ದೆಹಲಿ ಗಲಭೆಗೆ ಸಂಬಂಧಿಸಿದ ದ್ವೇಷ ಭಾಷಣ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್, ಆಪ್ ಪಕ್ಷದ ನಾಯಕರನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳಬೇಕೆಂದು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನಿನ್ನೆ (ಸೋಮವಾರ) ನೋಟಿಸ್ ಜಾರಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಧ ಡಜನ್ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಘಟನೆಯಲ್ಲಿ ದೆಹಲಿ ಪೊಲೀಸರು ಮತ್ತು ಬಲ ಪಂಥೀಯರ ಪಾತ್ರದ ಕುರಿತು ತನಿಖೆ ನಡೆಸುವಂತೆ ʼಜಾಮಿಯಾತ್ ಉಲಾಮಾ-ಇ-ಹಿಂದ್ʼ ಮತ್ತಿತರರು ಅರ್ಜಿ ಸಲ್ಲಿಸಿದ್ದರೆ ʼಲಾಯರ್ಸ್ ವಾಯ್ಸ್ʼ ಎಂಬ ಸಂಘಟನೆ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂತಾದವರ ಭಾಷಣಗಳು ಗಲಭೆಗೆ ಪ್ರಚೋದನೆ ನೀಡಿದವು ಎಂದು ದೂರಿತ್ತು.
ಕುತೂಹಲಕಾರಿ ಸಂಗತಿ ಎಂದರೆ ದೆಹಲಿ ಹೈಕೋರ್ಟ್‌ನಿಂದ ನೋಟಿಸ್ ಪಡೆದವರಲ್ಲಿ ಬಾಂಬೆ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ ಜಿ ಕೋಲ್ಸೆ ಪಾಟೀಲ್ ಕೂಡ ಸೇರಿದ್ದಾರೆ. ʼಬಾರ್ ಅಂಡ್ ಬೆಂಚ್ʼ ಜೊತೆ ಮಾತನಾಡಿದ ನ್ಯಾ. ಪಾಟೀಲ್ ತಮ್ಮನ್ನು ಪ್ರಕರಣದಲ್ಲಿ ಒಳಗೊಳ್ಳುವಂತೆ ಮಾಡಲು ಅರ್ಜಿ ಸಲ್ಲಿಸಿರುವುದು ದುರದೃಷ್ಟಕರ ಎಂದಿದ್ದಾರೆ.
ಏಕೆ ತಮ್ಮನ್ನು ಪಕ್ಷಕಾರರನ್ನಾಗಿ ಮಾಡಲು ಯತ್ನಿಸಲಾಗಿದೆ ಎಂದು ತಿಳಿದಿಲ್ಲವಾದರೂ ಸಿಎಎ ವಿರೋಧಿ ಪ್ರತಿಭಟನೆಯ ನಂತರ ಹಿಂದುತ್ವ ಬೆಂಬಲಿಗರ ವಿರುದ್ಧ ಮಾತನಾಡಿದ್ದು ಇದಕ್ಕೆ ಕಾರಣ ಇರಬಹುದು ಎಂದು ನ್ಯಾ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
"ನನ್ನನ್ನು ಪಕ್ಷಕಾರನನ್ನಾಗಿ ಮಾಡಲು ಯಾರೇ ಯತ್ನಿಸಲಿ ಅದು ದುರದೃಷ್ಟಕರ. ಮೊದಲನೆಯದಾಗಿ, ದೆಹಲಿ ಗಲಭೆಯ ಸತ್ಯಶೋಧನಾ ಸಮಿತಿಗೆ ನನ್ನನ್ನು ಆಹ್ವಾನಿಸಲಾಯಿತು. ನಾನು ಗಲಭೆಗ್ರಸ್ತ ಸ್ಥಳಗಳಿಗೆ ಭೇಟಿ ನೀಡಿದೆ. ಹೇಮಂತ್ ಕರ್ಕರೆಯವರು ಬಳಸಿದ್ದ ತರ್ಕವನ್ನು ಬಳಸಿದೆ. ಮುಸ್ಲಿಮರು ಇತರ ಮುಸ್ಲಿಮರಿಗೆ ಹಾನಿ ಮಾಡಲು ಬಯಸುವುದಿಲ್ಲ, ಅವರು ಮುಸ್ಲಿಮರ ಆಸ್ತಿ ನಾಶಮಾಡಲು ಬಯಸುವುದಿಲ್ಲ. ಶೇ 90ರಷ್ಟು ಆಸ್ತಿ ನಷ್ಟವಾಗಿರುವುದು ಮುಸ್ಲಿಮರದ್ದಾಗಿತ್ತು. ಎರಡನೆಯದಾಗಿ, ಸಿಎಎ ಎನ್‌ಆರ್‌ಸಿ ಪ್ರತಿಭಟನೆಯ ವೇಳೆ ದೆಹಲಿಗೆ ಹೋಗಿ ನಾನು ಹಿಂದುತ್ವವಾದಿಗಳ ವಿರುದ್ಧ ಮಾತನಾಡಿದೆ. ಪ್ರತಿಭಟನೆ ನಡೆಸಿದ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದ್ದೆ. ಬಹುಶಃ ಇದು ಪ್ರಕರಣದಲ್ಲಿ ನನ್ನನ್ನು ಒಳಗೊಳ್ಳಲು ಕಾರಣ ಇರಬಹುದು. ಇದರಾಚೆಗೆ ನನಗೇನೂ ಗೊತ್ತಿಲ್ಲ. ಇದಕ್ಕೆ ಕಾರಣ ಏನೆಂಬದು ನನಗೆ ತಿಳಿದಿಲ್ಲ” ಎಂದು ನ್ಯಾ. ಪಾಟೀಲ್ ಹೇಳಿದರು.
ಹೈಕೋರ್ಟ್ ನ್ಯಾಯಮೂರ್ತಿಯಾಗುವ ಮೊದಲು, ನ್ಯಾ. ಪಾಟೀಲ್ ಅವರು ಮನ್ವತ್ ಕೊಲೆ ಪ್ರಕರಣ ಮತ್ತು ಜೋಶಿ-ಅಭ್ಯಾಂಕರ್ ಸರಣಿ ಕೊಲೆಯಂತಹ ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದ ವಕೀಲರಾಗಿದ್ದರು.