ಸಶಸ್ತ್ರ ಪಡೆಗಳಿಗೆ ನೇಮಕಾತಿ ಮಾಡಲು ರೂಪಿಸಲಾದ ಅಗ್ನಿಪಥ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ದೆಹಲಿ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ರಾಷ್ಟ್ರೀಯ ಹಿತಾಸಕ್ತಿಯೊಡನೆ ಜಾರಿಗೆ ತಂದ ಯೋಜನೆ ಇದು ಎಂದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.
“ಯೋಜನೆಯಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಕಾರಣ ಈ ನ್ಯಾಯಾಲಯಕ್ಕೆ ಕಂಡುಬರುತ್ತಿಲ್ಲ. ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ರಾಷ್ಟ್ರೀಯ ಹಿತಾಸಕ್ತಿಯಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ನಾವು ತೀರ್ಮಾನಿಸಬಹುದಾಗಿದೆ” ಎಂಬುದಾಗಿ ನ್ಯಾಯಾಲಯ ಹೇಳಿದೆ.
ಇದೇ ವೇಳೆ ಸೇನೆಗೆ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನೂ ನ್ಯಾಯಾಲಯ ವಜಾಗೊಳಸಿದೆ. “ನೇಮಕಾತಿ ಪ್ರಕಟಿಸಿದ್ದ ಜಾಹೀರಾತುಗಳು ಶಾಸನಬದ್ಧ ನಿರೀಕ್ಷೆಯನ್ನೇನೂ ಹುಟ್ಟುಹಾಕಿಲ್ಲ" ಎಂದು ಪೀಠ ಹೇಳಿದೆ.
ಡಿಸೆಂಬರ್ 15, 2022 ರಂದು ಪ್ರಕರಣದ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತ್ತು. ತೀರ್ಪಿನ ವಿವರಗಳು ಇನ್ನಷ್ಟೇ ದೊರೆಯಬೇಕಿದೆ.
ನಾಲ್ಕು ವರ್ಷಗಳ ಮಟ್ಟಿಗೆ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುವ ಅಗ್ನಿಪಥ್ ಯೋಜನೆಯಲ್ಲಿ ನಾಲ್ಕು ವರ್ಷಗಳ ನಂತರ ಆಯ್ಕೆಯಾದವರಲ್ಲಿ ಶೇ.25ರಷ್ಟು ಮಂದಿ ಅಭ್ಯರ್ಥಿಗಳನ್ನು ಮಾತ್ರ ಭಾರತೀಯ ಸೇನೆಯಲ್ಲಿ ಮುಂದುವರೆಸಿ ಉಳಿದವರಿಗೆ ಉದ್ಯೋಗ ನಿರಾಕರಿಸುತ್ತದೆ. ಯೋಜನೆ ಜಾರಿಯಾದ ವೇಳೆ ದೇಶದ ವಿವಿಧೆಡೆ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಇದು ಅಭ್ಯರ್ಥಿಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸಿತ್ತು.