ದೆಹಲಿಯಾ ಆಲ್ವಾರ್ ಮತ್ತು ಪಾಣಿಪತ್ ಕಾರಿಡಾರ್‌ಗಳಲ್ಲಿ ಕಳೆದ ಜುಲೈನಲ್ಲಿ ಕೈಗೆತ್ತಿಕೊಳ್ಳಬೇಕಿದ್ದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಯೋಜನೆಗೆ ಹಣ ಒದಗಿಸಲು ವಿಫಲವಾದ ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರ ಜಾಹೀರಾತಿಗಾಗಿ ಮೀಸಲಿಟ್ಟ ಹಣವನ್ನು ಆರ್‌ಆರ್‌ಟಿಎಸ್ ಯೋಜನೆಗಳಿಗೆ ವರ್ಗಾಯಿಸುವಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಆದೇಶ ನೀಡಲು ಮುಂದಾಯಿತು. ಆದರೆ ಎಎಪಿ ಸರ್ಕಾರ ಭರವಸೆ ಈಡೇರಿಸಲು ಸ್ವಲ್ಪ ಸಮಯ ನೀಡುವುದಕ್ಕಾಗಿ ಆದೇಶವನ್ನು ಅದು ವಾರದ ಮಟ್ಟಿಗೆ ತಡೆ ಹಿಡಿಯಿತು.
"ಕಳೆದ ಮೂರು ವರ್ಷಗಳ ಜಾಹೀರಾತು ನಿಧಿ ಮಾಹಿತಿ ಕೋರಲಾಯಿತು. ಕಳೆದ 3 ವರ್ಷಗಳಲ್ಲಿ ಇದರ ಮೊತ್ತ ₹ 1,100 ಕೋಟಿಯಾಗಿದ್ದು ಈ ವರ್ಷ ₹ 550 ಕೋಟಿ ಆಗಿದೆ. ಈ ಹಣ ವರ್ಗಾಯಿಸುವಂತೆ ಸೂಚಿಸಲು ನಮಗೆ ಇಚ್ಛೆ ಇದೆ. ಆದರೆ, ಈ ಹಿಂದಿನ ವಿಚಾರಣೆ ವೇಳೆ, (ದೆಹಲಿ ಸರ್ಕಾರದ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ) ಡಾ.ಸಿಂಘ್ವಿ ಅವರು ಹಣ ಲಭ್ಯವಾಗುವಂತೆ ಮಾಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಜಾಹೀರಾತಿಗಾಗಿ ನಿಗದಿಪಡಿಸಿದ ಹಣವನ್ನು ಈ ಯೋಜನೆಗೆ ಹಂಚಿಕೆ ಮಾಡಬೇಕೆಂದು ನಿರ್ದೇಶಿಸದೆ ಬೇರೆ ದಾರಿ ಇಲ್ಲ. ಆದರೆ, ದೆಹಲಿ ಸರ್ಕಾರದ ಪರ ವಕೀಲರ ಕೋರಿಕೆಯ ಮೇರೆಗೆ, ನಾವು ಈ ಆದೇಶವನ್ನು ಒಂದು ವಾರದ ಮಟ್ಟಿಗೆ ತಡೆಹಿಡಿಯುತ್ತಿದ್ದೇವೆ. ಹಣ ವರ್ಗಾಯಿಸದಿದ್ದರೆ ಆದೇಶ ಜಾರಿಗೆ ಬರಲಿದೆ" ಎಂದು ನ್ಯಾಯಾಲಯ ತಿಳಿಸಿದೆ.
ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಮತ್ತು ನಗರದ ಮಾಲಿನ್ಯಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ ಸಮೀಪದ ರಾಜ್ಯಗಳ ಕೃಷಿ ತ್ಯಾಜ್ಯ ದಹನ ಕುರಿತಾದ ಪ್ರಕರಣದ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿತು.
ಇಂದು ಕೈಗೆತ್ತಿಕೊಳ್ಳಲಾದ ಅರ್ಜಿಗಳಲ್ಲಿ ಪರಿಸರ ಸ್ನೇಹಿ ಸಾರಿಗೆ ವಿಧಾನವೆಂದು ಹೇಳಲಾಗುವ ಆರ್‌ಆರ್‌ಟಿಎಸ್ ಯೋಜನೆ ಜಾರಿಗೆ ತೋರುತ್ತಿದ್ದ ವಿಳಂಬ ಪ್ರಶ್ನಿಸಿದ್ದ ಮನವಿಯೂ ಇತ್ತು.
ಸರ್ಕಾರ ಆರ್‌ಆರ್‌ಟಿಎಸ್ ಯೋಜನೆಗೆ ಹಣ ನೀಡದಿದ್ದರೆ ಜಾಹಿರಾತಿಗಾಗಿ ಮೀಸಲಿಟ್ಟ ಹಣಕ್ಕೆ ನಿರ್ಬಂಧ ಹೇರಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ವಿಚಾರಣೆಯ ಆರಂಭದಲ್ಲಿ ನ್ಯಾಯಾಲಯ ನುಡಿಯಿತು. ಈ ಕುರಿತು ಆದೇಶ ಮಾಡಲು ಮುಂದಾಯಿತು. ನಂತರ ಸಿಂಘ್ವಿಯವರ ಭರವಸೆಯ ಮೇರೆಗೆ ಒಂದು ವಾರ ತಡೆಯಲು ನಿರ್ಧರಿಸಿತು.
ಯೋಜನೆಗೆ ಸಂಬಂಧಿಸಿದಂತೆ ಏನು ಮಾಡಲಾಗಿದೆ ಎಂಬುದನ್ನು ನೋಡಲು ಒಂದು ವಾರದ ನಂತರ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿತು. ಇದೇ ವೇಳೆ, "ಸರ್ಕಾರಗಳು ಸಹಕರಿಸುವುದೊಂದೇ ಈಗಿರುವ ಮಾರ್ಗ. ಸರ್ಕಾರ ಸಮಯಾವಕಾಶವನ್ನು ಕೋರಿ ಗಡುವು ವಿಸ್ತರಣೆ ಕೂಡ ಕೇಳಲಿಲ್ಲ. ನ್ಯಾಯಾಲಯವನ್ನು ಅದು ಲಘುವಾಗಿ ಪರಿಗಣಿಸಲು ಸಾಧ್ಯ ಇಲ್ಲ" ಎಂದು ಅದು ದೆಹಲಿ ಸರ್ಕಾರದ ವರ್ತನೆಯ ಬಗ್ಗೆ ಬಿರು ನುಡಿಯಿತು.
ಈ ಹಿಂದೆ ದೆಹಲಿ ಮೀರತ್ ಆರ್‌ಆರ್‌ಟಿಎಸ್ ಜಾರಿಗೆ ಬರುವ ಸಂದರ್ಭದಲ್ಲಿ ಹಣ ನೀಡುವಲ್ಲಿ ವಿಳಂಬ ಮಾಡಿದಾಗ ಕೂಡ ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಜುಲೈ 24ರಂದೇ ಈ ಯೋಜನೆಗಳಿಗೆ ಉಳಿದ ಹಣ ಒದಗಿಸುವಂತೆ ತಾನು ಸರ್ಕಾರಕ್ಕೆ ಸೂಚಿಸಿದ್ದ ವಿಚಾರವನ್ನು ನ್ಯಾಯಾಲಯ ಪ್ರಸ್ತಾಪಿಸಿತು.
ಕೃಷಿ ತ್ಯಾಜ್ಯ ದಹನ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ "ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವವರ ವಿರುದ್ಧ ದಾಖಲಿಸಿಕೊಳ್ಳಲಾದ ಒಟ್ಟು ಪ್ರಕರಣಗಳಲ್ಲಿ ಶೇ 20ರಷ್ಟು ಪ್ರಕರಣಗಳಿಗೆ ಮಾತ್ರ ದಂಡ ವಿಧಿಸಲಾಗಿದೆ" ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಸಣ್ಣ ಹಿಡುವಳಿ ಹೊಂದಿರುವ ರೈತರು ಕೃಷಿ ತ್ಯಾಜ್ಯ ಸುಡುವ ಸಾಧ್ಯತೆ ಹೆಚ್ಚು ಎಂದಿರುವ ನ್ಯಾಯಾಲಯ ಆ ರೈತರು ತ್ಯಾಜ್ಯ ವಿಲೇವಾರಿಗೆ ತಗಲುವ ವೆಚ್ಚ ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಅಡೆತಡೆಗಳಿವೆ ಎಂಬುದನ್ನು ಒಪ್ಪಿತು. ಇದಕ್ಕೆ ಪರಿಹಾರವಾಗಿ ಸರ್ಕಾರವೇ ಹಣ ಕೊಟ್ಟು ಕೃಷಿ ತ್ಯಾಜ್ಯ ಸಂಗ್ರಹಿಸಬೇಕು. ನಂತರ ಪರ್ಯಾಯ ವಿಲೇವಾರಿ ವಿಧಾನಗಳಿಂದ ತಯಾರಾಗುವ ಉತ್ಪನ್ನಗಳಿಂದ ಆ ಮೊತ್ತವನ್ನು ಮರಳಿಪಡೆಯಬಹುದು ಎಂದು ಸೂಚಿಸಿತು.