
ದೆಹಲಿಯಲ್ಲಿ ಉಂಟಾದ ವಿಪರೀತ ವಾಯು ಮಾಲಿನ್ಯದಿಂದಾಗಿ ಕಾಮಗಾರಿಗಳು ಸ್ಥಗಿತಗೊಂಡ ಪರಿಣಾಮ ಜೀವನೋಪಾಯ ನಡೆಸಲು ದುಸ್ಸಾಧ್ಯವಾದ ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡಲು ರಾಷ್ಟ್ರೀಯ ರಾಜಧಾನಿ ಪ್ರದೇಶದ ವ್ಯಾಪ್ತಿಯ ರಾಜ್ಯಗಳು ವಿಫಲವಾಗಿರುವುದನ್ನು ಸುಪ್ರೀಂ ಕೋರ್ಟ್ ಸೋಮವಾರ ಗಂಭೀರವಾಗಿ ಪರಿಗಣಿಸಿದೆ [ವಾಯು ಗುಣಮಟ್ಟ ನಿರ್ವಹಣಾ ಆಯೋಗ (ವಾಯು ಮಾಲಿನ್ಯ) ಮತ್ತು ಜಿಆರ್ಎಪಿ IV ಜಾರಿ ಕುರಿತಾದ ಪ್ರಕರಣ ].
ಈ ಸಂಬಂದ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ವ್ಯಾಪ್ತಿಯ ರಾಜ್ಯಗಳಾದ ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗಳು ಡಿಸೆಂಬರ್ 5 ರಂದು ಮಧ್ಯಾಹ್ನ 3.30 ಕ್ಕೆ ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ಹಾಜರಾಗುವಂತೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಆದೇಶಿಸಿದೆ.
“ನಮಗೆ ಪರಿಹಾರ ಧನ ನೀಡಿರುವ ಪುರಾವೆ ಬೇಕು. ಕಟ್ಟಡ ಕಾರ್ಮಿಕರಿಗೆ ಪರಿಹಾರ ಪಾವತಿಸಬೇಕೆಂದು ನಾವು ನೀಡಿದ್ದ ಆದೇಶವನ್ನು ಯಾವುದೇ ಎನ್‌ಸಿಆರ್ ರಾಜ್ಯಗಳು ಪಾಲಿಸಿಲ್ಲ ಎಂಬುದು ಗೊತ್ತಾಗಿದೆ. ನಯಾಪೈಸೆ ಪಾವತಿಸಿದ್ದಕ್ಕೂ ಸಾಕ್ಷಿ ಇಲ್ಲ. ಮುಖ್ಯ ಕಾರ್ಯದರ್ಶಿಗಳು ವಿಸಿ ಮೂಲಕ ಹಾಜರಾಗುವಂತೆ ಆದೇಶಿಸುತ್ತಿದ್ದೇವೆ. ಅವರು ಹಾಜರಾಗಲಿ ಆ ಬಳಿಕ ಅವರಿಗೆ ಗಾಂಭೀರ್ಯ ಬರುತ್ತದೆ. ನಮಗೆ ಸಾಕ್ಷ್ಯ ಬೇಕು” ಎಂದು ಪೀಠ ಕಿಡಿಕಾರಿತು.
ಅರ್ಹ ಕಟ್ಟಡ ಕಾರ್ಮಿಕರನ್ನು ಗುರುತಿಸಿ ನಂತರ ಪಾವತಿ ಮಾಡಲಾಗುವುದು. 19,000 ಕಾರ್ಮಿಕರ ಬಗ್ಗೆ ಪರಿಶೀಲನೆ ನಡೆದಿದ್ದು ಅವರಿಗೆ ಪರಿಹಾರ ಧನ ಪಾವತಿಸಲು ಸಮಸ್ಯೆ ಇಲ್ಲ. ಉಳಿದವರ ಬಗ್ಗೆ ಪರಿಶೀಲಿಸಬೇಕಿದೆ ಎಂದು ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಷದಾನ್ ಫರಾಸತ್ ತಿಳಿಸಿದರು.
ಆಗ ನ್ಯಾಯಾಲಯ, "ನಮಗೆ ಪರಿಹಾರ ಧನ ಪಾವತಿಯ ಪುರಾವೆ ಬೇಕು, ನಿರ್ದೇಶನವಲ್ಲ... ರಾಷ್ಟ್ರ ರಾಜಧಾನಿ ಪ್ರದೇಶ ವ್ಯಾಪ್ತಿಯ ರಾಜ್ಯಗಳಲ್ಲಿ ಕನಿಷ್ಠ ಒಂದು ರಾಜ್ಯವಾದರೂ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರಿಗೆ ಸೂಕ್ತ ಪರಿಹಾರ ಮೊತ್ತ ಪಾವತಿಸಿರುವುದನ್ನು ವಿವರಿಸುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ ಹಾಗೆ ಮಾಡಿಲ್ಲ" ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
ಈಗಾಗಲೇ ಪರಿಹಾರ ಧನ ವಿತರಿಸಿದ್ದೇವೆ ಎಂದು ರಾಜಸ್ಥಾನ ಪರ ವಕೀಲರು ಹೇಳಿದಾಗ ಅದರ ಬಗ್ಗೆ ದಾಖಲೆ ಒದಗಿಸುವಂತೆ ನ್ಯಾಯಾಲಯ ತಾಕೀತು ಮಾಡಿತು.
ದೆಹಲಿಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಪೀಠದಲ್ಲಿ ನಡೆಯಿತು. ಪಕ್ಕದ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೊಲಗದ್ದೆಗಳಲ್ಲಿ ಕೂಳೆ ಸುಡುವ ಪ್ರಕರಣಗಳನ್ನು ತಡೆಯಲು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿದೆ. ಜಿಆರ್‌ಎಪಿ ಹಂತ IVನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಈ ಹಿಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.