ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಆಗ್ರಹ: ನ್ಯಾಯವಾದಿಗಳ ಭಾರೀ ಪ್ರತಿಭಟನೆಗೆ ಸಾಕ್ಷಿಯಾದ ಬೆಳಗಾವಿ ಸುವರ್ಣ ಸೌಧ

ವಕೀಲರ ಪ್ರತಿಭಟನೆ ನ್ಯಾಯಯುತವಾಗಿದೆ. ರಕ್ಷಣೆ ನೀಡಲು ಸರ್ಕಾರ ಬದ್ಧವಾಗಿದೆ. ವಕೀಲರ ರಕ್ಷಣಾ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಭರವಸೆ ನೀಡಿದ ಸಚಿವ ಆರ್‌ ಅಶೋಕ್‌.
Adovcates protest, Belagavi
Adovcates protest, Belagavi
Published on

ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ವಕೀಲರು, ಕರಿಕೋಟು ತೊಟ್ಟ ಬೃಹತ್‌ ಪಡೆ. ಮಾರ್ದನಿಸಿದ ಧಿಕ್ಕಾರದ ಕೂಗು. ನ್ಯಾಯವಾದಿಗಳ ಆಕ್ರೋಶಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಬ್ಯಾರಿಕೇಡ್‌ಗಳು. ತಳ್ಳಾಟ- ನೂಕಾಟ. ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ. ಸರ್ಕಾರಕ್ಕೆ ನೇರವಾಗಿಯೇ ತಟ್ಟಿದ ಪ್ರತಿಭಟನೆಯ ಬಿಸಿ…

ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಆಗ್ರಹಿಸಿ ಇಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಕೀಲರು ವಿಧಾನಸಭೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಕಂಡ ದೃಶ್ಯಗಳು ಇವು.

Also Read
ವಕೀಲೆ ಸಂಗೀತಾ ಮೇಲೆ ಮಾರಣಾಂತಿಕ ಹಲ್ಲೆ: ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಬಾಗಲಕೋಟೆ ವಕೀಲರ ಸಂಘದ ಆಗ್ರಹ

ರಾಜ್ಯದಲ್ಲಿ ಹಲವು ಬಾರಿ ವಕೀಲರ ಮೇಲೆ ಹಲ್ಲೆ, ಹತ್ಯೆ ಘಟನೆಗಳು ವರದಿಯಾಗಿದ್ದ ಹಿನ್ನೆಲೆಯಲ್ಲಿ ನ್ಯಾಯವಾದಿ ಸಮುದಾಯಕ್ಕೆ ರಕ್ಷಣೆ ನೀಡುವ ಕಾಯಿದೆ ಜಾರಿಗೆ ಆಗ್ರಹಿಸಿ ಅಖಿಲ ಭಾರತ ವಕೀಲರ ಒಕ್ಕೂಟ, ರಾಜ್ಯ ವಕೀಲರ ಪರಿಷತ್‌, ಬೆಂಗಳೂರು ವಕೀಲರ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ  ಜಮಾಯಿಸಿದ್ದ ಪ್ರತಿಭಟನಾಕಾರರು ಪೊಲೀಸರು ಇರಿಸಿದ್ದ ಬ್ಯಾರಿಕೇಡ್‌ಗಳನ್ನುಕಿತ್ತೆಸೆದರು.

ಒಂದು ಹಂತದಲ್ಲಿ ಕಾನೂನು ಸಚಿವರ ಮಾಧುಸ್ವಾಮಿ ಅವರು ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾ ನಿರತರು ಪಟ್ಟುಹಡಿದರು. ಅವರ ವಿರುದ್ಧ ಘೋಷಣೆ ಕೂಗಿದರು. ಅವರು ಸ್ಥಳಕ್ಕೆ ಆಗಮಿಸದೇ ಇದ್ದಾಗ ಕೆಲ ವಕೀಲ ಪ್ರತಿನಿಧಿಗಳು ಸೌಧದೊಳಕ್ಕೆ ತೆರಳಿ ಅಹವಾಲು ಸಲ್ಲಿಸಲು ಪೊಲೀಸರು ಅವಕಾಶ ನೀಡಿದರು. ಆದರೆ ಇದನ್ನು ಒಪ್ಪದ ವಕೀಲರು ಬ್ಯಾರಿಕೇಡ್‌ಗಳನ್ನು ದಾಟಿ ನುಗ್ಗಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಕೆಲಕಾಲ ಜಟಾಪಟಿ ನಡೆಯಿತು. ಕೆಲವರು ಸೌಧದ ಮುಖ್ಯ ದ್ವಾರವನ್ನೇರಿ ಧಿಕ್ಕಾರ ಕೂಗಿದ ದೃಶ್ಯಗಳೂ ಕಂಡು ಬಂದವು.

Also Read
ವಕೀಲರ ರಕ್ಷಣಾ ಕಾಯಿದೆ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ವಕೀಲರ ಬೃಹತ್‌ ಮೆರವಣಿಗೆ; ಗೃಹ ಸಚಿವರಿಗೆ ಮನವಿ ಸಲ್ಲಿಕೆ

ಸುವರ್ಣ ಸೌಧದ ಮುಖ್ಯದ್ವಾರದಲ್ಲಿ ಸಚಿವರಾದ ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ, ಆರ್‌ ಅಶೋಕ್‌ ಅವರು ವಕೀಲರ ಅಹವಾಲುಗಳನ್ನು ಆಲಿಸಲು ಮುಂದಾದ ವೇಳೆ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಸಚಿವ ಮಾಧುಸ್ವಾಮಿ ಅವರೇ ತಮ್ಮ ಅಹವಾಲುಗಳನ್ನು ಆಲಿಸಬೇಕು ಎಂದು ಪಟ್ಟುಹಿಡಿದರು. ಈ ವೇಳೆ ಮಾತನಾಡಿದ ಸಚಿವ ಆರ್‌ ಅಶೋಕ್‌ ಅವರು “ವಕೀಲರ ಪ್ರತಿಭಟನೆ ನ್ಯಾಯಯುತವಾಗಿದೆ. ವಕೀಲರಿಗೆ ರಕ್ಷಣೆ ಕೊಡಬೇಕು ಎಂದು ನನಗೂ ಅನ್ನಿಸಿದೆ. ಈ ಕುರಿತು ಮುಖ್ಯಮಂತ್ರಿ ಅವರೊಡನೆ ಮಾತನಾಡಿದ್ದೇನೆ. ರಕ್ಷಣೆ ನೀಡಲು ಸರ್ಕಾರ ಬದ್ಧವಾಗಿದೆ. ವಕೀಲರ ರಕ್ಷಣಾ ಮಸೂದೆಯನ್ನು ಮಂಡಿಸಲಾಗುವುದು” ಎಂದರು.

ಇತ್ತ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದ ಹಲವು ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 4ರ ಬದಿಯ ಸರ್ವೀಸ್‌ ರಸ್ತೆಗೆ ನುಗ್ಗಿದ ಪರಿಣಾಮ ಬೆಂಗಳೂರಿನಿಂದ ಮಹಾರಾಷ್ಟ್ರದ ಪುಣೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಸಂಚಾರ ಬಂದ್‌ ಆಯಿತು.   

Also Read
ವಕೀಲರಿಗೆ ಒಂದು ತಿಂಗಳೊಳಗೆ ಆರೋಗ್ಯ ವಿಮೆ ಜಾರಿ, ವಕೀಲರ ರಕ್ಷಣಾ ಮಸೂದೆ ಮಂಡನೆ: ಕಾನೂನು ಸಚಿವ ಬಸವರಾಜ್‌ ಬೊಮ್ಮಾಯಿ

ಕಾಯಿದೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸ್ಥಳಕ್ಕೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೋರಿದರು. ಪ್ರತಿಭಟನೆಗೆ ಬೆಂಬಲ ಸೂಚಿಸಿದ ಅವರು ಬೇಡಿಕೆಗಳ ಕುರಿತು ಸದನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಸ್ಥಳಕ್ಕೆ ಬಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ “ಕಾಯಿದೆ ಅಂಗೀಕರಿಸಿ ಜಾರಿಗೊಳಿಸಬೇಕಾದದ್ದು ಶಾಸಕರ ಕರ್ತವ್ಯ. ಈ ಕುರಿತಂತೆ ಖಾಸಗಿ ನಿರ್ಣಯ ಮಂಡಿಸಲು ಕೂಡ ತಾವು ಬದ್ಧರಾಗಿದ್ದು ನಮ್ಮ ಪಕ್ಷದ ವತಿಯಿಂದ ವಕೀಲರಿಗೆ ರಕ್ಷಣೆ ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದರು.

Kannada Bar & Bench
kannada.barandbench.com