ಸರ್ಕಾರ ಉರುಳಿಸುವ, ಮುಸ್ಲಿಮೇತರರನ್ನು ಕೊಲ್ಲುವ ಸಂಚು: ಉಮರ್ ಇತರರ ಜಾಮೀನಿಗೆ ಸುಪ್ರೀಂನಲ್ಲಿ ದೆಹಲಿ ಪೊಲೀಸರ ವಿರೋಧ

ಪಿತೂರಿ ಪ್ರಕರಣದ ವಿಚಾರಣೆ ವಿಳಂಬಕ್ಕೆ ಪ್ರಕರಣದಲ್ಲಿ ಜಾಮೀನು ಪಡೆದ ಜನರೇ ಕಾರಣ. ಇದು ಈಗಲೂ ಜೈಲಿನಲ್ಲಿರುವವರ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೆಹಲಿ ಹೈಕೋರ್ಟ್ ತೀರ್ಪನ್ನು ಪೊಲೀಸರು ಬಲವಾಗಿ ಅವಲಂಬಿಸಿದ್ದಾರೆ.
Umar Khalid and Delhi police
Umar Khalid and Delhi police
Published on

ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಇನ್ನಿತರ ಮೂವರು ಸಲ್ಲಿಸಿದ್ದ ಜಾಮೀನು ಅರ್ಜಿಗಳಿಗೆ ಪ್ರತಿಕ್ರಿಯೆ ನೀಡದ ದೆಹಲಿ ಪೊಲೀಸರನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜಾಮೀನು ಏಕೆ ನೀಡಬಾರದು ಎಂಬುದನ್ನು ವಿವರಿಸುವ 389 ಪುಟಗಳ ಅಫಿಡವಿಟನ್ನು ಪೊಲೀಸರು ಸಲ್ಲಿಸಿದ್ದಾರೆ.

ಕೋಮುವಾದದ ಆಧಾರದಲ್ಲಿ ರಾಷ್ಟ್ರವ್ಯಾಪಿ ಗಲಭೆ ಹುಟ್ಟುಹಾಕುವ ಪಿತೂರಿ ದೃಗ್ಗೋಚರವಾಗುವಂತಿದ್ದು ನಿರಾಕರಿಸಲಾಗದಂತಹ ಸಾಕ್ಷಿ ಮತ್ತು ತಾಂತ್ರಿಕ ಪುರಾವೆಗಳು ತಮ್ಮ ಬಳಿ ಇವೆ ಎಂದು ಪೊಲೀಸರು ಹೇಳಿದ್ದಾರೆ. 

Also Read
ದೆಹಲಿ ಗಲಭೆ ಪಿತೂರಿ: ಉಮರ್, ಶಾರ್ಜೀಲ್ ಜಾಮೀನು ಅರ್ಜಿಗಳಿಗೆ ಪ್ರತಿಕ್ರಿಯಿಸದ ದೆಹಲಿ ಪೊಲೀಸರಿಗೆ ಸುಪ್ರೀಂ ತರಾಟೆ

ಪಿತೂರಿ ಪ್ರಕರಣದ ವಿಚಾರಣೆ ವಿಳಂಬಕ್ಕೆ ಪ್ರಕರಣದಲ್ಲಿ ಜಾಮೀನು ಪಡೆದ ಜನರೇ ಕಾರಣ ಮತ್ತು ಇದು ಇನ್ನೂ ಜೈಲಿನಲ್ಲಿರುವವರ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಸ್ಲೀಮ್‌ ಅಹ್ಮದ್‌ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಬಲವಾಗಿ ಅವಲಂಬಿಸಿದ್ದಾರೆ.

ಜಾಮೀನು ವಿರೋಧಕ್ಕೆ 8 ಪ್ರಮುಖ ಆಧಾರಗಳು

  1. ರಾಷ್ಟ್ರವ್ಯಾಪಿ ಆಡಳಿತ ಬದಲಿಸುವ ಸಂಚು: ಪ್ರತಿಭಟನೆ ಸಾಮಾನ್ಯದ್ದಲ್ಲ ಸರ್ಕಾರ ಅಸ್ಥಿರಗೊಳಿಸುವ ಸಂಘಟಿತ ಯೋಜನೆ.

  2. ಟ್ರಂಪ್ ಭೇಟಿಯ ಸಮಯದಲ್ಲೇ ಹೆಣದ ಸಂಚು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದ ಸಮಯದಲ್ಲಿಯೇ ಜಾಗತಿಕ ಗಮನ ಸೆಳೆಯುವಂತೆ ದಾಳಿ ಮತ್ತು ಗಲಭೆಗೆ ಯೋಜನೆ ರೂಪಿಸಲಾಗಿತ್ತು.

  3. ಯುಎಪಿಎ ಅಪರಾಧಗಳಿಗೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ: ಯುಎಪಿಎ ಅಡಿ ಜೈಲೇ ಅಂತಿಮ ಜಾಮೀನು ಅಪವಾದ ಎಂಬ ತತ್ವವನ್ನು ಅನ್ವಯಿಸಿ ಜಾಮೀನನ್ನು ವಿರಳವಾಗಿ ನೀಡಬೇಕು.

  4.  ವಿಚಾರಣೆ ವಿಳಂಬಕ್ಕೆ ಆರೋಪಿಗಳೇ ಕಾರಣ: ಜಾಮೀನು ಅರ್ಜಿ ಸಲ್ಲಿಸುವವರು ವಿಚಾರಣೆ ವಿಳಂಬವಾಗಿದೆ ಎಂಬುದು ಸರಿಯಲ್ಲ. ವಿಚಾರಣೆ ವಿಳಂಬಕ್ಕೆ ಆರೋಪಿಗಳೇ ಕಾರಣವಾಗಿದ್ದಾರೆ.

  5. ಸಾಕ್ಷಿಗಳ ಬಗ್ಗೆ ನೀಡಿರುವ ಮಾಹಿತಿ ಸುಳ್ಳು: 900 ಸಾಕ್ಷಿಗಳು ಇರುವುದರಿಂದ ವಿಚಾರಣೆ ವಿಳಂಬವಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳುತ್ತಾರೆ ಆದರೆ ಇರುವುದು ಕೇವಲ 155 ಸಾಕ್ಷಿಗಳು ಮಾತ್ರ. ಇದೊಂದು ಜಾಮೀನು ಪಡೆಯಲು ಸೃಷ್ಟಿಸಲಾದ ಕಪಟ ವಾದ

  6. ಉಮರ್‌ ಖಾಲಿದ್‌ ಈಗಾಗಲೇ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಅರ್ಜಿ ಹಿಂಪಡೆದಿದ್ದಾರೆ: ಹೀಗಾಗಿ ಪ್ರಕರಣ ಇದೀಗ ಅಂತಿಮ ಹಂತಕ್ಕೆ ತಲುಪಿದೆ.

  7. ಮುಸ್ಲಿಮೇತರರನ್ನು ಕೊಲ್ಲಲು ರಸ್ತೆತಡೆ: ಮುಸ್ಲಿಮೇತರರನ್ನು ಸಾಮೂಹಿಕವಾಗಿ ಕೊಲ್ಲಲು,ಕೋಮುಗಲಭೆ ಸೃಷ್ಟಿಸಲು ಹಾಗೂ ಧಾರ್ಮಿಕ ವಿಭಜನೆಗಾಗಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗಿತ್ತು.  

  8. ವಾಟ್ಸಾಪ್‌ ಗ್ರೂಪ್‌ ಮತ್ತುಸಭೆಗಳು: ಸಂಚು ರೂಪಿಸುವುದಕ್ಕಾಗಿ ವಿಶೇಷ ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸಿಕೊಂಡು ಸಭೆಗಳನ್ನು ನಡೆಸಲಾಗಿತ್ತು.

Kannada Bar & Bench
kannada.barandbench.com