ವಕೀಲರಿಗೆ ಒಂದು ತಿಂಗಳೊಳಗೆ ಆರೋಗ್ಯ ವಿಮೆ ಜಾರಿ, ವಕೀಲರ ರಕ್ಷಣಾ ಮಸೂದೆ ಮಂಡನೆ: ಕಾನೂನು ಸಚಿವ ಬಸವರಾಜ್‌ ಬೊಮ್ಮಾಯಿ

ಬೆಂಗಳೂರು ವಕೀಲರ ಸಂಘ ಮಂಗಳವಾರ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ವಕೀಲರ ಸ್ಮರಣಾರ್ಥ ಏರ್ಪಡಿಸಿದ್ದ ನುಡಿನಮನ ಮತ್ತು ಸಾಂತ್ವನ ಕಾರ್ಯಕ್ರಮದಲ್ಲಿ ಸಚಿವ ಬಸವರಾಜ್‌ ಬೊಮ್ಮಾಯಿ, ಹೈಕೋರ್ಟ್‌ ಸಿಜೆ ಎ ಎಸ್‌ ಓಕಾ ಭಾಗವಹಿಸಿದ್ದರು.
ವಕೀಲರಿಗೆ ಒಂದು ತಿಂಗಳೊಳಗೆ ಆರೋಗ್ಯ ವಿಮೆ ಜಾರಿ, ವಕೀಲರ ರಕ್ಷಣಾ ಮಸೂದೆ ಮಂಡನೆ: ಕಾನೂನು ಸಚಿವ ಬಸವರಾಜ್‌ ಬೊಮ್ಮಾಯಿ
ಕೋವಿಡ್‌ನಿಂದ ಮೃತಪಟ್ಟ ವಕೀಲರಿಗೆ ಸಚಿವ ಬಸವರಾಜ್‌ ಬೊಮ್ಮಾಯಿ, ಸಿಜೆ ಎ ಎಸ್‌ ಓಕಾ ಮೊಂಬತ್ತಿ ಬೆಳಗಿ ಗೌರವ ಸಲ್ಲಿಸಿದರು

ರಾಜ್ಯದ ವಕೀಲರಿಗೆ ಮುಂದಿನ ಒಂದು ತಿಂಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು. ಮುಂದಿನ ಅಧಿವೇಶನದಲ್ಲಿ ಸದನದಲ್ಲಿ ವಕೀಲರ ರಕ್ಷಣಾ ಮಸೂದೆ ಮಂಡಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಬೆಂಗಳೂರು ವಕೀಲರ ಸಂಘವು ಮಂಗಳವಾರ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ವಕೀಲರ ಸ್ಮರಣಾರ್ಥ ಏರ್ಪಡಿಸಿದ್ದ ನುಡಿನಮನ ಮತ್ತು ಸಾಂತ್ವನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ತುರ್ತು ಸಂದರ್ಭ ಮತ್ತು ಅನಾರೋಗ್ಯದ ಪರಿಸ್ಥಿತಿಗಳಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ಹಣ ವೆಚ್ಚವಾಗುತ್ತದೆ. ಇದನ್ನು ಪರಿಗಣಿಸಿ ವಕೀಲರಿಗೆ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಲಾಗುವುದು. ಈ ಸಂಬಂಧ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ಸಲಹೆ ಪಡೆಯಲಾಗುವುದು” ಎಂದರು.

“ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸುತ್ತಿತ್ತು. ಪ್ರಸಕ್ತ ವರ್ಷದಿಂದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಶೇ. 25ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಲು ಆಡಳಿತ ಮಂಡಳಿ ಒಪ್ಪಿದೆ. ಇದರಿಂದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡಿಗರಿಗೆ ಕಾನೂನು ಶಿಕ್ಷಣ ದೊರೆಯುವಂತಾಗುತ್ತದೆ” ಎಂದರು.

Also Read
ಎಎಬಿ ಸಿದ್ಧಪಡಿಸಿರುವ ಕರ್ನಾಟಕ ವಕೀಲರ ರಕ್ಷಣಾ ಕರಡು ಮಸೂದೆಯ ವಿಶೇಷಗಳೇನು?

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರು ಮಾತನಾಡಿ, “ಕೋವಿಡ್‌ ಮೊದಲೇ ಅಲೆಗಿಂತ ಎರಡನೇ ಅಲೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎರಡನೇ ಅವಧಿಯಲ್ಲಿ 220ಕ್ಕೂ ಹೆಚ್ಚು ರಾಜ್ಯದ ವಕೀಲರು ಕೋವಿಡ್‌ಗೆ ಬಲಿಯಾಗಿದ್ದಾರೆ” ಎಂದರು.

ಕೋವಿಡ್‌ನಿಂದ ಮೃತಪಟ್ಟ ವಕೀಲರ ಕುಟುಂಬದವರಿಗೆ ಇದೇ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಲಾಯಿತು. ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಟಿ ಜಿಶಿವಶಂಕರೇಗೌಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌, ಕಾನೂನು ಇಲಾಖೆಯ ಕಾರ್ಯದರ್ಶಿ ವೆಂಕಟೇಶ್‌ ನಾಯಕ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

No stories found.
Kannada Bar & Bench
kannada.barandbench.com