ಮಾಹಿತಿ ನಿರಾಕರಣೆ ಪ್ರಕರಣ: ದಂಡ ಪಾವತಿ ಪ್ರಶ್ನಿಸಿದ್ದ ಮೇಲ್ಮನವಿ ಹಿಂಪಡೆದ ಮಹೇಶ್‌ ಜೋಶಿ

“ನಿಮ್ಮ ಮೇಲ್ಮನವಿ ಕ್ಷುಲ್ಲಕ ಎಂದು ಕಂಡುಬಂದರೆ, ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು” ಎಂದು ಎಚ್ಚರಿಸಿದ್ದರಿಂದ ಅರ್ಜಿ ಹಿಂಪಡೆದ ಮಹೇಶ್‌ ಜೋಶಿ.
Mahesh Joshi and Karnataka HC
Mahesh Joshi and Karnataka HC
Published on

ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕರಾಗಿದ್ದಾಗ (ಸಾರ್ವಜನಿಕ ಮಾಹಿತಿ ಅಧಿಕಾರಿ) ಮಾಹಿತಿಯೊಂದನ್ನು ನೀಡಲು ನಿರಾಕರಿಸಿದ್ದಕ್ಕೆ ಕೇಂದ್ರ ಮಾಹಿತಿ ಹಕ್ಕುಗಳ ಆಯೋಗವು ತಮಗೆ ₹25 ಸಾವಿರ ದಂಡ ವಿಧಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಮಂಗಳವಾರ ಹಿಂಪಡೆದಿದ್ದಾರೆ.

ಕೇಂದ್ರ ಮಾಹಿತಿ ಹಕ್ಕು ಆಯೋಗದ ಆದೇಶ ಮತ್ತು ಅದನ್ನು ಪುರಸ್ಕರಿಸಿದ ಹೈಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮಹೇಶ್‌ ಜೋಶಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ವಿಜಯ ಕುಮಾರ ಎ. ಪಾಟೀಲ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಮೇಲ್ಮನವಿಯನ್ನು ಪರಿಶೀಲಿಸಿದ ಪೀಠವು ಮಹೇಶ್‌ ಜೋಶಿ ಅವರ ಪರ ವಕೀಲರನ್ನು ಉದ್ದೇಶಿಸಿ “ನಿಮ್ಮ ಈ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ. ಹೀಗಾಗಿ, ಮೇಲ್ಮನವಿ ಹಿಂಪಡೆಯಲು ಅವಕಾಶ ನೀಡುತ್ತಿದ್ದೇವೆ. ಒಂದೊಮ್ಮೆ ವಾದ ಮುಂದುವರಿಸಲು ಬಯಸಿದರೆ, ಅದಕ್ಕೆ ಅವಕಾಶ ನೀಡಲಾಗುವುದು. ವಿಚಾರಣೆ ವೇಳೆ ನಿಮ್ಮ ಮೇಲ್ಮನವಿ ಕ್ಷುಲ್ಲಕ ಎಂದು ಕಂಡುಬಂದರೆ, ಒಂದು ಲಕ್ಷ ರೂಪಾತಿ ದಂಡ ವಿಧಿಸಲಾಗುವುದು” ಎಂದು ಮೌಖಿಕ ಎಚ್ಚರಿಸಿತು.

ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹೇಶ್‌ ಜೋಶಿ ಪರ ವಕೀಲರು, ಮೇಲ್ಮನವಿ ಹಿಂಪಡೆಯುವುದಾಗಿ ತಿಳಿಸಿದರು. ಇದರಿಂದ ಮೇಲ್ಮನವಿ ವಜಾಗೊಳಿಸಿ ವಿಭಾಗೀಯ ಪೀಠ ಆದೇಶಿಸಿತು. ಹೀಗಾಗಿ, ₹25 ಸಾವಿರ ದಂಡ ಪಾವತಿಸುವ ಅನಿವಾರ್ಯತೆ ಮಹೇಶ್‌ ಜೋಶಿ ಅವರಿಗೆ ಎದುರಾಗಿದೆ.

Also Read
ನನ್ನನ್ನು ಬಂಧಿಸಲು ಸರ್ಕಾರದಿಂದ ಎಲ್ಲಾ ಪ್ರಯತ್ನ: ಹೈಕೋರ್ಟ್‌ನಲ್ಲಿ ಮಹೇಶ್‌ ಜೋಶಿ ಅಳಲು

ಪ್ರಕರಣದ ಹಿನ್ನೆಲೆ: ಬೆಂಗಳೂರು ದೂರದರ್ಶನಕ್ಕೆ ಸಂಬಂಧಿಸಿದಂತೆ ಕೆಲ ಮಾಹಿತಿ ಕೋರಿ ಬಿ ಅಶೋಕ್ ಮತ್ತು ಎನ್‌ ಕೆ ಮೋಹನ್ ರಾಮ್‌ ಎಂಬುವವರು 2008-09ರ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ್ದರು. ದೂರದರ್ಶನ ಕೇಂದ್ರದ ಅಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿ/ ಉಪ ಮಹಾ ನಿರ್ದೇಶಕರಾಗಿದ್ದ ಮಹೇಶ್‌ ಜೋಶಿ, ಮಾಹಿತಿ ನೀಡಲು ನಿರಾಕರಿಸಿದ್ದರು. ಜೊತೆಗೆ, ಮಾಹಿತಿ ಒದಗಿಸಲು ₹50,160  ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು. ಅದನ್ನು ಅರ್ಜಿದಾರರು ಕೇಂದ್ರ ಮಾಹಿತಿ ಹಕ್ಕು ಆಯೋಗದಲ್ಲಿ ಪ್ರಶ್ನಿಸಿದ್ದರು. ಮಾಹಿತಿ ನೀಡದ್ದಕ್ಕೆ ಮಹೇಶ ಜೋಶಿ ಅವರಿಗೆ ಆಯೋಗವು ₹25 ಸಾವಿರ ದಂಡ ವಿಧಿಸಿ, ಅದನ್ನು ಅವರ ಸಂಬಳದಲ್ಲಿ ಕಡಿತಗೊಳಿಸಲು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಜೋಶಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್‌ 2023ರ ಏಪ್ರಿಲ್‌ 10ರಂದು ಆದೇಶಿಸಿತ್ತು. ಇದರಿಂದ ಜೋಶಿ 2023ರ ಮೇ 16ರಂದು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Kannada Bar & Bench
kannada.barandbench.com