[ರೈತರ ಪ್ರತಿಭಟನೆ] ವಿವಾದಿತ ಕೃಷಿ ಕಾಯಿದೆಗಳ ಕುರಿತು ನಾಳೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ

ಸುಪ್ರೀಂ ಕೋರ್ಟ್‌ ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ವಿವಾದಿತ ಕೃಷಿ ಕಾಯಿದೆಗಳ ಜಾರಿಗೆ ತಡೆ ನೀಡುವ ಒಲವು ವ್ಯಕ್ತಪಡಿಸಿದೆ.
FARM ACTS, Supreme Court
FARM ACTS, Supreme Court
Published on

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ವಿವಾದಿತ ಕೃಷಿ ಕಾಯಿದೆಗಳಿಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಲಿದೆ. ಸದರಿ ಕಾಯಿದೆಗಳನ್ನು ವಿರೋಧಿಸಿ ಪಂಜಾಬ್‌ ಮತ್ತು ಹರಿಯಾಣದ ರೈತರು ಕಳೆದ ನವೆಂಬರ್‌ನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೃಷಿ ಕಾಯಿದೆಗಳನ್ನು ವಿರೋಧಿಸಿ ಸಲ್ಲಿಕೆಯಾಗಿರುವ ಮನವಿಗಳ ವಿಚಾರಣೆಯನ್ನು ಸೋಮವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ಪೀಠವು ಮಂಗಳವಾರ ಮಧ್ಯಂತರ ಆದೇಶ ಹೊರಡಿಸುವುದಾಗಿ ತಿಳಿಸಿದೆ.

ತನ್ನ ಮತ್ತು ಪ್ರತಿಭಟನಾನಿರತ ರೈತರ ನಡುವಿನ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೈಗೊಂಡ ನಿರ್ಧಾರಗಳು ಫಲಪ್ರದವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಯಿದೆಗಳ ಜಾರಿಗೆ ತಡೆ ನೀಡುವ ಒಲವನ್ನು ಸುಪ್ರೀಂ ಕೋರ್ಟ್‌ ವಿಚಾರಣೆಯ ವೇಳೆ ವ್ಯಕ್ತಪಡಿಸಿತ್ತು.

“ನಾವು ಸಮಿತಿಯೊಂದನ್ನು ರಚಿಸುವ ಬಗ್ಗೆ ಪ್ರಸ್ತಾಪಿಸುತ್ತೇವೆ. ಸರ್ಕಾರವು (ಕಾಯಿದೆಗಳ ತಡೆಗೆ) ಮುಂದಾಗದೆ ಹೋದಲ್ಲಿ, ನಾವು ಕೃಷಿ ಕಾಯಿದೆಗಳ ಅನುಷ್ಠಾನಕ್ಕೆ ತಡೆ ನೀಡುತ್ತೇವೆ. ಕೆಂದ್ರ ಸರ್ಕಾರವು ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ನಮಗೆ ತೀವ್ರ ನಿರಾಸೆಯಾಗಿದೆ. ನೀವು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದೆ ಇರುವ ಕಾರಣಕ್ಕೆ ನಾವು ಈ ಕ್ರಮಕ್ಕೆ ಮುಂದಾಗಬೇಕಿದೆ. ಭಾರತ ಸರ್ಕಾರವು ಜವಾಬ್ದಾರಿಯನ್ನು ಹೊರಬೇಕಿದೆ. ಕಾಯಿದೆಗಳು ಪ್ರತಿಭಟನೆಗೆ ಕಾರಣವಾಗಿದ್ದು, ನೀವು ಈಗ ಪ್ರತಿಭಟನೆಯನ್ನು ಪರಿಹರಿಸಬೇಕಿದೆ,” ಎಂದು ಸಿಜೆಐ ನೇತೃತ್ವದ ಪೀಠವು ಖಚಿತವಾಗಿ ಹೇಳಿತು.

Also Read
“ನಾವು ಭಾರತದ ಸುಪ್ರೀಂ ಕೋರ್ಟ್‌, ನಮ್ಮ ಕೆಲಸ ನಾವು ಮಾಡುತ್ತೇವೆ;" ಕೃಷಿ ಕಾಯಿದೆಗಳ ತಡೆಗೆ ಒಲವು ತೋರಿದ ಸುಪ್ರೀಂ

"ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಹಿಡಿಯುವುದು ನಮ್ಮ ಉದ್ದೇಶವಾಗಿದೆ. ಆ ಕಾರಣಕ್ಕಾಗಿಯೇ ಕೃಷಿ ಕಾಯಿದೆಗಳನ್ನು ತಡೆ ಹಿಡಿಯುವಂತೆ ನಿಮಗೆ ಹೇಳಿದೆವು. ಸಂದಾನ ನಡೆಸಲು ನಿಮಗೆ ಸಮಯಾವಕಾಶದ ಅಗತ್ಯವಿದೆ. ಕಾಯಿದೆಗಳನ್ನು ಅನುಷ್ಠಾನಗೊಳಿಸಲು ಮುಂದಾಗುವುದಿಲ್ಲ ಎಂದು ತೋರುವ ಜವಾಬ್ದಾರಿ ನಿಮ್ಮದಾಗಿದ್ದು, ಹಾಗೆ ಮಾಡಿದರೆ ನಾವು ಭಾರತೀಯ ಕೃಷಿ ಅನುಸಂಧಾನ ಪರಿಷತ್ತನ್ನು ಒಳಗೊಂಡ ಸಮಿತಿಯೊಂದನ್ನು ಸಮಸ್ಯೆಯನ್ನು ಪರಿಶೀಲಿಸಲು ರಚಿಸಬಹುದು. ಅಲ್ಲಿಯವರೆಗೆ, ಕಾಯಿದೆಗಳನ್ನು ತಡೆಹಿಡಿಯಬಹುದು. ಕಾಯಿದೆಗಳನ್ನು ಮುಂದುವರೆಸುವ ಬಗ್ಗೆ ನೀವೇಕೆ ಹಠ ಹಿಡಿದಿದ್ದೀರಿ,” ಎಂದು ಸಿಜೆಐ ಬೊಬ್ಡೆ ವಿಚಾರಣೆ ವೇಳೆ ಸರ್ಕಾರವನ್ನು ಪ್ರಶ್ನಿಸಿದರು.

ಇದಕ್ಕೂ ಮುನ್ನ ಆರಂಭದಲ್ಲಿ ಸಿಜೆಐ ಅವರು, “ನೀವೇನು ಸಮಸ್ಯೆಗೆ ಪರಿಹಾರವೋ ಅಥವಾ ಸಮಸ್ಯೆಯ ಭಾಗವೋ?” ಎಂದು ಕಿಡಿಕಾರಿದ್ದರು. “ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಳಿಯಲ್ಲಿ ಥರಗುಟ್ಟುತ್ತಿದ್ದಾರೆ. ಅವರ ಊಟೋಪಚಾರವನ್ನು ಯಾರು ನೋಡಿಕೊಳ್ಳುತ್ತಿದ್ದಾರೆ? ವೃದ್ಧರು, ಮಹಿಳೆಯರು ಬಯಲಿನಲ್ಲಿದ್ದಾರೆ,” ಎಂದು ಸಿಜೆಐ ವಿಚಾರಣೆ ವೇಳೆ ಆಕ್ಷೇಪಿಸಿದರು.

Kannada Bar & Bench
kannada.barandbench.com