಸೋಮವಾರ ತೀರ್ಪು ಪ್ರಕಟಿಸಲಿರುವ ದೆಹಲಿ ಹೈಕೋರ್ಟ್

ಅರ್ಜಿದಾರರು ಹಾಗೂ ಕೇಂದ್ರ ಸರ್ಕಾರದ ವಾದವನ್ನು ಡಿಸೆಂಬರ್ 15 ರಂದು ಆಲಿಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.
Delhi High Court with Agnipath scheme
Delhi High Court with Agnipath scheme

ಸಶಸ್ತ್ರ ಪಡೆಗಳಿಗೆ ನೇಮಕಾತಿ ಮಾಡಲು ರೂಪಿಸಲಾದ ಅಗ್ನಿಪಥ್‌ ಯೋಜನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಲಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯೊಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸಲಿದೆ. ಪ್ರಕರಣದ ತೀರ್ಪನ್ನು ಡಿಸೆಂಬರ್ 15, 2022ರಂದು ಕಾಯ್ದಿರಿಸಲಾಗಿತ್ತು.

ಈ ಯೋಜನೆಯ ಜೊತೆಗೆ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಅರ್ಜಿದಾರರ ಪರ ವಕೀಲರ ವಾದವನ್ನು ಪೀಠ ಈ ಹಿಂದೆ ಆಲಿಸಿತ್ತು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ವಾದ ಮಂಡಿಸಿದ್ದರು.

ನಾಲ್ಕು ವರ್ಷಗಳ ಮಟ್ಟಿಗೆ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವ ಅಗ್ನಿಪಥ್ ಯೋಜನೆ ಬಳಿಕ ಶೇ 25ರಷ್ಟು ಮಂದಿಯನ್ನು ಮಾತ್ರ ಭಾರತೀಯ ಸೇನೆಯಲ್ಲಿ ಮುಂದುವರೆಸಿ ಉಳಿದವರಿಗೆ ಉದ್ಯೋಗ ನಿರಾಕರಿಸುತ್ತದೆ. ಯೋಜನೆ ಜಾರಿ ತಂದದ್ದು ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳಿಗೆ ನಾಂದಿ ಹಾಡಿತ್ತು. ಇದು ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸಿತು.

Also Read
ಅಗ್ನಿಪಥ್‌ ಪ್ರಕರಣ: ಸೇನೆಗೆ ಏನು ಬೇಕೆಂಬುದನ್ನು ನಿರ್ಧರಿಸುವ ಪರಿಣತಿ ನ್ಯಾಯಾಲಯಕ್ಕಿಲ್ಲಎಂದ ದೆಹಲಿ ಹೈಕೋರ್ಟ್

ವಾದದ ವೇಳೆ ಎಎಸ್‌ಜಿ ಭಾಟಿ ಅವರು “ಅಗ್ನಿಪಥ್‌ ಯೋಜನೆಯು 2021ರಲ್ಲಷ್ಟೇ ರೂಪುತಳೆಯಿತು. ಆನಂತರವಷ್ಟೇ ಇತರ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯುವ ನಿರ್ಧಾರ ತೆಗೆದುಕೊಳ್ಳಲಾಯಿತು. ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸುವ ಮೂಲಕ ಜೂನ್ 2022 ರಲ್ಲಷ್ಟೇ ಅದನ್ನು ಅಂತಿಮಗೊಳಿಸಲಾಯಿತು. ನೀತಿ ನಿರೂಪಣೆಯಲ್ಲಾದ ಅತಿದೊಡ್ಡ ಬದಲಾವಣೆ ಇದಾಗಿದ್ದು ಸಶಸ್ತ್ರ ಪಡೆಗಳು ಸಿಬ್ಬಂದಿ ನೇಮಿಸಿಕೊಳ್ಳುವ ರೀತಿಯಲ್ಲಿನ ಗುರುತರ ಬದಲಾವಣೆಯಾಗಲಿದೆ. ನಾವು ನೀಡಿದ ಎರಡು ವರ್ಷಗಳ ವಯೋಮಿತಿ ಸಡಿಲಿಕೆಯ ಲಾಭವನ್ನು 10 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಪಡೆದುಕೊಂಡಿದ್ದಾರೆ. ಅಫಿಡವಿಟ್‌ನಲ್ಲಿ ಹೇಳಲು ಸಾಧ್ಯವಿಲ್ಲದಿದ್ದರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇವೆ” ಎಂದು ತಿಳಿಸಿದ್ದರು.

Also Read
ಅಗ್ನಿಪಥ್‌ ಯೋಜನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಕೆ

ಆದರೆ, ವಕೀಲ ಪ್ರಶಾಂತ್ ಭೂಷಣ್ ಅವರು ಸರ್ಕಾರದ ಸಮರ್ಥನೆಗಳನ್ನು ಪ್ರಶ್ನಿಸಿದ್ದರು. ಸರ್ಕಾರ ಜೂನ್ 2021 ರಲ್ಲಿಯೇ ಎಲ್ಲಾ ನೇಮಕಾತಿಗಳನ್ನು ಸ್ಥಗಿತಗೊಳಿಸಲಿಲ್ಲ. ಕೆಲವು ನೇಮಕಾತಿ ಪ್ರಕ್ರಿಯೆಗಳು ಆಗಸ್ಟ್ 2021 ಮತ್ತು ಫೆಬ್ರವರಿ 2022ರಲ್ಲೂ ನಡೆದಿವೆ ಎಂದು ಹೇಳಿದರು.

ಅದಕ್ಕೂ ಹಿಂದೆ ಕ್ರೋಢೀಕೃತ ದಾಖಲೆ ಸಲ್ಲಿಸಿದ್ದ ಕೇಂದ್ರ ಸರ್ಕಾರ ಯೋಜನೆ ಸೇನಾಪಡೆಗಳಿಗೆ ಯುವಚೈತನ್ಯವನ್ನು ತರಲಿದ್ದು ತಮ್ಮ ಸೇವಾವಧಿಯ ನಂತರ ಈ ಅಗ್ನಿವೀರರು ರಾಷ್ಟ್ರೀಯವಾದಿ, ಶಿಸ್ತುಬದ್ಧ, ಕೌಶಲ್ಯಪೂರ್ಣ ಮಾನವಶಕ್ತಿಯಾಗಿ ಸಮಾಜಕ್ಕೆ ಲಭ್ಯವಾಗಲಿದ್ದಾರೆ ಎಂದಿತ್ತು.

Related Stories

No stories found.
Kannada Bar & Bench
kannada.barandbench.com