ಬಿಜೆಪಿ ನಾಯಕ ಸೈಯದ್ ಶಹನವಾಜ್ ಹುಸೇನ್ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಮುಕ್ತಾಯಗೊಳಿಸಿ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ [ಪಿ (ದೂರುದಾರೆ) ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಹುಸೇನ್ ಅವರು ಮಹಿಳೆಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿರುವ ಸಾಧ್ಯತೆಯನ್ನು ಮೌಖಿಕ ಸಾಕ್ಷ್ಯ, ದಾಖಲೆಗಳು ಹಾಗೂ ವೈಜ್ಞಾನಿಕ ಪುರಾವೆಗಳು ತಳ್ಳಿಹಾಕುತ್ತವೆ. ಹೀಗಾಗಿ ಪ್ರಕರಣ ಮುಕ್ತಾಯಗೊಳಿಸುವ ಪೊಲೀಸರ ವರದಿಯನ್ನು ಪುರಸ್ಕರಿಸಿದ್ದ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಬೇಕು ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ತಿಳಿಸಿದರು.
ನ್ಯಾಯಾಲಯದ ಆದೇಶದಲ್ಲಿ ಯಾವುದೇ ದೌರ್ಬಲ್ಯಗಳಿಲ್ಲ. ಹೀಗಾಗಿ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ದೆಹಲಿಯ ಛತ್ತರ್‌ಪುರ ಪ್ರದೇಶದ ಫಾರ್ಮ್ ಹೌಸ್ ಒಂದರಲ್ಲಿ 2018ರಲ್ಲಿ ತಮ್ಮ ಮೇಲೆ ಶಾನವಾಜ್ ಹುಸೇನ್ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ತನಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಲಾಗಿತ್ತು. ಕೃತ್ಯವನ್ನು ವೀಡಿಯೊ ಮಾಡಿದ್ದ ಶಾನವಾಜ್ ಘಟನೆಯನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎಂಬುದಾಗಿ ದೂರುದಾರೆ ತಿಳಿಸಿದ್ದರು.
ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರವೇ ಎಫ್ಐಆರ್ ದಾಖಲಿಸಲಾಗಿದೆ ಎಂಬುದು ದೂರುದಾರರ ವಾದವಾಗಿತ್ತು.
ಪ್ರಕರಣ ಮುಕ್ತಾಯಗೊಳಿಸಿರುವುದಾಗಿ ದೆಹಲಿ ಪೊಲೀಸರು ಸಲ್ಲಿಸಿದ್ದ ವರದಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಕ್ಟೋಬರ್ 2023ರಲ್ಲಿ ತಿರಸ್ಕರಿಸಿತ್ತು. ಹುಸೇನ್ ಅವರಿಗೆ ಸಮನ್ಸ್ ನೀಡಲಾಗಿತ್ತು.
ಇದನ್ನು ಹುಸೇನ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಸೆಷನ್ಸ್ ನ್ಯಾಯಾಲಯ ಸಮನ್ಸ್ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ದೂರುದಾರೆ ಹೈಕೋರ್ಟ್ ಮೊರೆ ಹೋಗಿದ್ದರು.