ದೇಶದ ಹೆಸರಿಗೆ ಅಪಖ್ಯಾತಿ ತರುವ ಹಕ್ಕು ಪ್ರತಿಭಟನೆಯ ಹಕ್ಕಿನಲ್ಲಿ ಸೇರಿಲ್ಲ: ಟ್ರ್ಯಾಕ್ಟರ್‌‌ ರ‍್ಯಾಲಿ ನಿಷೇಧಕ್ಕೆ ಮನವಿ

ಗಣರಾಜ್ಯೋತ್ಸವದ ಸಂಭ್ರಮಕ್ಕೆ ತಡೆಯೊಡ್ಡುವ ಉದ್ದೇಶದಿಂದ ಪ್ರತಿಭಟನಾನಿರತರ ಪೈಕಿ ಕೆಲ ವ್ಯಕ್ತಿಗಳು, ಸಂಘಟನೆಗಳು ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಲು ಉದ್ದೇಶಿಸಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
Farmers
FarmersIANS

ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ಅಡ್ಡಿ ಮಾಡುವ ಉದ್ದೇಶದಿಂದ ಕೆಲವು ರೈತರನ್ನು ಒಳಗೊಂಡ ಒಕ್ಕೂಟವು ಟ್ರಾಕ್ಟರ್‌ ರ‍್ಯಾಲಿ ನಡೆಸುವ ಉದ್ದೇಶ ಹೊಂದಿದೆ. ಇದರ ವಿರುದ್ಧ ಪ್ರತಿಬಂಧಕಾದೇಶ ಹೊರಡಿಸುವಂತೆ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಕೋರಿಕೆ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ ಕೆಲವರು ಟ್ರ್ಯಾಕ್ಟರ್‌ ರ‍್ಯಾಲಿ ಆಯೋಜಿಸುವ ಮೂಲಕ ಗಣರಾಜ್ಯೋತ್ಸವ ಸಂಭ್ರಮಕ್ಕೆ ತಡೆಯೊಡ್ಡುವ ಉದ್ದೇಶ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ದೆಹಲಿ ಪೊಲೀಸರು ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ. ಈ ರ‍್ಯಾಲಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಲಿದ್ದು, ದೇಶಕ್ಕೆ ಮುಜುಗರದ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Also Read
[ರೈತರ ಪ್ರತಿಭಟನೆ] ವಿವಾದಿತ ಕೃಷಿ ಕಾಯಿದೆಗಳ ಕುರಿತು ನಾಳೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ

“ಪ್ರತಿಭಟನೆಯ ಹಕ್ಕು ಯಾವಾಗಲೂ ಸಾರ್ವಜನಿಕ ಆದೇಶ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಕ್ಕೆ ಒಳಪಟ್ಟಿರುತ್ತದೆ. ಪ್ರತಿಭಟನೆಯ ಹಕ್ಕು ಜಾಗತಿಕವಾಗಿ ದೇಶಕ್ಕೆ ಅಪಮಾನ ಉಂಟು ಮಾಡುವುದನ್ನು ಒಳಗೊಂಡಿರುವುದಿಲ್ಲ. ಕೆಲವು ದಿನಗಳ ಹಿಂದೆ ದೆಹಲಿಯ ವಿವಿಧ ಪ್ರವೇಶ ದ್ವಾರದ ಬಳಿ ಪ್ರತಿಭಟನಾನಿರತರಾದ ಸಂಘಟನೆಗಳು, ಕೆಲವು ವ್ಯಕ್ತಿಗಳು ಟ್ರ್ಯಾಕ್ಟರ್‌/ಟ್ರಾಲಿ ಮೆರವಣಿಗೆ ನಡೆಸಿದ್ದಾರೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜನವರಿ 26ರಂದು ಯಾವುದೇ ತೆರನಾದ ಪ್ರತಿಭಟನೆ, ರ‍್ಯಾಲಿ ಅಥವಾ ಸಮಾವೇಶ ನಡೆಸದಂತೆ ಪ್ರತಿಬಂಧಕಾದೇಶ ಹೊರಡಿಸುವಂತೆ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಕೋರಿಕೊಂಡಿದ್ದಾರೆ. ದೆಹಲಿಯ ಗಡಿಯಲ್ಲಿ ಪ್ರತಿಭಟನಾನಿರತರನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.

Related Stories

No stories found.
Kannada Bar & Bench
kannada.barandbench.com