ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ವತಿಯಿಂದ ಮೈಸೂರಿನಲ್ಲಿ ಆಗಸ್ಟ್ 12ರಂದು ನಡೆಯಲಿರುವ ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭಾಗವಹಿಸುವ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಅವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.
ಈ ಸಂಬಂಧ ಕೆಎಸ್‌ಬಿಸಿಯು ನೂತನ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಕೈಬಿಡಲಾಗಿದೆ. ಉಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ ಎಸ್ ಬೋಪಣ್ಣ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಸೇರಿದಂತೆ ಬೇರೆಲ್ಲಾ ಗಣ್ಯರ ಹೆಸರುಗಳನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಹಿಂದೆ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಮುಖ್ಯ ಅತಿಥಿ ಎಂದು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು.
ಆಗಸ್ಟ್ 5ರಂದು ಶಾಸಕ ಸುರೇಶ್ ಕುಮಾರ್ ಅವರು ಡಿ ಕೆ ಶಿವಕುಮಾರ್ ಅವರು ನ್ಯಾಯಮೂರ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವುದಕ್ಕೆ ಆಕ್ಷೇಪಿಸಿದ್ದರು. ಈ ಸಂಬಂಧ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದರು. ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಡಿ ಕೆ ಶಿವಕುಮಾರ್ ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ನ್ಯಾಯಸಮ್ಮವೇ ಎಂದು ಸುರೇಶ್ ಕುಮಾರ್ ಅವರು ಪ್ರಶ್ನಿಸಿದ್ದರು.
ಇದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿ ಕೆ ಶಿವಕುಮಾರ್ ಅವರು “ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧವೂ ನ್ಯಾಯಾಲಯದಲ್ಲಿ ಪ್ರಕರಣಗಳು ಇಲ್ಲವೇ? ಹಾಗಿದ್ದರೂ ಅವರು ನ್ಯಾಯಾಂಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲವೇ? ಸುರೇಶ್ ಕುಮಾರ್ ಅವರು ಮೊದಲು ಅದರ ಬಗ್ಗೆ ಮಾತನಾಡಲಿ” ಎಂದಿದ್ದಾರೆ.
“ಸುರೇಶ್ ಕುಮಾರ್ ಅವರು ಯಡಿಯೂರಪ್ಪನವರ ಬಗ್ಗೆಯೂ ಮಾತನಾಡಬೇಕು. ಬಿಎಸ್‌ವೈ ಮೇಲೆ ಎಷ್ಟು ಪ್ರಕರಣಗಳಿವೆ. ಅವರು ಹಿಂದೆ ನ್ಯಾಯಾಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೋ, ಇಲ್ಲವೋ? ಅದರ ಬಗ್ಗೆ ಮಾತನಾಡಲಿ. ನಾನು ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
“ಕೆಲವು ನ್ಯಾಯಮೂರ್ತಿಗಳು ತಮ್ಮ ಕುಟುಂಬ ಸದಸ್ಯರ ಮದುವೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಅವರಿಗೆ ಮುಜುಗರ ಆಗಬಾರದು, ಇಂಥದ್ದೆಲ್ಲಾ ಬರಬಾರದು ಎಂದು ನಾನೇ ಹೋಗಿಲ್ಲ” ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.