
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ದಾಖಲಿಸಿದ್ದ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.
ಮೇಧಾ ಅವರಿಗೆ ಶಿಕ್ಷೆ ವಿಧಿಸಿ ವಿಚಾರಣಾ ಮತ್ತು ಮೇಲ್ಮನವಿ ನ್ಯಾಯಾಲಯಗಳು ನೀಡಿರುವ ತೀರ್ಪಿನಲ್ಲಿ ಯಾವುದೇ ಲೋಪವಿಲ್ಲ ಎಂದು ನ್ಯಾಯಮೂರ್ತಿ ಶಾಲಿಂದರ್ ಕೌರ್ ತೀರ್ಪು ನೀಡಿದರು.
ಇದೇ ವೇಳೆ ಅವರನ್ನು ಬಿಡುಗಡೆ ಮಾಡುವಂತೆ ಮೇಲ್ಮನವಿ ನ್ಯಾಯಲಯ ನೀಡಿದ್ದ ತೀರ್ಪನ್ನೂ ಅದು ಎತ್ತಿ ಹಿಡಿದಿದೆ. ಅಲ್ಲದೆ ಪಾಟ್ಕರ್ ಅವರಿಗೆ ಪರಿಹಾರ ಎಂಬಂತೆ ಮೂರು ತಿಂಗಳಿಗೊಮ್ಮೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂಬ ಷರತ್ತನ್ನು ಮಾರ್ಪಡಿಸಿರುವ ಅದು ಅವರು ಆನ್‌ಲೈನ್ ಮೂಲಕ ಅಥವಾ ವಕೀಲರ ಮೂಲಕ ಹಾಜರಾದರೂ ಸಾಕು ಎಂದು ಹೇಳಿದೆ. ಉಳಿದ ಷರತ್ತುಗಳಲ್ಲಿ ತಾನು ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಮೇಧಾ ಪಾಟ್ಕರ್ ವಿರುದ್ಧ 2001ರಲ್ಲಿ ವಿ ಕೆ ಸಕ್ಸೇನಾ ಅವರು ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್ ಎಂಬ ಸಂಘಟನೆಯ ಅಧ್ಯಕ್ಷರಾಗಿದ್ದಾಗ ಪ್ರಕರಣ ದಾಖಲಿಸಿದ್ದರು. 2000ರಲ್ಲಿ, ಸಕ್ಸೇನಾ ನೇತೃತ್ವದ ಸಂಘಟನೆ ಮೇಧಾ ಅವರ ನರ್ಮದಾ ನದಿಗೆ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವುದನ್ನು ವಿರೋಧಿಸುವ 'ನರ್ಮದಾ ಬಚಾವೋ ಆಂದೋಲನ'ದ ವಿರುದ್ಧ ಜಾಹೀರಾತು ಪ್ರಕಟಿಸಿತ್ತು. ಜಾಹೀರಾತಿನ ಶೀರ್ಷಿಕೆ 'ಶ್ರೀಮತಿ ಮೇಧಾ ಪಾಟ್ಕರ್ ಮತ್ತು ಅವರ ನರ್ಮದಾ ಬಚಾವೋ ಆಂದೋಲನದ ನೈಜ ಮುಖ' ಎಂಬುದಾಗಿತ್ತು.
ಜಾಹೀರಾತು ಪ್ರಕಟವಾದ ನಂತರ, ಪಾಟ್ಕರ್ ಸಕ್ಸೇನಾ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿದರು. 'ದೇಶಭಕ್ತನ ನಿಜವಾದ ಸಂಗತಿಗಳು - ಜಾಹೀರಾತಿಗೆ ಪ್ರತಿಕ್ರಿಯೆ' ಎಂಬ ಪತ್ರಿಕಾ ಟಿಪ್ಪಣಿಯಲ್ಲಿ , ಸಕ್ಸೇನಾ ಸ್ವತಃ ಮಾಲೆಗಾಂವ್‌ಗೆ ಭೇಟಿ ನೀಡಿ, ನರ್ಮದಾ ಬಚಾವೋ ಆಂದೋಲನವನ್ನು ಹೊಗಳಿದ್ದಾರೆ ಮತ್ತು ನರ್ಮದಾ ಬಚಾವೋ ಆಂದೋಲನಕ್ಕಾಗಿ ಲೋಕ ಸಮಿತಿಗೆ ₹40,000 ಚೆಕ್ ಮೂಲಕ ಪಾವತಿಸಿದ್ದಾರೆ ಎಂದು ಆರೋಪಿಸಿದ್ದರು. ಲಾಲ್‌ಭಾಯ್ ಸಮೂಹ ಸಂಸ್ಥೆಯಿಂದ ಬಂದ ಚೆಕ್ ಬೌನ್ಸ್ ಆಗಿದೆ ಎಂದು ಸಹ ತಿಳಿಸಲಾಗಿತ್ತು.
ಹೀಗಾಗಿ ಸಕ್ಸೇನಾ 2001ರಲ್ಲಿ ಅಹಮದಾಬಾದ್ ನ್ಯಾಯಾಲಯದಲ್ಲಿ ಪಾಟ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ತಾನು ಮಾಲೆಗಾಂವ್‌ಗೆ ಎಂದಿಗೂ ಭೇಟಿ ನೀಡಿಲ್ಲ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳ ವಿರುದ್ಧ ಕೆಲಸ ಮಾಡುತ್ತಿರುವ ನರ್ಮದಾ ಬಚಾವೋ ಆಂದೋಲನವನ್ನು ಎಂದಿಗೂ ಹೊಗಳಿಲ್ಲ. ಅಲ್ಲದೆ ತಾನು ಲೋಕ ಸಮಿತಿಗೆ ಯಾವುದೇ ಚೆಕ್ ನೀಡಿಲ್ಲ ಎಂದು ಪ್ರತಿಪಾದಿಸಿದರು.
ಇತ್ತ ಪಾಟ್ಕರ್, ತಾವು ಯಾವುದೇ ಪತ್ರಿಕಾ ಟಿಪ್ಪಣಿಯನ್ನು ಬಿಡುಗಡೆ ಮಾಡಿಲ್ಲ ಅಥವಾ ಅದನ್ನು ಪ್ರಕಟಿಸಿದ ರೆಡಿಫ್ ಡಾಟ್ ಕಾಂ ಸೇರಿದಂತೆ ಯಾರಿಗೂ ಯಾವುದೇ ಪತ್ರಿಕಾ ಟಿಪ್ಪಣಿ ಅಥವಾ ಇ-ಮೇಲ್ ಕಳುಹಿಸಿಲ್ಲ ಎಂದು ತಮ್ಮ ವಿರುದ್ಧದ ಆರೋಪ ನಿರಾಕರಿಸಿದ್ದರು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 2003ರಲ್ಲಿ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಿತು.
ಬಿಲ್‌ಗೇಟ್ಸ್ ತರಹದ ಬಂಡವಾಳಿಗರಿಗೆ ಗುಜರಾತ್‌ನ ಜನತೆ ಮತ್ತವರ ಸಂಪನ್ಮೂಲಗಳನ್ನು ಸಕ್ಸೇನಾ ಅಡವಿಟ್ಟಿದ್ದಾರೆ ಎಂದು ಮೇಧಾ ಹೇಳುವ ಮೂಲಕ ಸಕ್ಸೇನಾ ಅವರನ್ನು ಅವಹೇಳನ ಮಾಡುವ ಸ್ಪಷ್ಟ ಉದ್ದೇಶ ಹೊಂದಿದ್ದರು ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಪಾಟ್ಕರ್ ಅವರನ್ನು ದೋಷಿ ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪುನ್ನು ಕಳೆದ ಏಪ್ರಿಲ್ 2 ರಂದು ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್ ಅವರು ಎತ್ತಿಹಿಡಿದಿದ್ದರು.
ಆದರೆ, ಏಪ್ರಿಲ್ 8 ರಂದು ಸೆಷನ್ಸ್ ನ್ಯಾಯಾಲಯವು ಶಿಕ್ಷೆಯನ್ನು ಮಾರ್ಪಡಿಸಿತ್ತು. ಮೇಧಾ ಅವರಿಗೆ ವಿಧಿಸಲಾಗಿದ್ದ ₹10 ಲಕ್ಷ ದಂಡದ ಮೊತ್ತವನ್ನೂ ಕಡಿತಗೊಳಿಸಿದ ನ್ಯಾಯಾಲಯ ಸಕ್ಸೇನಾ ಅವರಿಗೆ ಮೇಧಾ ₹1 ಲಕ್ಷ ಪರಿಹಾರ ನೀಡಬೇಕು ಎಂದು ತಿಳಿಸಿ ಅವರನ್ನು ಬಿಡುಗಡೆ ಮಾಡಿತ್ತು. ಈ ಶಿಕ್ಷೆಯನ್ು ಮೇಧಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಹಿರಿಯ ವಕೀಲ ಸಂಜಯ್ ಮತ್ತವರ ತಂಡ ಪಾಟ್ಕರ್ ಪರವಾಗಿ ವಾದ ಮಂಡಿಸಿತು. ವಕೀಲರಾದ ಗಜಿಂದರ್ ಕುಮಾರ್, ಕಿರಣ್ ಜೈ, ಚಂದ್ರ ಶೇಖರ್, ಕಾಜಲ್ ಭಾಟಿ ಮತ್ತು ಕರಣ್ ಮುರಾರಿ ಸಾಹ್ ಅವರು ಸಕ್ಸೇನಾ ಅವರನ್ನು ಪ್ರತಿನಿಧಿಸಿದ್ದರು.