ದೆಹಲಿ ವಾಯುಮಾಲಿನ್ಯ: ಮಾಹಿತಿ ತಿರುಚಲಾಗುತ್ತಿದೆ ಎಂಬ ಆರೋಪದ ನಡುವೆಯೇ ವಾಯು ಗುಣಮಟ್ಟ ಮಾಪಕಗಳ ವಿವರ ಕೇಳಿದ ಸುಪ್ರೀಂ

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ನಗರದೆಲ್ಲೆಡೆ ನೀರು ಸಿಂಪಡಿಸುತ್ತಿದ್ದು ಇದನ್ನು ರಾಜಕೀಯ ಪಕ್ಷಗಳು ವಿವಾದಕ್ಕೀಡು ಮಾಡುತ್ತಿವೆ ಎಂದರು.
Supreme Court, Air Pollution
Supreme Court, Air Pollution
Published on

ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅಳೆಯುವ ಮಾಪಕಗಳ ಸ್ವರೂಪ ಮತ್ತು ಅವುಗಳ ದಕ್ಷತೆ ವಿವರಿಸುವ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ದೆಹಲಿ ಸರ್ಕಾರಕ್ಕೆ ಸೂಚಿಸಿದೆ.

ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವನ್ನು (ಎಕ್ಯೂಐ) ತಿರುಚಲು ಮಾಲಿನ್ಯ ಮೇಲ್ವಿಚಾರಣಾ ಕೇಂದ್ರಗಳ ಸುತ್ತಲೂ ನೀರು ಸಿಂಪಡಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಹಾಗೂ ಎನ್‌ ವಿ ಅಂಜಾರಿಯಾ ಅವರಿದ್ದ ಪೀಠ ಎಕ್ಯೂಐ ಅಳೆಯಲು ಬಳಸುವ ಮಾಪಕಗಳ ದಕ್ಷತೆ ಮತ್ತು ಅವುಗಳ ಸ್ವರೂಪ ವಿವರಿಸುವ ಅಫಿಡವಿಟನ್ನು ನಾಡಿದ್ದು ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿತು.

Also Read
ದೆಹಲಿ ವಾಯು ಮಾಲಿನ್ಯ: ಜಿಆರ್‌ಎಪಿ ಜಾರಿಗಾಗಿ ತಂಡ ರಚಿಸುವಂತೆ ಎನ್‌ಸಿಆರ್‌ ರಾಜ್ಯಗಳಿಗೆ ಸುಪ್ರೀಂ ಆದೇಶ

ಅಮಿಕಸ್‌ ಕ್ಯೂರಿ ಅವರು ಅಪರಾಜಿತಾ ಸಿಂಗ್ ಅವರು ಮಾಲಿನ್ಯ ಮೇಲ್ವಿಚಾರಣಾ ಕೇಂದ್ರಗಳ ಸುತ್ತಲೂ ನೀರು ಸಿಂಪಡಿಸಿ ದತ್ತಾಂಶ ತಿರುಚುತ್ತಿರುವ ಕುರಿತ ಮಾಧ್ಯಮ ವರದಿಗಳನ್ನು ಮಂಡಿಸಿದರು.

ಆದರೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್  ಐಶ್ವರ್ಯ ಭಾಟಿ, ನಗರದೆಲ್ಲೆಡೆ ನೀರು ಸಿಂಪಡಿಸುತ್ತಿದ್ದು ಇದನ್ನು ರಾಜಕೀಯ ಪಕ್ಷಗಳು ವಿವಾದಕ್ಕೀಡು ಮಾಡುತ್ತಿವೆ ಎಂದರು. ಆಗ ಸಿಜೆಐ ಸುಪ್ರೀಂ ಕೋರ್ಟ್‌ ಸುತ್ತಲೂ ನೀರು ಸಿಂಪಡಿಸುತ್ತಿರುವುದನ್ನು ಕಂಡಿದ್ದಾಗಿ ಹೇಳಿದರು.

Also Read
ದೆಹಲಿ ಮಾಲಿನ್ಯ: ಉದ್ಯೋಗ ವಂಚಿತ ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡದ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಸಮನ್ಸ್

ಕೃಷಿ ತ್ಯಾಜ್ಯ ದಹನ ಪ್ರಕರಣಗಳು ಕಡಿಮೆಯಾಗಿವೆ ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅಪರಾಜಿತಾ ಅವರು ಹೇಳಿದಾಗ ನ್ಯಾಯಾಲಯ 28,000 ಘಟನೆಗಳಿಂದ 4,000 ಕ್ಕೆ ಇಳಿದಿರುವುದಾಗಿ ಸರ್ಕಾರದ ವರದಿ ಹೇಳುತ್ತಿದೆ ಎಂದಿತು. ಇದನ್ನು ಒಪ್ಪದ ಅಪರಾಜಿತಾ ಅವರು ತಜ್ಞರು ತಪ್ಪು ಮಾಹಿತಿ ನೀಡುತ್ತಿದ್ದು ಸಿಎಕ್ಯೂಎಂ ಕೂಡ ಇದು ತಪ್ಪು ಎಣಿಕೆ ಎನ್ನುತ್ತಿದೆ ಎಂದರು.

ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಅವರು ಹೇಳಿದಂತೆ ದೆಹಲಿಯಲ್ಲಿ ಜನಜೀವನಕ್ಕೆ ಹಾನಿ ಆಗದಂತೆ ನೋಡಿಕೊಳ್ಳಲು, ಎಲ್ಲಾ ಚಟುವಟಿಕೆಗಳನ್ನೂ ನಿಲ್ಲಿಸಬೇಕು ಎಂಬುದನ್ನು ತಾನು ಒಪ್ಪುವುದಿಲ್ಲ. ಆದರೆ ಮಾಲಿನ್ಯ ನಿಯಂತ್ರಣಕ್ಕೆಪರಿಸರ ಸಚಿವಾಲಯ ಹಾಗೂ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ನೆರೆಯ ರಾಜ್ಯಗಳೊಂದಿಗೆ ಸಂಘಟಿತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 19ರಂದು ನಿಗದಿಪಡಿಸಲಾಗಿದೆ.

Kannada Bar & Bench
kannada.barandbench.com