ಐಟಿ ಕಾರಿಡಾರ್‌ ಭೂಮಿ ಅಕ್ರಮ ಡಿನೋಟಿಫಿಕೇಶನ್‌: ಬಿಎಸ್‌ವೈಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಕೆ ವಿ ಧನಂಜಯ್‌ “ಜಾಮೀನಿಗೆ ನಮ್ಮ ವಿರೋಧವಿಲ್ಲ. ಆದರೆ, ಜಾಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಿರುವ ಕೆಲವು ಹೇಳಿಕೆಗಳಿಗೆ ನಮ್ಮ ಆಕ್ಷೇಪವಿದೆ” ಎಂದರು.
Bangalore City civil court and B S Yediyurappa
Bangalore City civil court and B S Yediyurappa

ಬೆಂಗಳೂರಿನ ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್‌ ಸಿಟಿ ನಡುವೆ ಮಾಹಿತಿ ತಂತ್ರಜ್ಞಾನ (ಐಟಿ) ಕಾರಿಡಾರ್‌ ನಿರ್ಮಿಸಲು ಸ್ವಾಧೀನಪಡಿಸಿಕೊಳ್ಳಲಾಗಿದ್ದ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಬೆಳ್ಳಂದೂರು ನಿವಾಸಿ ವಾಸುದೇವ ರೆಡ್ಡಿ ದೂರಿನ ಮೇರೆಗೆ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು 110ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಯಂತ್‌ ಕುಮಾರ್ ಅವರು ನಡೆಸಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಕೆ ವಿ ಧನಂಜಯ್‌ ಅವರು “ಜಾಮೀನಿಗೆ ನಮ್ಮ ವಿರೋಧವಿಲ್ಲ. ಆದರೆ, ಜಾಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಿರುವ ಕೆಲವು ಹೇಳಿಕೆಗಳಿಗೆ ನಮ್ಮ ಆಕ್ಷೇಪವಿದೆ” ಎಂದರು. ಆಕ್ಷೇಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಹಿರಿಯ ವಕೀಲ ಸಿ ವಿ ನಾಗೇಶ್‌ ನೇತೃತ್ವದ ತಂಡದ ಜೊತೆ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿದ್ದರು.

ತಮ್ಮ ವಿರುದ್ಧ ಮಾಡಲಾಗಿರುವ ಇಡೀ ಆರೋಪವು ದೋಷಪೂರಿತವಾದ, ತಿರುಚಲಾದ, ಕಟ್ಟುಕತೆಯಾಗಿದೆ. ದೂರುದಾರರು ಆರೋಪಿಸಿರುವಂತೆ ಯಾವುದೇ ಸಂದರ್ಭದಲ್ಲಿ ಯಡಿಯೂರಪ್ಪನವರು ಅಪರಾಧದಲ್ಲಿ ಭಾಗಿಯಾಗಿಲ್ಲ. ತಪ್ಪಾಗಿ ಯಡಿಯೂರಪ್ಪನವರನ್ನು ದೂರಿನಲ್ಲಿ ಸೇರ್ಪಡೆ ಮಾಡಲಾಗಿದೆ. ಯಡಿಯೂರಪ್ಪ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 13(1)(ಡಿ) ಅಡಿ ಅಪರಾಧ ಎಸಗಿರುವುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಅಲ್ಲದೇ, ಆರೋಪಿಸಲಾಗಿರುವ ಅಪರಾಧವು ಜೀವಾವಧಿ ಅಥವಾ ಮರಣ ದಂಡನೆ ವಿಧಿಸುವ ಶಿಕ್ಷೆ ಒಳಗೊಂಡಿಲ್ಲ. ಹೀಗಾಗಿ, ನ್ಯಾಯಾಲಯ ವಿಧಿಸುವ ಷರತ್ತುಗಳನ್ನು ಪೂರೈಸಲು ಸಿದ್ಧವಾಗಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಗಿದ್ದ ಬಿ ಎಸ್‌ ಯಡಿಯೂರಪ್ಪ ಅವರು 2006ರ ಜೂನ್‌ 21ರಂದು ಸರ್ಕಾರಿ ಅಧಿಸೂಚನೆಯ ಮೂಲಕ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ 15.30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ ಆರ್‌ ವಿ ದೇಶಪಾಂಡೆ ಅವರನ್ನು ಪ್ರಥಮ ಆರೋಪಿಯನ್ನಾಗಿಯೂ, ಬಿ ಎಸ್‌ ಯಡಿಯೂರಪ್ಪ ಅವರನ್ನು ಎರಡನೇ ಆರೋಪಿಯನ್ನಾಗಿಯೂ ಮಾಡಿ ಒಟ್ಟು ಹತ್ತು ಮಂದಿಯ ವಿರುದ್ಧ ವಾಸುದೇವ ರೆಡ್ಡಿ ದಾವೆ ಹೂಡಿದ್ದರು.

ಇದನ್ನು ಪರಿಗಣಿಸಿದ್ದ ಬೆಂಗಳೂರಿನ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರು 2015ರ ಫೆಬ್ರವರಿ 18ರಂದು ದೇಶಪಾಂಡೆ ಮತ್ತು ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಉಳಿದವರ ವಿರುದ್ಧದ ಆರೋಪವನ್ನು ನ್ಯಾಯಾಲಯ ಕೈಬಿಟ್ಟಿತ್ತು. ಆರ್‌ ವಿ ದೇಶಪಾಂಡೆ ಅವರು ತಮ್ಮ ವಿರುದ್ಧ ಆರೋಪವನ್ನು ನಿರಾಕರಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್‌, 2015ರ ಅಕ್ಟೋಬರ್‌ 9ರಂದು ದೇಶಪಾಂಡೆ ಅವರನ್ನು ಆರೋಪ ಮುಕ್ತಗೊಳಿಸಿತ್ತು.

Also Read
ಐಟಿ ಕಾರಿಡಾರ್‌ ಭೂಮಿ ಅಕ್ರಮ ಡಿನೋಟಿಫಿಕೇಶನ್‌: ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಮನವಿ ಸಲ್ಲಿಸಿದ ಬಿಎಸ್‌ವೈ

ಈ ಮಧ್ಯೆ, ತಮ್ಮ ವಿರುದ್ಧದ ಆರೋಪವನ್ನು ಪ್ರಶ್ನಿಸಿ ಯಡಿಯೂರಪ್ಪ 2015ರ ಫೆಬ್ರವರಿ 18ರಂದು ಹೈಕೋರ್ಟ್‌ ಮೆಟ್ಟಿಲೇರಿದ್ದರಾದರೂ ನ್ಯಾಯಾಲಯವು ಬಿಎಸ್‌ವೈ ಮನವಿಯನ್ನು 2020ರ ಡಿಸೆಂಬರ್‌ 22ರಂದು ವಜಾ ಮಾಡಿತ್ತು. ಹೀಗಾಗಿ, ಇಡೀ ಪ್ರಕರಣದಲ್ಲಿ ಯಡಿಯೂರಪ್ಪ ಏಕೈಕ ಆರೋಪಿಯಾಗಿ ಉಳಿದ್ದಾರೆ. ಈ ನಡುವೆ ಲೋಕಾಯುಕ್ತ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 2021ರ ಫೆಬ್ರವರಿ 23ರಂದು ಅಂತಿಮ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಇದನ್ನು ತಿರಸ್ಕರಿಸಿದ್ದ ನ್ಯಾಯಾಲಯವು ಹೆಚ್ಚುವರಿ ಅಂತಿಮ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ದೂರುದಾರರ ಪ್ರತಿಭಟನಾ ಮನವಿ ಆಲಿಸಿದ್ದ ನ್ಯಾಯಾಲಯವು ಮತ್ತೊಮ್ಮೆ 2021ರ ಸೆಪ್ಟೆಂಬರ್‌ 17ರಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಹೆಚ್ಚುವರಿ ಬಿ ಅಂತಿಮ ವರದಿಯನ್ನು ತಿರಸ್ಕರಿಸಿದ್ದು, ಯಡಿಯೂರಪ್ಪ ವಿರುದ್ಧದ ಆರೋಪವನ್ನು ಪರಿಗಣಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ ಮಾಡಿದೆ.

Kannada Bar & Bench
kannada.barandbench.com