ಶೂ ಎಸೆಯಲು ಯತ್ನಿಸಿದ ಪ್ರಕರಣ: ವಕೀಲನ ವಿರುದ್ಧ ಕ್ರಮಕ್ಕೆ ಸುಪ್ರೀಂ ನಕಾರ; ರಾಕೇಶ್ ಬಿಡುಗಡೆ

ಘಟನೆಯ ನಂತರವೂ ಸಿಜೆಐ ಗವಾಯಿ ಅವರು ವಿಚಲಿತರಾಗದಿರುವುದಕ್ಕೆ ಪ್ರಧಾನಿ ಮೋದಿ, ಎಸ್‌ಜಿ ತುಷಾರ್ ಮೆಹ್ತಾ ಪ್ರಶಂಸೆ ವ್ಯಕ್ತಪಡಿಸಿದರು. ವಕೀಲನ ಕೃತ್ಯ ಸಂಭ್ರಮಿಸುವ ಪುಂಡರ ವಿರುದ್ಧ ಕ್ರಮಕ್ಕೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
CJI BR Gavai
CJI BR Gavai
Published on

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ನ್ಯಾಯಾಲಯದಲ್ಲಿ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್‌ ಕಿಶೋರ್‌ನನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ .

ವಕೀಲನ ವಿರುದ್ಧ ಆರೋಪ ಹೊರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕಾರಣ ಪೊಲೀಸರು ಆತನನ್ನು ಬಿಡುಗಡೆ ಮಾಡಿದರು.

Also Read
ಸಿಜೆಐ ಅವರಿಗೆ ಶೂ ಎಸೆಯಲು ಯತ್ನ: ರಾಕೇಶ್ ಕಿಶೋರ್ ವಕೀಲಿಕೆ ಅಮಾನತುಗೊಳಿಸಿದ ಬಿಸಿಐ

ಶೂ ಎಸೆತ ಯತ್ನ ಘಟನೆ ನಡೆದ ತಕ್ಷಣ ದೆಹಲಿ ಪೊಲೀಸರು ಕಿಶೋರ್‌ನನ್ನು ವಶಕ್ಕೆ ಪಡೆದು ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು ಎಂದು ವರದಿಯಾಗಿದೆ .

"ಮೇರಾ ಸಂದೇಶ್ ಹರ್ ಸನಾತನಿ ಕೆ ಲಿಯೇ ಹೈ... ಸನಾತನ ಧರ್ಮ ಕಾ ಅಪಮಾನ್‌ ನಹೀ ಸಹೇಗಾ ಹಿಂದೂಸ್ತಾನ್" ಎಂಬ ಪತ್ರವನ್ನು  ಆತನಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್ ವಕೀಲರ ಸಂಘ, ಶಹದಾರಾ ವಕೀಲರ ಸಂಘ ​​ಮತ್ತು ದೆಹಲಿಯ ವಕೀಲರ ಪರಷತ್ತಿನ ಗುರುತಿನ ಚೀಟಿಗಳನ್ನು ಕಿಶೋರ್‌ ಹೊಂದಿದ್ದ.

ನ್ಯಾಯಾಲಯವು ಆಪಾದಿತ ವಕೀಲನ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸುವುದಿಲ್ಲ ಎಂದು ವಿಚಾರಣೆಯ ನಂತರ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಔಪಚಾರಿಕವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಕಿಶೋರ್‌ನನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿಶೋರ್‌ನ ಶೂಗಳು ಮತ್ತು ದಾಖಲೆಗಳನ್ನು ಹಿಂತಿರುಗಿಸುವಂತೆಯೂ ರಿಜಿಸ್ಟ್ರಾರ್‌ ಜನರಲ್‌ ಅವರು ಪೊಲೀಸರಿಗೆ ನಿರ್ದೇಶಿಸಿದ್ದರು.

ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಭಾರತೀಯ ವಕೀಲರ ಪರಿಷತ್ತು ಆತನ ವಕೀಲಿಕೆ ಪರವಾನಗಿಯನ್ನು ಅಮಾನತುಗೊಳಿಸಿತು.

ಈ ಮಧ್ಯ ಯಾವುದೇ ಮುಜಗರಕ್ಕೆ ಒಳಗಾಗದ ಸಿಜೆಐ ಗವಾಯಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಶಂಸೆ ವ್ಯಕ್ತಪಡಿಸಿದರು. ಘಟನೆಯನ್ನು ಖಂಡಿಸಿದ ಮೋದಿ ಅವರು ಸಿಜೆಐ ಅವರ ಶಾಂತ ವರ್ತನೆಯನ್ನು ಕೊಂಡಾಡಿದರು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಘಟನೆಯನ್ನು ಕಟು ಶಬ್ದಗಳಿಂದ ಖಂಡಿಸಿದ್ದು,
"ದಲಿತ ಸಮುದಾಯಕ್ಕೆ ಸೇರಿರುವ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು. ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭಧ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ" ಎಂದಿದ್ದಾರೆ.

ಮುಂದುವರಿದು, "ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದುಹಾಕಿ, ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ಕಾರಣಕ್ಕಾಗಿಯೇ ರಾಕೇಶ್ ಕಿಶೋರ್ ನಂತಹ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎನ್ನುವುದನ್ನು ನಾವು ಮರೆಯಬಾರದು. ನಾಥೂರಾಮ್ ಗೋಡ್ಸೆಯಂತಹ ಒಬ್ಬ ಕೊಲೆಗಡುಕನನ್ನು ದೇಶಪ್ರೇಮಿ ಎಂದು ಮೆರೆಸಲು ಹೊರಟಿರುವ ರೀತಿಯಲ್ಲಿಯೇ ಕೆಲವು ಪುಂಡರು ವಕೀಲನ ಕುಕೃತ್ಯವನ್ನು ಸಂಭ್ರಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ" ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಕಳಕಳಿ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ವಕೀಲರ ಸಂಘ, ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಸಂಘ ಕೂಡ ಘಟನೆಯನ್ನು ಹಿಂದೆಂದೂ ನಡೆದಿರದ ಹೇಯ ಕೃತ್ಯ ಎಂದು ಖಂಡಿಸಿವೆ. ಇದು ನ್ಯಾಯಾಂಗದ ಘನತೆಯನ್ನು ಹಾಳುಮಾಡುತ್ತವೆ ಎಂದಿರುವ ಅವು ಸಂಯಮ, ಸಭ್ಯತೆ ಕಾಯ್ದುಕೊಳ್ಳುವಂತೆ ವಕೀಲರಿಗೆ ಸೂಚಿಸಿವೆ.

Also Read
ಸಿಜೆಐ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ: ಇದೆಲ್ಲಾ ಪರಿಣಾಮ ಬೀರದು ಎಂದು ನ್ಯಾ. ಗವಾಯಿ ಪ್ರತಿಕ್ರಿಯೆ

ಮಧ್ಯಪ್ರದೇಶದ ಖಜುರಾಹೊ ಸ್ಮಾರಕ ಸಮುಚ್ಛಯದಲ್ಲಿರುವ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ಪ್ರಾಚೀನ ವಿಗ್ರಹವನ್ನು ಸರಿಪಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದ ವೇಳೆ ಸಿಜೆಐ ಅವರು ನೀಡಿದ್ದ ಹೇಳಿಕೆ ಇಂದಿನ ಘಟನೆಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. 

ಪರಿಹಾರಕ್ಕಾಗಿ ದೇವರನ್ನೇ ಪ್ರಾರ್ಥಿಸಿ ಎಂದು ದಾವೆದಾರರಿಗೆ ಸಿಜೆಐ ಅವರು ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದು ಹಿಂದೂ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ಎಂದು ಕೆಲವರು ಬಿಂಬಿಸಿದ್ದರು. ಆದರೆ ತಾನು ಅಗೌರವ ತೋರಿಲ್ಲ ಎಂದು ಸಿಜೆಐ ನಂತರ ತಿಳಿಸಿದ್ದರು. "ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ... ಇದು (ಅಪಪ್ರಚಾರ) ಸಾಮಾಜಿಕ ಮಾಧ್ಯಮದಲ್ಲಿ ನಡೆದಿದೆ"  ಎಂದು ಅವರು ಹೇಳಿದ್ದರು.

Kannada Bar & Bench
kannada.barandbench.com