

ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಇನ್ನಿತರ ಮೂವರು ಸಲ್ಲಿಸಿದ್ದ ಜಾಮೀನು ಅರ್ಜಿಗಳಿಗೆ ಪ್ರತಿಕ್ರಿಯೆ ನೀಡದ ದೆಹಲಿ ಪೊಲೀಸರನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ .
ಪೊಲೀಸರಿಗೆ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಈಗಾಗಲೇ ಸಾಕಷ್ಟು ಸಮಯಾವಕಾಶ ನೀಡಿದ್ದು ಅಕ್ಟೋಬರ್ 27 ರಂದು ಪ್ರಕರಣ ಇತ್ಯರ್ಥಪಡಿಸಲು ನಿರ್ಧರಿಸಿದ್ದಾಗಿ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ಪೀಠ ನೆನಪಿಸಿತು.
ಎಲ್ಲಾ ಜಾಮೀನು ಪ್ರಕರಣಗಳಲ್ಲಿ, ಪ್ರತಿಕ್ರಿಯೆ ಸಲ್ಲಿಸಬೇಕೆಂಬ ಪ್ರಶ್ನೆ ಇರುವುದಿಲ್ಲ ಎಂದು ನ್ಯಾಯಾಲಯ ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ಇದಾಗಲೇ ದೆಹಲಿ ಪೊಲೀಸರಿಗೆ ಸಾಕಷ್ಟು ಸಮಯಾವಕಾಶ ನೀಡಲಾಗಿದೆ ಎಂದಿತು.
ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ವಿಚಾರಣೆ ಮುಂದೂಡಿಕೆ ಮಾಡಬೇಕೆಂಬ ಎಎಸ್‌ಜಿ ಎಸ್ ವಿ ರಾಜು ಅವರ ಮನವಿಗೆ ವಿರೋಧ ವ್ಯಕ್ತಪಡಿಸಿದರು.
ಎಎಸ್‌ಜಿ ಎಸ್ ವಿ ರಾಜು ಅವರ ಮನವಿಗೆ ಅಸಮಾಧಾನ ಸೂಚಿಸಿದ ಪೀಠವು, "ನೀವು ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಹಾಜರಾಗುತ್ತಿರಬಹುದು, ಆದರೆ, ನಾವು ಇದಾಗಲೇ ಸಾಕಷ್ಟು ಸಮಯಾವಕಾಶ ನೀಡಿದ್ದೇವೆ," ಎಂದು ಹೇಳಿತು.
ಮುಂದುವರೆದು, ಎಎಸ್‌ಜಿ ಅವರಿಗೆ ನಾಳೆ ಅಥವಾ ನಾಡಿದ್ದೇ ಪ್ರಕರಣದಲ್ಲಿ ವಾದಮಂಡಿಸುವಂತೆ ನ್ಯಾಯಾಲಯ ಸೂಚಿಸಿತು. ಆದರೆ ರಾಜು ಅವರು ಹೆಚ್ಚಿನ ಸಮಯಾವಕಾಶಕ್ಕಾಗಿ ಕೋರಿಕೆ ಮಂಡಿಸಿದರು. ಇದಕ್ಕೆ ಒಪ್ಪದ ನ್ಯಾಯಾಲಯವು, "ಇಲ್ಲ, ಇಲ್ಲ, ನಿಮ್ಮ ಪ್ರತಿಕ್ರಿಯೆಯೊಂದಿಗೆ ನಾಡಿದ್ದ ಪ್ರಕರಣದಲ್ಲಿ ವಾದ ಮಂಡಿಸಿ. ದೀಪಾವಳಿಗಿಂತ ಮುಂಚಿತವಾಗಿ ಪ್ರಕರಣ ಅಲಿಸಲು ಕೋರಿದ್ದ ಕಪಿಲ್ ಸಿಬಲ್ ಅವರಿಗೆ ನಾವು ಅಗುವುದಿಲ್ಲ ಎಂದಿದ್ದೆವು" ಎಂದು ಹೇಳಿತು.
ಅಂತಿಮವಾಗಿ, ನ್ಯಾಯಾಲಯವು ಪ್ರಕರಣವನ್ನು ಶುಕ್ರವಾರಕ್ಕೆ ಮುಂದೂಡಿತು. ಆರೋಪಿಗಳು ಸುಮಾರು ಐದು ವರ್ಷಗಳಿಂದ ವಿಚಾರಣೆರಹಿತವಾಗಿ ಜೈಲಿನಲ್ಲಿದ್ದಾರೆ ಎಂಬ ಅಂಶದತ್ತಲೂ ನ್ಯಾಯಾಲಯ ಬೆರಳು ಮಾಡಿತು.
ಖಾಲಿದ್ ಹಾಗೂ ಇತರರು ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 2 ರಂದು ತಮ್ಮ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 22 ರಂದು ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು .
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ 2020 ರ ಫೆಬ್ರವರಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಈಶಾನ್ಯ ದೆಹಲಿಯಲ್ಲಿ ಗಲಭೆ ಉಂಟಾಗಿತ್ತು. ದೆಹಲಿ ಪೊಲೀಸರ ಪ್ರಕಾರ ಘಟನೆಯಲ್ಲಿ 53 ಜನರು ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು.
ಆರೋಪಿಗಳು ಹಲವು ಗಲಭೆಗಳು ಉಂಟಾಗುವಂತೆ ವಿಸ್ತೃತ ಪಿತೂರಿ ನಡೆಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಸಂಬಂಧ ದೆಹಲಿ ಪೊಲೀಸ್ ವಿಶೇಷ ಘಟಕ ಐಪಿಸಿ ಮತ್ತು ಯುಎಪಿಎ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಿತ್ತು.
ಬಹುತೇಕ ಆರೋಪಿಗಳ ಮೇಲೆ ವಿವಿಧ ಎಫ್‌ಐಆರ್‌ಗಳು ದಾಖಲಾಗಿದ್ದು ನ್ಯಾಯಾಲಯಗಳಲ್ಲಿ ಹಲವು ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಹೆಚ್ಚಿನವರು 2020ರಿಂದ ಬಂಧನದಲ್ಲಿದ್ದಾರೆ.
ಉಮರ್ ಖಾಲಿದ್ ಅವರನ್ನು ಸೆಪ್ಟೆಂಬರ್ 2020ರಲ್ಲಿ ಬಂಧಿಸಲಾಗಿತ್ತು. ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆಗೆ ಸಂಬಂಧಿಸಿದ ಸೆಕ್ಷನ್‌ಗಳು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಖಾಲಿದ್ ವಿರುದ್ಧ ಆರೋಪ ಮಾಡಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದಾರೆ.