ದೆಹಲಿ ಮಾದರಿಯಲ್ಲಿ ವಕೀಲರಿಗೆ ಜೀವವಿಮೆ ಹಾಗೂ ಆರೋಗ್ಯ ವಿಮೆ: ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ

ಇಡೀ ದೇಶದಲ್ಲಿ ದೆಹಲಿಯಲ್ಲಿ ಮಾತ್ರ ಸರ್ಕಾರದ ಮೂಲಕ ವಕೀಲರಿಗೆ ವಿಮಾ ಯೋಜನೆ ಕಲ್ಪಿಸಲಾಗಿದೆ ಎಂದು ಇದೇ ವೇಳೆ ವಿವರಿಸಲಾಯಿತು.
ದೆಹಲಿ ಮಾದರಿಯಲ್ಲಿ ವಕೀಲರಿಗೆ ಜೀವವಿಮೆ ಹಾಗೂ ಆರೋಗ್ಯ ವಿಮೆ: ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ

ದೆಹಲಿ ಮಾದರಿಯಲ್ಲಿ ವಕೀಲರಿಗೆ ಜೀವವಿಮೆ ಹಾಗೂ ಆರೋಗ್ಯ ವಿಮೆ ಒದಗಿಸುವ ಸಂಬಂಧ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯು ದೆಹಲಿ ವಕೀಲರಿಗೆ ಒದಗಿಸಿದ ವಿಮಾ ಯೋಜನೆಯನ್ನು ಪರಿಶೀಲಿಸಿ ಸರ್ಕಾರದ ಪರಿಗಣನೆಗೆ ಸ್ವೀಕರಿಸಬಹುದು ಎಂದು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ವಕೀಲರಿಗೆ ಜೀವವಿಮೆ ಮತ್ತು ಆರೋಗ್ಯ ವಿಮೆ ಒದಗಿಸಲು ಸೂಕ್ತ ಯೋಜನೆ ರೂಪಿಸುವಂತೆ ಕರ್ನಾಟಕ ಹೈಕೋರ್ಟ್‌ ಕಳೆದ ಮಾರ್ಚ್‌ನಲ್ಲಿ ಸೂಚನೆ ನೀಡಿತ್ತು. ಕೊರೊನಾ ಸಂದರ್ಭದಲ್ಲಿಯೂ ಜೀವ ಲೆಕ್ಕಿಸದೆ ಕೆಲಸ ಮಾಡುತ್ತಿರುವ ವಕೀಲರಿಗೆ ವಿಮೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್ 2020ರ ಮಾರ್ಚ್‌ನಲ್ಲಿ ಬರದಿದ್ದ ಪತ್ರ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.

ಬೆಂಗಳೂರು ವಕೀಲರ ಸಂಘ, ಕರ್ನಾಟಕ ವಕೀಲರ ಪರಿಷತ್‌ ಪದಾಧಿಕಾರಿಗಳು ಮತ್ತು ವಿಮಾ ಕಂಪೆನಿಗಳೊಂದಿಗೆ ಸಭೆ ನಡೆಸಬೇಲಕು ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಆಧರಿಸಿ ವಕೀಲರಿಗೆ ಜೀವ ವಿಮೆ ಹಾಗೂ ಆರೋಗ್ಯ ವಿಮೆ ಒದಗಿಸಿ ಆ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅದು ಸರ್ಕಾರಕ್ಕೆ ಸೂಚಿಸಿತ್ತು.

ಹೈಕೋರ್ಟ್‌ ಆದೇಶದನ್ವಯ ಜೂನ್‌ 18ರಂದು ನಡೆದ ಸಭೆಯಲ್ಲಿ ರಂಗನಾಥ್‌ ಅವರು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್- ಆಯುಷ್ಮಾನ್ ಭಾರತ್ ಮತ್ತು ಟೈಲರ್ ಮೇಡ್ ಫ್ಲೋಟರ್ ಗ್ರೂಪ್ ಮೆಡಿಕೇಮ್ ಪಾಲಿಸಿ ಮತ್ತು ನ್ಯೂ ಇಂಡಿಯಾ ಫ್ಲೆಕ್ಸಿ ಗ್ರೂಪ್ ಮೆಡಿಕೇಮ್ ಪಾಲಿಸಿ ಒದಗಿಸಿದ ಯೋಜನೆಗಳ ಬಗ್ಗೆ ತುಲನಾತ್ಮಕ ವಿವರಣೆ ನೀಡಿದರು. ಅಲ್ಲದೆ ನವದೆಹಲಿ ಸರ್ಕಾರ ವಕೀಲರಿಗೆ ಒದಗಿಸಿದ ಯೋಜನೆಯ ಬಗ್ಗೆ ವಿವರಿಸಿದರು.

ಪ್ರತಿ ಕುಟುಂಬಕ್ಕೆ ರೂ 10,000 ಪ್ರೀಮಿಯಂ ಮೊತ್ತ ನಿಗದಿಪಡಿಸಲಾಗಿದೆ. ನವದೆಹಲಿಯಲ್ಲಿ ಸುಮಾರು 23,000 ವಕೀಲರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ನೋಂದಾಯಿಸಿಕೊಂಡಿರುವ ಒಟ್ಟು ವಕೀಲರ ಸಂಖ್ಯೆ 1,02,669 ಎಂದು ಅವರು ಮಾಹಿತಿ ನೀಡಿದರು.

Also Read
ವಕೀಲರಿಗೆ ವಿಮೆ: ದೆಹಲಿ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಯೋಜನೆ ಜಾರಿಗೊಳಿಸಬಹುದೇ? ಹೈಕೋರ್ಟ್‌ ಪ್ರಶ್ನೆ

ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್‌ ಅವರು “ಏಕ ಪಾಲಿಸಿಗೆ ವಿಧಿಸಬಹುದಾದ ಪ್ರೀಮಿಯಂ ಕುರಿತು ವಿವರಣೆ ಕೇಳಿದರು. ವಕೀಲರಿಗೆ ವೈಯಕ್ತಿಕವಾಗಿ ಅಥವಾ ಗುಂಪು ವಿಮೆ (ಕುಟುಂಬಗಳಿಗೆ) ಪ್ರೀಮಿಯಂ ನಿಗದಿಪಡಿಸಲಾಗುತ್ತದೆ ಎಂದು ವಿಮಾಕಂಪೆನಿಗಳು ತಿಳಿಸಿದವು. ಇದಲ್ಲದೆ ವಯಸ್ಸು, ಭರವಸೆ ನೀಡಿದ ಮೊತ್ತ, ಕವರೇಜ್‌ ವಿಧಾನ ಹಾಗೂ ವಕೀಲರ ಸಂಖ್ಯೆಯನ್ನು ಕೂಡ ಪರಿಗಣಿಸಲಾಗುತ್ತದೆ ಎಂದವು. ವಿಮಾದಾರರಿಗೆ ನಗದುರಹಿತ ಸೌಲಭ್ಯ ಒದಗಿಸಲಾಗುವುದು ಮತ್ತು ರಾಜ್ಯದಲ್ಲಿ ಸುಮಾರು 370 ಆಸ್ಪತ್ರೆಗಳು ಕಂಪೆನಿಯ ವಿಮಾ ವ್ಯಾಪ್ತಿಯಲ್ಲಿವೆ ಎಂದು ತಿಳಿಸಿತು.

ಇಡೀ ದೇಶದಲ್ಲಿ ದೆಹಲಿಯಲ್ಲಿ ಮಾತ್ರ ಸರ್ಕಾರದ ಮೂಲಕ ವಕೀಲರಿಗೆ ವಿಮಾ ಯೋಜನೆ ಕಲ್ಪಿಸಲಾಗಿದೆ ಎಂದು ಇದೇ ವೇಳೆ ವಿವರಿಸಲಾಯಿತು.

ಕಾನೂನು ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಣಕಾಸು ಇಲಾಖೆಯ ಕಾರ್ಯದರ್ಶಿ, ಬೆಂಗಳೂರು ವಕೀಲರ ಸಂಘದ ಪ್ರತಿನಿಧಿಗಳು, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಓರಿಯೆಂಟಲ್‌ ವಿಮಾ ಕಂಪೆನಿ ಹಾಗೂ ನ್ಯೂ ಇಂಡಿಯಾ ಅಶೂರೆನ್ಸ್‌ ಕಂಪೆನಿಗಳ ಪ್ರತಿನಿಧಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡರು.

Related Stories

No stories found.
Kannada Bar & Bench
kannada.barandbench.com