ದೆಹಲಿಯ ವಾಯು ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು ನ್ಯಾಯಮೂರ್ತಿಗಳು ಮನೆಯಲ್ಲೂ ಮಾಸ್ಕ್ ಧರಿಸುವಷ್ಟು ಪರಿಸ್ಥಿತಿ ಹದಗೆಟ್ಟಿದೆ ಎಂದು ಸನ್ನಿವೇಶದ ಗಂಭೀರತೆಯ ಬಗ್ಗೆ ಕನ್ನಡಿ ಹಿಡಿದಿದೆ (ಆದಿತ್ಯ ದುಬೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).
ಕೃಷಿ ತ್ಯಾಜ್ಯ ಸುಡುವುದರಿಂದಾಗಿ ದೆಹಲಿ, ಹರಿಯಾಣ, ಪಂಜಾಬ್ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು ರೈತರಿಗೆ ಹ್ಯಾಪಿ ಸೀಡರ್ ಯಂತ್ರಗಳನ್ನು ಒದಗಿಸುವ ಸಂಬಂಧ ವಿವರಣೆ ನೀಡುವಂತೆ ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯಗಳನ್ನು ನ್ಯಾಯಾಲಯ ಕೇಳಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಸೂರ್ಯಕಾಂತ್ ಅವರನ್ನೊಳಗೊಂಡ ವಿಶೇಷ ಪೀಠ ಪ್ರಕರಣದ ವಿಚಾರಣೆ ನಡೆಸಿತು.
"ನಾವು ಮನೆಯಲ್ಲಿಯೂ ಸಹ ಮುಖಗವಸುಗಳನ್ನು ಧರಿಸುವಂತಾಗಿದೆ, ಪರಿಸ್ಥಿತಿ ತುಂಬಾ ಗಂಭೀರವಾಗಿದೆ" ಎಂದು ಸಿಜೆಐ ಹೇಳಿದರು. ಇದೇ ವೇಳೆ ನ್ಯಾ. ಸೂರ್ಯಕಾಂತ್ "ಲಕ್ಷಗಟ್ಟಲೆ (ಹ್ಯಾಪಿ ಸೀಡರ್) ಯಂತ್ರಗಳು ಲಭ್ಯವಿವೆ ಎಂದು ನೀವು ಹೇಳುತ್ತಿದ್ದೀರಿ. ಆದರೆ ರೈತರಿಗೆ ಈ ಯಂತ್ರಗಳನ್ನು ಖರೀದಿಸುವ ಶಕ್ತಿಯಿಲ್ಲ. ಭೂಹಿಡುವಳಿ ಕಾನೂನಿನ ನಂತರ ರೈತರಿಗೆ ನೀಡುವ ಪ್ರೋತ್ಸಾಹ ಧನ ಹೆಚ್ಚಾಗಿದೆ. ಚಳಿಗಾಲದಲ್ಲಿ (ಕೃಷಿ ತ್ಯಾಜ್ಯವನ್ನು) ರಾಜಸ್ಥಾನದಲ್ಲಿ ಮೇಕೆಗಳಿಗೆ ಮೇವು ಇತ್ಯಾದಿಗಳಾಗಿ ಬಳಸಬಹುದು" ಎಂದು ಹೇಳಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಇದಕ್ಕೆ ಪ್ರತಿಕ್ರಿಯಿಸುತ್ತಾ “2 ಲಕ್ಷ ಯಂತ್ರಗಳು ಶೇ 80ರಷ್ಟು ಸಬ್ಸಿಡಿ ದರದಲ್ಲಿ ಲಭ್ಯವಿದೆ” ಎಂದು ಹೇಳಿದರು.
"ಸಬ್ಸಿಡಿ ನೀಡಿದ ನಂತರ ನಿಜವಾದ ಬೆಲೆ ಎಷ್ಟೆಂದು ಅಧಿಕಾರಿಗಳು ತಿಳಿಸಲು ಸಾಧ್ಯವೇ? ನಾನು ರೈತನಾಗಿದ್ದು ಸಿಜೆಐ ಕೂಡ ರೈತ ಕುಟುಂಬದಿಂದ ಬಂದವರು, ನಮಗೆ ತಿಳಿದಿದೆ" ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು. ಆಗ ಎಸ್‌ಜಿ ಅವರು, ಸಹಕಾರಿ ಸಂಘಗಳ ಮೂಲಕ ಸಣ್ಣ ರೈತರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕೃಷಿ ತ್ಯಾಜ್ಯಗಳನ್ನು ಸರ್ಕಾರ ಪಡೆದು ಅವುಗಳನ್ನು ಕೈಗಾರಿಕೆಗಳಿಗೆ ಪೂರೈಸಿದರೆ ರೈತರು ಯಾವುದೇ ಹಣ ಪೂರೈಸುವ ಅಗತ್ಯ ಬೀಳುವುದಿಲ್ಲ. ಅಲ್ಲದೆ ಕೃಷಿ ತ್ಯಾಜ್ಯ ಸುಡುವಿಕೆ ಮಾತ್ರವಲ್ಲದೆ ಇತರೆ ಅಂಶಗಳೂ ಮಾಲಿನ್ಯಕ್ಕೆ ಕಾರಣ ಎಂದು ನ್ಯಾ. ಸೂರ್ಯಕಾಂತ್ ಅಭಿಪ್ರಾಯಪಟ್ಟರು. ಇದೇ ವೇಳೆ, ಎರಡು ದಿನಗಳ ಕಾಲ ಲಾಕ್‌ಡೌನ್ ಮಾಡುವಂತೆಯೂ ಸಲಹೆ ನೀಡಿದರು.
ವಾದ ಮುಂದುವರೆಸಿದ ಎಸ್ ಜಿ ಮೆಹ್ತಾ ಮಾಲಿನ್ಯ ನಿಯಂತ್ರಣ ಕುರಿತಂತೆ ಇಂದು ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆದಿರುವುದಾಗಿ ತಿಳಿಸಿದರು.
ಈ ಹಂತದಲ್ಲಿ ಸಿಜೆಐ ರಮಣ ಅವರು ಗಾಳಿಯ ಗುಣಮಟ್ಟ ಸೂಚ್ಯಂಕವನ್ನು 200 ಅಂಕಗಳಿಗಿಂತ ಕಡಿಮೆ ಮಾಡಲು ಹೇಗೆ ಸುಧಾರಣಾ ಕ್ರಮ ಕೈಗೊಳ್ಳಬಹುದು ಎಂಬುದನ್ನು ನಮಗೆ ತಿಳಿಸಿ ಎಂದರು. ಅಲ್ಲದೆ ಎರಡು ದಿನಗಳ ಮಟ್ಟಿಗೆ ರೈತರು ಕೃಷಿ ತ್ಯಾಜ್ಯ ಸುಡದಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ರಾಜಕಾರಣ ಮತ್ತು ಸರ್ಕಾರದಾಚೆಗೆ ಸಮಸ್ಯೆಯನ್ನು ಪರಿಗಣಿಸಬೇಕು. ಇದೊಂದು ಜಂಟಿ ಹೊಣೆಗಾರಿಕೆ. ರೈತರೇ ಇದಕ್ಕೆ ಕಾರಣ ಎನ್ನುವಂತಿಲ್ಲ ಎಂದರು.